ನೀರು ಶುದ್ಧೀಕರಣದ ವೇಳೆ ಕ್ಲೋರಿನ್ ಸೋರಿಕೆ ನಿಲ್ಲಿಸಲು ಅಗತ್ಯ ಕ್ರಮ

KannadaprabhaNewsNetwork |  
Published : Oct 29, 2025, 01:15 AM IST
28ಕೆಎಂಎನ್ ಡಿ16,17 | Kannada Prabha

ಸಾರಾಂಶ

ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ಕ್ಲೋರಿನ್ ಸೋರಿಕೆಯಾದರೆ ತಕ್ಷಣ ಯಾವ ರೀತಿ ಕ್ರಮ ಕೈಗೊಳ್ಳಬೇಕು, ಮುಂಜಾಗ್ರತೆ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಯಿತು. ಸೋರಿಕೆ ತಕ್ಷಣ ನಿಲ್ಲಿಸಿ ಆ ಪ್ರದೇಶವನ್ನು ಸುರಕ್ಷಿತವಾಗಿಡಲು ಸಜ್ಜುಗೊಳಿಸಬೇಕು ಎಂಬ ವಿಷಯಕ್ಕೆ ಅಣಕು ಪ್ರದರ್ಶನ.

ಕನ್ನಡಪ್ರಭ ವಾರ್ತೆ ಹಲಗೂರು

ನೀರು ಶುದ್ಧೀಕರಣದ ವೇಳೆ ಆಕಸ್ಮಿಕವಾಗಿ ಅನಾಹುತ ಸಂಭವಿಸಿದಾಗ ಕ್ಲೋರಿನ್ ಸೋರಿಕೆ ನಿಲ್ಲಿಸಲು ಅಗತ್ಯ ಕ್ರಮ ವಹಿಸಲಾಗುತ್ತಿದೆ ಎಂದು ತಾಲೂಕು ದಂಡಾಧಿಕಾರಿ ಲೋಕೇಶ್ ತಿಳಿಸಿದರು.

ಸಮೀಪದ ತೊರೆಕಾಡನಹಳ್ಳಿಯ ಬೆಂಗಳೂರು ನೀರು ಸರಬರಾಜು ಜಲ ಮಂಡಳಿಯ 4ನೇ ಘಟಕದಲ್ಲಿ ನೀರಿನ ಶುದ್ಧೀಕರಣ ವೇಳೆಯಲ್ಲಿ ಕ್ಲೋರಿನ್ ಸೋರಿಕೆಯಾದಾಗ ಕೈಗೊಳ್ಳುವ ಮುಂಜಾಗ್ರತೆ ಕ್ರಮಗಳ ಕುರಿತು ಎಂಬ ವಿಷಯವನ್ನಾಧರಿಸಿ ಜಿಲ್ಲಾಡಳಿತ ಮತ್ತು ಇತರ ಇಲಾಖೆಗಳ ಸಹಯೋಗದೊಂದಿಗೆ ರಾಸಾಯನಿಕ ವಿಪತ್ತು ಅಣಕು ಪ್ರದರ್ಶನದಲ್ಲಿ ಮಾಹಿತಿ ನೀಡಿದರು.

ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ಕ್ಲೋರಿನ್ ಸೋರಿಕೆಯಾದರೆ ತಕ್ಷಣ ಯಾವ ರೀತಿ ಕ್ರಮ ಕೈಗೊಳ್ಳಬೇಕು, ಮುಂಜಾಗ್ರತೆ ಕ್ರಮಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಯಿತು. ಸೋರಿಕೆ ತಕ್ಷಣ ನಿಲ್ಲಿಸಿ ಆ ಪ್ರದೇಶವನ್ನು ಸುರಕ್ಷಿತವಾಗಿಡಲು ಸಜ್ಜುಗೊಳಿಸಬೇಕು ಎಂಬ ವಿಷಯಕ್ಕೆ ಅಣಕು ಪ್ರದರ್ಶನ ನಡೆಯಿತು.

ಮೊದಲಿಗೆ ಕ್ಲೋರಿನ್ ಸೋರಿಕೆಯಾದಾಗ ಸೈರನ್ ಮೊಳಗಿಸಿ ಎಕ್ಸಿಕ್ಯೂಟಿವ್ ಆಫೀಸರ್ ಗೆ ತಿಳಿಸಲಾಗುತ್ತದೆ. ಎರಡನೇ ಸೈರನ್ ಘಟನೆ ತೀವ್ರತೆ ಬಗ್ಗೆ ಅರಿವು ಮೂಡಿಸುತ್ತದೆ. ಆಗ ಅಗ್ನಿಶಾಮಕ ದಳ ಮತ್ತು ವೈದ್ಯಕೀಯ ಇಲಾಖೆಗೆ ತಿಳಿಸುತ್ತಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಅದನ್ನು ನಿಯಂತ್ರಿಸಲು ಅಸಾಧ್ಯವಾದಾಗ ನಮ್ಮ ಆಡಳಿತ ಇಲಾಖೆ ಎಸ್‌ಟಿಆರ್ ಎಫ್ ಮತ್ತು ಎನ್ ಡಿ ಆರ್ ಎಫ್ ಇಲಾಖೆಗೆ ತಿಳಿಸುತ್ತಾರೆ. ಬಳಿಕ ಪ್ರದೇಶವನ್ನು ಕೋಲ್ಡ್ , ವಾರ್ಮ್, ಹಾಟ್ ಜೋನ್ಎಂ ದು ವಿಂಗಡಿಸಿ ಪರಿಸ್ಥಿತಿ ಸುಧಾರಿಸುತ್ತಾರೆ ಎಂದು ವಿವರಿಸಿದರು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಇಇ ನರೇಶ್ ಮಾತನಾಡಿ, ಅಣಕು ಪ್ರದರ್ಶನದಿಂದ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ. ಒಂದು ವೇಳೆ ಅನಾಹುತ ಸಂಭವಿಸಿದಾಗ ಹೇಗೆ ಎದುರಿಸಬೇಕು ಎಂಬುದರ ಬಗ್ಗೆ ಇಂದು ತಿಳಿಸುವ ಪಾಠವಾಗಿದೆ ಎಂದರು.

