ಕನ್ನಡಪ್ರಭ ವಾರ್ತೆ ಮಡಿಕೇರಿ
ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು, ದಸರಾ ಸಮಿತಿ ಹಾಗೂ ಮಂಟಪ ಉಸ್ತುವಾರಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಸಲಹೆ ಮತ್ತು ಅಭಿಪ್ರಾಯಗಳನ್ನು ಸಂಗ್ರಹಿಸಿ ಮಾತನಾಡಿದರು. ಮಡಿಕೇರಿ ಹಾಗೂ ಗೋಣಿಕೋಪ್ಪ ದಸರಾ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ದೇಶ ವಿದೇಶದ ಮಟ್ಟದಲ್ಲಿ ಖ್ಯಾತಿಯನ್ನು ಹೊಂದಿದೆ. ಈ ಬಾರಿಯ ಮಡಿಕೇರಿ - ಗೋಣಿಕೊಪ್ಪ ದಸರಾವನ್ನು ವೈಭವದಿಂದ ಆಚರಿಸಲು ಅಗತ್ಯ ತಯಾರಿ ನಡೆಸಿಕೊಳ್ಳಬೇಕು. ಸಮಿತಿ ಹಾಗೂ ದಶಾ ಮಂಟಪಗಳ ಸಮಿತಿ ಸಭೆಯನ್ನು ನಡೆಸಿ ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸರ್ಕಾರದ ವತಿಯಿಂದ ಹೆಚ್ಚಿನ ಅನುದಾನ ದೊರಕಿಸಿಕೊಡಲು ನಾವೆಲ್ಲರೂ ಪ್ರಯತ್ನ ನಡೆಸಿದ್ದೇವೆ ಎಂದರು.
ರಸ್ತೆ ದುರಸ್ತಿ ಕಾರ್ಯ ನಡೆಸಿ: ದಸರಾ ಸಂಭ್ರಮದಲ್ಲಿ ಭಾಗವಹಿಸಲು ಸುಮಾರು ನಾಲ್ಕು ಲಕ್ಷ ಜನರು ಜಿಲ್ಲೆಗೆ ಭೇಟಿ ನೀಡುತ್ತಾರೆ. ಜಿಲ್ಲೆಯನ್ನು ಸಂಪರ್ಕಿಸುವ ರಸ್ತೆಗಳು ಹಾಗೂ ನಗರದಲ್ಲಿನ ರಸ್ತೆಗಳನ್ನು ಸುಸ್ಥಿಯಲ್ಲಿಡುವ ನಿಟ್ಟಿನಲ್ಲಿ ಕಾಮಗಾರಿಗಳನ್ನು ಚುರುಕುಗೊಳಿಸಬೇಕು. ರಸ್ತೆ ಗುಂಡಿಗಳನ್ನು ಮುಚ್ಚುವ ಕಾರ್ಯವನ್ನು ಶೀಘ್ರವೇ ಕೈಗೊಳ್ಳಬೇಕು. ಸೆಪ್ಟೆಂಬರ್ ತಿಂಗಳ ಅಂತ್ಯದ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸಚಿವರು ಸೂಚಸಿದರು.ಪ್ರತಿ ಬಾರಿ ದಸರಾ ಹಬ್ಬದ ಸಂದರ್ಭದಲ್ಲಿ ಹೆಚ್ಚಿನ ಅನುದಾನ ವೇದಿಕೆ ನಿರ್ಮಾಣಕ್ಕೆ ವ್ಯಯವಾಗುತ್ತಿದೆ. ಹಾಗಾಗಿ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮಗಳಿಗೆ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಶಾಶ್ವತ ವೇದಿಕೆ ನಿರ್ಮಾಣ ಅಗತ್ಯವಾಗಿದೆ. ಈ ಬಾರಿಯ ದಸರಾ ನಂತರ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ, ಶಾಸಕ ಮಂಥರ್ ಗೌಡ, ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಮಡಿಕೇರಿ ಹಾಗೂ ಗೊಣಿಕೊಪ್ಪ ದಸರಾ ಸಮಿತಿ ಸದಸ್ಯರು, ದಶಾಮಂಟಪಗಳ ಪ್ರಮುಖರು ಸೇರಿದಂತೆ ಸಮಿತಿಗಳ ಸದಸ್ಯರು ಪಾಲ್ಗೊಂಡಿದ್ದರು.
ಈ ವರ್ಷದಿಂದ ‘ಕಾಫಿ ದಸರಾ’ಶಾಸಕ ಡಾ. ಮಂತರ್ ಗೌಡ ಪ್ರಯತ್ನದ ಫಲವಾಗಿ ಈ ವರ್ಷದಿಂದ ಮಡಿಕೇರಿ ದಸರಾ ಉತ್ಸವಕ್ಕೆ ಕಾಫಿ ದಸರಾ ಸೇರ್ಪಡೆ ಆಗಿದೆ. ಕೊಡಗು ಕಾಫಿ ಜಿಲ್ಲೆ ಆಗಿರುವುದರಿಂದ ಕಾಫಿ ಬೆಳೆಗಾರರಿಗೆ ಸೂಕ್ತ ಮಾಹಿತಿ, ಕಾಫಿಯ ಪ್ರಯೋಜನ, ತೋಟಗಾರಿಕಾ ಕೃಷಿ ಮಾಹಿತಿ ಸಂಬಂಧಿತ 20 ಮಳಿಗೆಗಳು ಕಾಫಿ ದಸರಾ ದಲ್ಲಿ ಇರುತ್ತವೆ. ಮೊದಲ ದಿನ ಕಾಫಿ ಕೃಷಿ ಬಗ್ಗೆ ಮಾಹಿತಿ ಕಾರ್ಯಾಗಾರ ಕೂಡ ಜರುಗಲಿದ್ದು ಕರ್ನಾಟಕ ಬೆಳೆಗಾರರ ಒಕ್ಕೂಟ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್, ಕಾಫಿ ಮಂಡಳಿ ಸಹಕಾರವನ್ನು ಕೊಡಲಾಗುತ್ತದೆ. ಅಕ್ಟೋಬರ್ 6 ಮತ್ತು 7 ರಂದು ಈ ಕಾರ್ಯಕ್ರಮ ಆಯೋಜಿಸಲಾಗುವುದು. ಕಾಫಿ ಕೃಷಿಕರಿಗೆ ಸೂಕ್ತ ಮಾಹಿತಿ ನೆರವು ದೊರಕಬೇಕು ಎಂಬ ನಿಟ್ಟಿನಲ್ಲಿ ಶಾಸಕ ಮಂತರ್ ಗೌಡ ಅವರ ವಿಶೇಷ ಪ್ರಯತ್ನ ಈ ಕಾಫಿ ದಸರಾ ಆಗಿದೆ .ಮಕ್ಕಳ ದಸರಾ 11 ವರ್ಷ, ಮಹಿಳಾ ದಸರಾ 7 ವರ್ಷ, ಜನಪದ ದಸರಾ 5 ವರ್ಷ ಪೂರೈಸುತ್ತಿದ್ದು, ಮಡಿಕೇರಿ ದಸರಾಕ್ಕೆ ಮತ್ತೊಂದು ಪ್ರಯತ್ನವಾಗಿ ಕಾಫಿ ದಸರಾ ಸೇರ್ಪಡೆಯಾಗುತ್ತಿದೆ.