ಹಾನಿಗೊಳಗಾದ ಮನೆಗಳಿಗೆ ಅಗತ್ಯ ಪರಿಹಾರ

KannadaprabhaNewsNetwork |  
Published : Jun 14, 2025, 02:43 AM IST
13ಎಚ್‌ಯುಬಿ21ಕುಂದಗೋಳ ತಾಲೂಕಿನ ಹಂಚಿನಾಳ-ದ್ಯಾವನೂರ ನಡುವಿನ ಹಳ್ಳವನ್ನು ಸಚಿವ ಸಂತೋಷ ಲಾಡ್‌ ಪರಿಶೀಲಿಸಿದರು. | Kannada Prabha

ಸಾರಾಂಶ

ಹಾನಿಗೊಳಗಾದ ಪ್ರದೇಶದಲ್ಲಿ ಜಿಲ್ಲಾಡಳಿತದಿಂದ ಪರಿಹಾರ ಕಾರ್ಯಗಳು ನಡೆಯುತ್ತಿವೆ. ಇನ್ನೂ ಮಳೆ ಹೆಚ್ಚಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಜಾಗರೂಕರಾಗಬೇಕಿದೆ. ಸರ್ಕಾರ, ಜಿಲ್ಲಾಡಳಿತ ನೀಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡಬೇಕು.

ಕುಂದಗೋಳ: ಕಳೆದ 2-3 ದಿನದಿಂದ ಜಿಲ್ಲಾದ್ಯಂತ ನಿರಂತರವಾಗಿ ಸುರಿದ ಮಳೆಗೆ ಅಣ್ಣಿಗೇರಿ, ನವಲಗುಂದ ಹಾಗೂ ಕುಂದಗೋಳ ತಾಲೂಕಿನ 130 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಹಾನಿಯಾದ ಮನೆಗಳಿಗೆ ಎಸ್.ಡಿ.ಆರ್.ಎಫ್. ನಿಯಮಾವಳಿಗಳ ಅನುಸಾರ ಪರಿಶೀಲಿಸಿ, ಪರಿಹಾರ ನೀಡಲಾಗುತ್ತದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಕುಂದಗೋಳ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹಾನಿಗೊಳಗಾದ ಪ್ರದೇಶದಲ್ಲಿ ಜಿಲ್ಲಾಡಳಿತದಿಂದ ಪರಿಹಾರ ಕಾರ್ಯಗಳು ನಡೆಯುತ್ತಿವೆ. ಇನ್ನೂ ಮಳೆ ಹೆಚ್ಚಾಗುವ ಸಾಧ್ಯತೆಯಿದ್ದು, ಸಾರ್ವಜನಿಕರು ಜಾಗರೂಕರಾಗಬೇಕಿದೆ. ಸರ್ಕಾರ, ಜಿಲ್ಲಾಡಳಿತ ನೀಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡಬೇಕು. ಕಟ್ಟಿಹಳ್ಳ ದಾಟುವಾಗ ಟ್ರ್ಯಾಕ್ಟರ್ ಉರುಳಿ ಬಿದ್ದು ಶಿವಯ್ಯ ಬಸಯ್ಯ ವಟ್ನಾಳಮಠ ನಿಧನರಾಗಿದ್ದಾರೆ. ಎಚ್ಚರಿಕೆ ವಹಿಸಿದ್ದರೆ ಒಂದು ಜೀವ ಉಳಿಯುತ್ತಿತ್ತು. ಇನ್ನೂ ಇಬ್ಬರಿಗೆ ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಸಕರು, ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಸರ್ಕಾರದ ವತಿಯಿಂದ ಮೃತ ಕುಟುಂಬಸ್ಥರಿಗೆ ₹5 ಲಕ್ಷ ಪರಿಹಾರ ನೀಡಲಾಗುತ್ತದೆ ಎಂದರು.

ಬೈಕ್‌, ಕಾರ್, ಬಸ್ ಸೇರಿದಂತೆ ಯಾವುದೇ ರೀತಿಯ ವಾಹನಗಳು ಹಳ್ಳ, ಸೇತುವೆಗಳನ್ನು ದಾಟುವಾಗ ಎಚ್ಚರಿಕೆ ವಹಿಸಬೇಕು. ಯಾವುದೇ ರೀತಿಯ ದುಸ್ಸಾಹಸಕ್ಕೆ ಸಾರ್ವಜನಿಕರು ಮುಂದಾಗಬಾರದು. ನೀರು ಹರಿಯುವ ಪ್ರಮಾಣ ಇಳಿಮುಖವಾದ ನಂತರ ಜನರು ಹಳ್ಳ, ಸೇತುವೆಗಳನ್ನು ದಾಟಬೇಕು ಎಂದರು.

