ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ತಿಳವಳಿಕೆ ಅಗತ್ಯ: ಎಸ್‌ಪಿ ಉಮಾ ಪ್ರಶಾಂತ್

KannadaprabhaNewsNetwork | Published : Jul 5, 2024 12:47 AM

ಸಾರಾಂಶ

ದಾವಣಗೆರೆಯ ಎ.ವಿ ಕಮಲಮ್ಮ ಕಾಲೇಜಿನಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ವಿದ್ಯಾರ್ಥಿಗಳು ನಿಗದಿತವಾದ ಪಠ್ಯಕ್ರಮಗಳನ್ನಷ್ಟೇ ಓದದೇ ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆಗೂ ಗಮನ ಹರಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಹೇಳಿದರು.

ನಗರದ ಎ.ವಿ.ಕಮಲಮ್ಮ ಕಾಲೇಜಿನಲ್ಲಿ ಗುರುವಾರ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ ಸಮಿತಿ ಹಾಗೂ ಕ್ರೀಡಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಯಾವ ರೀತಿ ಯೋಚನೆ ಮಾಡುತ್ತಾರೆ ಎನ್ನುವುದರ ಮೇಲೆ ಅವರ ಜೀವನ ನಿರ್ಧಾರವಾಗುತ್ತದೆ. ನಕಾರಾತ್ಮಕವಾಗಿ ಯೋಚಿಸದೇ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯ್ಕೆ ಮಾಡುವತ್ತ ಗಮನ ಹರಿಸಬೇಕು ಎಂದರು. ಮಹಿಳೆಯರಿಗೆ ಶಿಕ್ಷಣದ ಜೊತೆಗೆ ಆರ್ಥಿಕ ಸ್ವಾತಂತ್ರ್ಯ ಬಹಳ ಮುಖ್ಯವಾಗಿದ್ದು, ಆರ್ಥಿಕವಾಗಿ ಸ್ವಾತಂತ್ರರಾದರೆ ಜೀವನದಲ್ಲಿ ನಿರ್ಧಾರವನ್ನು ಸ್ವತಂತ್ರವಾಗಿ ತೆಗೆದುಕೊಳ್ಳಬಹುದು . ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಬರೆದು ಉದ್ಯೋಗ ಪಡೆಯಿರಿ ಎಂದು ಪ್ರೇರೆಪಿಸಿದರು.

ಮೊಬೈಲ್‌ನಲ್ಲೇ ತಮ್ಮ ಅಮೂಲ್ಯ ಸಮಯವನ್ನು ಕಳೆಯಬೇಡಿ. ಹೆಣ್ಣುಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಓದುವ ಹಂತದಲ್ಲಿ ಶಿಕ್ಷಣದ ಕಡೆ ಹೆಚ್ಚು ಗಮನ ಇಟ್ಟಲ್ಲಿ ಭವಿಷ್ಯದಲ್ಲಿ ಬದುಕು ಸುಂದರವಾಗುತ್ತದೆ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಚಾರ್ಯೆ ಪ್ರೊ.ಕಮಲಾ ಸೊಪ್ಪಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್, ಎ.ವಿ.ಕೆ ಪ.ಪೂ ಕಾಲೇಜಿನ ಪ್ರಾಚಾರ್ಯ ರವಿ ಬಣಕಾರ್, ಐಕ್ಯೂ ಎ.ಸಿ ಸಂಚಾಲಕ ಆರ್.ಆರ್. ಶಿವಕುಮಾರ್, ಕ್ರೀಡಾ ಸಮಿತಿ ಸಂಯೋಜಕ ಆರ್. ಚನ್ನ ಬಸವನಗೌಡ, ಅಧ್ಯಾಪಕರ ಸಂಘದ ಕಾರ್ಯದರ್ಶಿ ಪ್ರಭಾವತಿ ಎಸ್. ಹೊರಡಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ರಣಧೀರ, ಸಾಂಸ್ಕೃತಿಕ ಸಮಿತಿ ಸಂಯೋಜಕರಾದ ಡಾ.ಆರ್.ಜಿ. ಕವಿತ ಸೇರಿದಂತೆ ಇತರರು ಇದ್ದರು.

Share this article