ಮಳೆ ಅನಾಹುತ ತಡೆಗೆ ಅಗತ್ಯ ಕ್ರಮ: ಸಚಿವ ಎಂ.ಬಿ. ಪಾಟೀಲ

KannadaprabhaNewsNetwork |  
Published : Jun 27, 2026, 03:15 AM IST
ನಗರದಲ್ಲಿ ಪ್ರವಾಹ ಉಂಟಾಗದಂತೆ ಕ್ರಮ: ಸಚಿವ ಎಂ.ಬಿ.ಪಾಟೀಲ | Kannada Prabha

ಸಾರಾಂಶ

ವಿಜಯಪುರ ನಗರದಲ್ಲಿ ಪ್ರವಾಹ ನಿಯಂತ್ರಿಸಲು ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳನ್ನು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಡಾ.ಎಂ.ಬಿ. ಪಾಟೀಲ ಶುಕ್ರವಾರ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಳೆದ ವರ್ಷದ ಮಳೆಗಾಲದಲ್ಲಿ ನಗರದಲ್ಲಿ ಪ್ರವಾಹ ಉಂಟಾಗಿದ್ದರಿಂದ ಪ್ರವಾಹ ನಿಯಂತ್ರಣ ನಿಧಿಯಡಿ ಹಾಗೂ ಮಹಾನಗರ ಪಾಲಿಕೆ ವಿಜಯಪುರದಿಂದ ಕೈಗೊಂಡ ಹಲವು ಅಭಿವೃದ್ಧಿ ಕಾರ್ಯಗಳನ್ನು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಡಾ.ಎಂ.ಬಿ. ಪಾಟೀಲ ಶುಕ್ರವಾರ ಪರಿಶೀಲಿಸಿದರು.

ನಗರದ ಶಿವಾಜಿ ವೃತ್ತದಲ್ಲಿ ಕೈಗೊಂಡ ಕಾಮಗಾರಿಗಳನ್ನು ಖುದ್ದು ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಕಳೆದ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರಿಂದ ನಗರದ ಕೆಲವು ಮನೆಗಳಲ್ಲಿ ನೀರು ನುಗ್ಗಿ ಹಾನಿಯಾಗಿತ್ತು. ಇದು ಮತ್ತೆ ಪುನರಾವರ್ತನೆ ಆಗಬಾರದೆಂದೇ ಕೋಟೆ ಗೋಡೆ ಕಂದಕ ಹಾಗೂ ಕಾಲುವೆಗಳ ಹೂಳು ತೆಗೆಯುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಂದಕಗಳಲ್ಲಿ ಮಣ್ಣು ಕುಸಿಯಬಾರೆಂದು ಪಿಚ್ಚಿಂಗ್ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಇದಕ್ಕೆಂದೇ ₹6 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿದೆ. ಬಿಡಿಎ ಹಾಗೂ ಪಾಲಿಕೆಯಿಂದ ಕಾಮಗಾರಿ ಬದಲಾವಣೆ ಮಾಡಿ ಅನುದಾನ ಒದಗಿಸಲಾಗುತ್ತಿದೆ. ಆದಾಗ್ಯೂ ಅಗತ್ಯ ಬಿದ್ದರೆ ನನ್ನ ಮತಕ್ಷೇತ್ರದ ಕೆಲ ಕಾಮಗಾರಿ ಬದಲಾವಣೆ ಮಾಡಿ ಇದಕ್ಕೆ ಅನುದಾನ ಕೊಡಿಸುವುದಾಗಿ ಹೇಳಿದರು. ಇನ್ನೂ ಅನುದಾನದ ಅಗತ್ಯ ಬಿದ್ದರೆ, ಯಾವುದಾದರೂ ಕಂಪನಿ ಸಂಪರ್ಕಿಸಿ, ಆ ಕಂಪನಿಯ ಸಿಎಸ್‌ಆರ್‌ ಅನುದಾನವನ್ನು ಕಾಮಗಾರಿಗೆ ಕೊಡಿಸುವುದಾಗಿ ಸಚಿವರು ಹೇಳಿದರು.