ಸರ್ಕಾರ ಹಂತದಲ್ಲಿ ಮೂರು ತಿಂಗಳ ಹಿಂದೆ ಕಟ್ಟಿಹಳ್ಳ ಸೇತುವೆ ಬಗ್ಗೆ ಶಾಸಕರು, ಇಲಾಖೆ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಶೀಘ್ರಗತಿಯಲ್ಲಿ ಸೇತುವೆ ನಿರ್ಮಾಣ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬೆಣ್ಣಿಹಳ್ಳ, ತುಪ್ಪರಿ ಹಳ್ಳಗಳ ನೀರು ಹೊಲಕ್ಕೆ ನುಗ್ಗಿ ರೈತರಿಗೆ ಸಾಕಷ್ಟು ಅನಾನುಕೂಲವಾಗಿದೆ. ಈ ಕುರಿತು ಪರಿಶೀಲನೆ ನಡೆಸಿ ಸರ್ಕಾರದಿಂದ ಪರಿಹಾರ ಕೊಡಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಬೆಳೆ ಹಾನಿಯಾದ ರೈತರ ಮನವಿ ಪರಿಶೀಲಿಸಿ ನಿಯಮಾನುಸಾರ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಮೃತ ಕುಟುಂಬಸ್ಥರಿಗೆ ₹5 ಲಕ್ಷ ಪರಿಹಾರ: ಪ್ರವಾಹಕ್ಕೆ ಸಿಲುಕಿ ಮೃತರಾದ ಶಿವಯ್ಯ ವಟ್ನಾಳಮಠ ಮನೆಗೆ ಸಚಿವ ಸಂತೋಷ ಲಾಡ್‌ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ಇದೇ ಸಂದರ್ಭದಲ್ಲಿ ಸರ್ಕಾರದಿಂದ ₹5 ಲಕ್ಷ ಪರಿಹಾರ ಬಿಡುಗಡೆ ಮಾಡಿದ ಆದೇಶದ ಪ್ರತಿಯನ್ನು ಕುಟುಂಬಸ್ಥರಿಗೆ ವಿತರಿಸಿದರು.

ಗಾಯಾಳುವಿಗೆ ಆರ್ಥಿಕ ನೆರವು: ಕಟ್ಟಿಹಳ್ಳದ ಟ್ರ್ಯಾಕ್ಟರ್ ದುರಂತದಲ್ಲಿ ಸಿಲುಕಿ ಗಾಯಗೊಂಡು ಕುಂದಗೋಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಾಸು ಶಿವಪ್ಪ ಹೈಬತಿ ಆರೋಗ್ಯ ವಿಚಾರಿಸಿದ ಸಚಿವರು, ಸ್ವತಃ ₹20 ಸಾವಿರ ಹಣವನ್ನು ವಿತರಿಸಿದರು. ಅಲ್ಲದೇ ವೈದ್ಯರಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು.

ಇದೇ ಸಂದರ್ಭದಲ್ಲಿ ಕುಂದಗೋಳ ತಾಲೂಕು ಆಸ್ಪತ್ರೆ, ಹಂಚಿನಾಳ ಮತ್ತು ದೇವನೂರ ಮಧ್ಯೆ ಬರುವ ಕಟ್ಟಿ ಹಳ್ಳ, ದೇವನೂರ ಮತ್ತು ಕಮಡೊಳ್ಳಿ ಮಧ್ಯೆ ಬರುವ ಬೆಣ್ಣಿಹಳ್ಳ, ಹಿರೇನರ್ತಿ ರಸ್ತೆ ಹಾಗೂ ಸರ್ಕಾರಿ ಪ್ರೌಢಶಾಲೆ, ಮುಳ್ಕೊಳ್ಳಿ ಗ್ರಾಮದ ರಸ್ತೆ, ಬೆಳೆ ಹಾನಿ ವೀಕ್ಷಣೆ ಮಾಡಿದರು.

ಶಾಸಕ ಎಂ.ಆರ್. ಪಾಟೀಲ, ಮಾಜಿ ಶಾಸಕರಾದ ಎಂ.ಎಸ್. ಅಕ್ಕಿ, ಕುಸುಮಾವತಿ ಶಿವಳ್ಳಿ, ಜಿಪಂ ಸಿಇಒ ಭುವನೇಶ ಪಾಟೀಲ, ಎಡಿಸಿ ಗೀತಾ ಸಿ.ಡಿ, ಡಿವೈಎಸ್ಪಿ ವಿನೋದ ಮುಕ್ತೇದಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತಹಸೀಲ್ದಾರ್ ರಾಜು ಮಾವರಕರ, ಡಿಎಚ್‌ಒ ಡಾ. ಹೊನಕೇರಿ, ಹಿರಿಯ ಕಾರ್ಮಿಕ ನಿರೀಕ್ಷಕಿ ರಜನಿ ಹಿರೇಮಠ, ಕುಂದಗೋಳ ತಾಲೂಕು ವೈದ್ಯಾಧಿಕಾರಿ ಡಾ. ಸೋಫಿಯಾ, ಸಿಪಿಐ ನವೀನ ಜಕಲಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖಂಡರು, ರೈತರು, ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''