ತೊಗರಿ ಬೆಳೆಗೆ ನೆಟೆರೋಗ, ಆತಂಕದಲ್ಲಿ ರೈತ

KannadaprabhaNewsNetwork |  
Published : Sep 09, 2024, 01:34 AM IST
ಪೋಟೊ8ಕೆಎಸಟಿ1: ಕುಷ್ಟಗಿ ತಾಲೂಕಿನ ನಂದಾಪೂರದ ಹೊಲವಂದರಲ್ಲಿ ನೆಟೆ ರೋಗಕ್ಕೆ ತುತ್ತಾದ ತೊಗರಿ ಬೆಳೆಯನ್ನು ಪರೀಶಿಲನೆ ಮಾಡುತ್ತಿರುವ ಕೃಷಿ ಇಲಾಖೆಯ ಅಧಿಕಾರಿ ಅಜಮೀರ ಅಲಿ ಹಾಗೂ ಸಿಬ್ಬಂದಿಗಳು | Kannada Prabha

ಸಾರಾಂಶ

ರೈತರು ಹೆಚ್ಚಿನ ಆದಾಯ ಪಡೆಯುವ ಉದ್ದೇಶದಿಂದ ತಾಲೂಕಿನಲ್ಲಿ ಅತಿ ಹೆಚ್ಚು ತೊಗರಿ ಬೆಳೆ ಬಿತ್ತನೆ ಮಾಡಿದ್ದರು. ಆದರೆ ಅತಿ ತೇವಾಂಶದಿಂದ ಈಗ ತೊಗರಿ ಬೆಳೆಗೆ ನೆಟೆರೋಗ (ಸಿಡಿರೋಗ) ತಗಲಿದ ಪರಿಣಾಮ ರೈತಾಪಿ ವಲಯದಲ್ಲಿ ಆತಂಕ ಹೆಚ್ಚುತ್ತಿದೆ.

ಕುಷ್ಟಗಿ ತಾಲೂಕಲ್ಲಿ ಅತಿ ಹೆಚ್ಚು ತೊಗರಿ ಬಿತ್ತನೆ, ಹೆಚ್ಚು ಮಳೆಯಿಂದ ನೂರಾರು ಎಕರೆಯಲ್ಲಿ ಹಾನಿ

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭ ವಾರ್ತೆ ಕುಷ್ಟಗಿ

ರೈತರು ಹೆಚ್ಚಿನ ಆದಾಯ ಪಡೆಯುವ ಉದ್ದೇಶದಿಂದ ತಾಲೂಕಿನಲ್ಲಿ ಅತಿ ಹೆಚ್ಚು ತೊಗರಿ ಬೆಳೆ ಬಿತ್ತನೆ ಮಾಡಿದ್ದರು. ಆದರೆ ಅತಿ ತೇವಾಂಶದಿಂದ ಈಗ ತೊಗರಿ ಬೆಳೆಗೆ ನೆಟೆರೋಗ (ಸಿಡಿರೋಗ) ತಗಲಿದ ಪರಿಣಾಮ ರೈತಾಪಿ ವಲಯದಲ್ಲಿ ಆತಂಕ ಹೆಚ್ಚುತ್ತಿದೆ.

ಪಟ್ಟಣ ಸೇರಿದಂತೆ ತಾಲೂಕಿನ ಹನುಮಸಾಗರ, ತಾವರಗೇರಾ, ಹನುಮನಾಳ ಸೇರಿದಂತೆ ಅನೇಕ ಭಾಗಗಳ ಗ್ರಾಮೀಣ ಪ್ರದೇಶಗಳಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಆದರೆ, ಇತ್ತೀಚೆಗೆ ಸುರಿದ ಮಳೆಯಿಂದಾಗಿ ನೂರಾರು ಎಕರೆಯ ಬೆಳೆ ಹಾಳಾಗಿದ್ದು, ಇದರ ಜತೆಗೆ ತೊಗರಿ ಬೆಳೆಗೆ ಈಗ ನೆಟೆರೋಗ ಕಾಡುತ್ತಿದ್ದು, ಇದು ರೈತರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

ಬಿತ್ತನೆಯ ಪ್ರಮಾಣ:

ಕುಷ್ಟಗಿ ಹೋಬಳಿಯ ವ್ಯಾಪ್ತಿಯಲ್ಲಿ 6455 ಹೆಕ್ಟೇರ್, ತಾವರಗೇರಾ ಹೋಬಳಿಯ ವ್ಯಾಪ್ತಿಯಲ್ಲಿ 7070 ಹೆಕ್ಟೇರ್, ಹನುಮಸಾಗರ ಹೋಬಳಿಯ ವ್ಯಾಪ್ತಿಯಲ್ಲಿ 5150 ಹೆಕ್ಟೇರ್, ಹನುಮನಾಳ ಹೋಬಳಿಯ ವ್ಯಾಪ್ತಿಯಲ್ಲಿ 1550 ಹೆಕ್ಟೇರ್ ಒಟ್ಟು ಕುಷ್ಟಗಿ ತಾಲೂಕಿನಲ್ಲಿ 2025 (ಶೇ. 319.16) ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯಿಂದ ತಿಳಿದು ಬಂದಿದೆ.