ನಗರದಲ್ಲಿ ಅದೆಷ್ಟೇ ಮಳೆಯಾದರೂ ನಗರ ಭಾಗದಲ್ಲಿ ಪ್ರವಾಹ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಕಂದಕ ಸೇರಿದಂತೆ ಇತರೆ ಸ್ಥಳಗಳಲ್ಲಿ ಶಾಶ್ವತವಾದ ಕಾಮಗಾರಿ ಮಾಡಲಾಗುತ್ತಿದೆ. ನಗರ ಭಾಗದ ರಸ್ತೆಗಳ ಕಾಮಗಾರಿಗೆ ₹150 ಕೋಟಿ ಮಂಜೂರು ಮಾಡಲಾಗಿದೆ. ಈ ಮೊತ್ತದಲ್ಲಿ ರಸ್ತೆಗಳ ಕಾಮಗಾರಿಗಳು ನಡೆಯುತ್ತವೆ ಎಂದ ಅವರು, ನಗರದಲ್ಲಿ ಪ್ರವಾಹ ತಡೆ ಕಾಮಗಾರಿ ಕೈಗೆತ್ತಿಕೊಂಡಿದ್ದಕ್ಕೆ ಪಾಲಿಕೆ ಸದಸ್ಯರು ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ಸಚಿವರು ಹೇಳಿದರು.

ಶಿವಾಜಿ ವೃತ್ತದಿಂದ ಬಿದರಿ ಆಸ್ಪತ್ರೆವರೆಗೆ 3 ಕಿ.ಮೀ ಕಾಮಗಾರಿ ತೆಗೆದುಕೊಳ್ಳಲು ಸೂಚಿಸಲಾಗಿದೆ. ನಗರದ ಹೊರ ಭಾಗದಿಂದ ನೀರು ಒಳಗಡೆ ಬರುವುದನ್ನು ತಪ್ಪಿಸಲಿಕ್ಕೆ ಪ್ರಯತ್ನ ಮಾಡುತ್ತಿದ್ದೇವೆ. ಸ್ವತಃ ಜಿಲ್ಲಾಧಿಕಾರಿ, ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ಈ ಕಾಮಗಾರಿ ಉಸ್ತುವಾರಿ ನೋಡುತ್ತಿದ್ದಾರೆ ಎಂದವರು ತಿಳಿಸಿದರು.

ನಗರದಲ್ಲಿ ಒಟ್ಟು ₹168 ಕೋಟಿ ವೆಚ್ಚದ ಕಾಮಗಾರಿಗಳನ್ನು ನಗರದಲ್ಲಿ ಪ್ರಗತಿಯಲ್ಲಿದ್ದು, ಇಷ್ಟು ಮೊತ್ತದ ಕಾಮಗಾರಿಗಳು ಪೂರ್ಣಗೊಂಡರೆ, ನಗರದಲ್ಲಿ ಪ್ರವಾಹ ಬಂದರೂ ಸಮಸ್ಯೆಯಾಗದು. ಜೊತೆಗೆ ಬಿಡಿಎ ಮತ್ತು ಪಾಲಿಕೆ ಅನುದಾನದಲ್ಲಿ ಕಾಮಗಾರಿ ಭರದಿಂದ ನಡೆದಿದೆ. ಶಿವಾಜಿ ವೃತ್ತದಿಂದ ರಾಮನಗರದ ವರೆಗೆ ಕೋಟೆ ಗೋಡೆ ಕಂದಕ ಸ್ವಚ್ಛತಾ ಕಾರ್ಯ ಭರದಿಂದ ನಡೆದಿದ್ದು, ಎಲ್ಲವೂ ಪ್ರಗತಿಯಲ್ಲಿವೆ. ಒಟ್ಟು ₹514.80 ಲಕ್ಷ ಮೊತ್ತದ ಕಾಮಗಾರಿಗಳು ಪೂರ್ಣಗೊಂಡಿದ್ದು, ₹168.45 ಕೋಟಿ ಮೊತ್ತದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಬಳಿಕ ಮನ್ನತ್ ಹಾಲ್ ಬಳಿ, ನವಭಾಗ ರಸ್ತೆ, ಕಸ್ತೂರಿ ಕಾಲೋನಿಯಲ್ಲಿನ ಕಾಮಗಾರಿಗಳನ್ನು ಸಚಿವರು ವೀಕ್ಷಿಸಿದರು.

ಈ ವೇಳೆ ಮಹಾನಗರ ಪಾಲಿಕೆ ಮೇಯರ್‌ ಮಡಿವಾಳಪ್ಪ ಕರಡಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಶಿವರುದ್ರ ಬಾಗಲಕೋಟ, ರಾಹುಲ ಜಾಧವ, ದಿನೇಶ ಹಳ್ಳಿ, ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಯೋಗಪತಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಿ
ಮಹಿಳಾ ವಿವಿಯಲ್ಲಿ ನೇಮಕಾತಿ ಮರು ಪರಿಶೀಲಿಸಲು ಮನವಿ