ಮೊದಲಿಗೆ ತುರ್ತು ಕರೆ 112ಕ್ಕೆ ಫೋನ್ ಮಾಡಿದಾಗ ಅವರು ಆ್ಯಂಬುಲೆನ್ಸ್ 108ಕ್ಕೆ ಕರೆ ಮಾಡಿ ವೈದ್ಯ ಸಿಬ್ಬಂದಿ ಜೊತೆ ಸ್ಥಳಕ್ಕೆ ಸಕಾಲಕ್ಕೆ ಕಳಿಸಿದರು. ಇದರಿಂದ ಯಾವುದೇ ಅನಾಹುತವಾದರೂ ನಮಗೆ ಸಕಾಲಕ್ಕೆ ತ್ವರಿತ ನೆರವು ಸಿಗುತ್ತದೆ ಎಂಬ ಭರವಸೆ ಮೂಡಿಸಿದರು. ವೈದ್ಯಕೀಯ ನೆರವು ಸಿಗುವ ಮೊದಲು ನಾವು ಹೇಗೆ ಪ್ರಥಮ ಚಿಕಿತ್ಸೆ ನಡೆಸಬೇಕು ಎಂಬುದರ ಬಗ್ಗೆ ತಿಳಿದು ಕೊಳ್ಳಬೇಕು ಎಂದರು.

ನಮ್ಮ ಪಕ್ಕದ ವ್ಯಕ್ತಿ ಅನಾರೋಗ್ಯಕ್ಕೆ ಒಳಗಾದರೆ ಮೊದಲು ಪ್ರಥಮ ಚಿಕಿತ್ಸೆ ಹೇಗೆ ನೀಡಬೇಕು ಎಂಬ ಅರಿವು ಬರಬೇಕು. ಇದೆಲ್ಲವನ್ನು ನೀವು ಹಂತ ಹಂತವಾಗಿ ತಿಳಿದು ಕಾರ್ಯ ಪ್ರವೃತ್ತರಾಗಬೇಕು ಎಂದರು.

ರಾಘವೇಂದ್ರ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಈ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಅಣಕು ಪ್ರದರ್ಶನದ ಮೂಲಕ ಕಾರ್ಯ ವೈಖರಿಯನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದೀರಿ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ, ಜಿಲ್ಲಾ ಆಡಳಿತ, ಅಗ್ನಿಶಾಮಕ ದಳ , ಪೊಲೀಸ್ ಇಲಾಖೆ , ಆ್ಯಂಬುಲೆನ್ಸ್, ಎನ್‌ಡಿಆರ್ ಎಫ್ ಇಲಾಖೆ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮಳವಳ್ಳಿ ಡಿವೈಎಸ್ಪಿ ಯಶವಂತ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ಲೋಕೇಶ್, ಹಲಗೂರು ಆಸ್ಪತ್ರೆ ವೈದ್ಯಾಧಿಕಾರಿ ಸೌಮ್ಯಶ್ರೀ ಮತ್ತು ಸಿಬ್ಬಂದಿ, ಆರ್ ಐ ಮಧುಸೂದನ್ ಮತ್ತು ಸಿಬ್ಬಂದಿ, ಜಲಮಂಡಳಿಯ ಕಾರ್ಯ ನಿರ್ವಾಹಕ ಅಭಿಯಂತರ ಬಿ.ಕೆ. ನರೇಶ್, ಮಹಮ್ಮದ್ ಆಸಿಫ್, ಆಮೆಯ ಜೋಶಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಂ.ರಘು, ಕೆ.ಎಸ್.ಕಾರ್ತಿಕ್ , ಕಿರಿಯ ಅಭಿಯಂತರರಾದ ಬಿ.ಎಸ್.ವಿನೋದ್ ರಾಜ್, ಜಿ.ಆರ್.ಚೇತನ್, ಪ್ರೀತಮ್, ತನುಶ್ರೀ, ಶಶಿರೇಖಾ , ವಾಸಿಂ ಉಲ್ಲಾ ಖಾನ್ ಸೇರಿದಂತೆ ಇತರರು ಇದ್ದರು.

PREV

Recommended Stories

ನವೆಂಬರ್‌ ಕ್ರಾಂತಿ ಬಗ್ಗೆ ಚರ್ಚಿಸಿ ದಣಿವು ಮಾಡ್ಕೊಬೇಡಿ - ಶಿವಕುಮಾರ್‌ ಸಲಹೆ
ಹಣೆಯಲ್ಲಿ ಬರೆದಿದ್ದರೆ ಡಿಕೆಶಿ ಸಿಎಂ ಆಗ್ತಾರೆ ಇಲ್ದಿದ್ರೆ ಇಲ್ಲ : ಡಿಕೆಸು