ರೋಗದ ಲಕ್ಷಣಗಳು:

ರೋಗಕ್ಕೆ ತುತ್ತಾದ ತಾಕುಗಳಲ್ಲಿ ಗಿಡದ ಎಲೆಗಳು ಹಳದಿಯಾಗಿ, ಬಾಡಿ ಜೋತುಬಿದ್ದು, ಒಣಗಿ ಕೆಳಗೆ ಉದರದೆ ಗಿಡಕ್ಕೆ ಅಂಟಿಕೊಂಡಿರುತ್ತವೆ. ಗಿಡದ ಬೇರುಗಳು ಪೂರ್ತಿಯಾಗಿ ಬಾಡಿರುತ್ತವೆ. ಕಾಂಡವನ್ನು ಸೀಳಿ ನೋಡಿದಾಗ ನೀರು ಸಾಗಾಣಿಕೆಯ ಅಂಗಾಂಶವು ಕಪ್ಪಾಗಿರುವುದು ಕಂಡು ಬರುತ್ತದೆ. ತಂಪಾದ ವಾತಾವರಣದಲ್ಲಿ ಒಣಗಿದ ಗಿಡದ ಕಾಂಡದ ಮೇಲೆ ಗುಲಾಬಿ ಬಣ್ಣದ ಶೀಲಿಂಧ್ರದ ಬೆಳವಣಿಗೆ ಕಾಣಿಸುವುದು. ಅರ್ಧ ಸಿಡಿಯಾದ ಗಿಡದ ಕಾಂಡದ ಮೇಲೆ ಕಂದು ಅಥವಾ ಕಡು ನೇರಳೆ ಬಣ್ಣದ ಪಟ್ಟಿಗಳು ಭೂಮಿಯ ಮಟ್ಟನಿಂದ ಮೇಲಕ್ಕೆ ಹಬ್ಬಿರುವುದು ಕಂಡುಬರುತ್ತದೆ.

ಹತೋಟಿ ಕ್ರಮಗಳು:

ಪ್ರತಿ ಲೀ. ನೀರಿಗೆ 5 ಗ್ರಾಂ ಟ್ರೈಕೋಡರ್ಮಾ ಪುಡಿ ಬೆರಿಸಿ ಕಾಂಡದ ಬುಡಕ್ಕೆ ಹಸಿಯಾಗುವ ವರೆಗೆ ಸುರಿಯಬೇಕು. ಟೈಕೋಡರ್ಮಾ ಅಲ್ಲದೆ ಪ್ರತಿ ಲೀ. ನೀರಿಗೆ 5 ಗ್ರಾಂ ಕಾರ್ರ್ಬೆಂಡಜಿಮ್ ಅಥವಾ ಸಾಫ್ ಬೆರೆಸಿ ಕಾಂಡದ ಬುಡಕ್ಕೆ ಹಸಿಯಾಗುವ ವರೆಗೆ ಸುರಿಯುವುದು. ರೋಗಪೀಡಿತ ಗಿಡಗಳನ್ನು ಕಿತ್ತು ನಾಶ ಮಾಡಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ನಾವು 2.5 ಎಕರೆಯ ಹೊಲದಲ್ಲಿ ತೊಗರಿ ಬಿತ್ತನೆ ಮಾಡಿದ್ದು, ಮಳೆ ಹೆಚ್ಚಾದ ಪರಿಣಾಮವಾಗಿ ಹೊಲದಲ್ಲಿ ಬೆಳೆಗೆ ಸಿಡಿರೋಗ ಬಂದಿದೆ. ಬೆಳೆ ನಷ್ಟಕ್ಕೆ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎನ್ನುತ್ತಾರೆ ಮಾಟೂರು ಸೀಮಾದ ರೈತ ಶ್ರೀನಿವಾಸ ದೋಟಿಹಾಳ.

ತಾಲೂಕಿನಲ್ಲಿ ಶೇ. 319.16ರಷ್ಟು ತೊಗರಿ ಬಿತ್ತನೆ ಮಾಡಲಾಗಿದ್ದು, ಇತ್ತೀಚೆಗೆ ಸುರಿದ ಮಳೆಯಿಂದಾಗಿ ತೇವಾಂಶ ಹೆಚ್ಚಾದ ಪರಿಣಾಮವಾಗಿ ತೊಗರಿ ಬೆಳೆಯಲ್ಲಿ ರೋಗ ಕಾಣಿಸಿಕೊಂಡಿದೆ. ಈ ಕುರಿತು ಅಗತ್ಯ ಕ್ರಮಗಳ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಅಜಮೀರ್ ಅಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!