ಹಾವೇರಿ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಸಂಜೀವಕುಮಾರ ನೀರಲಗಿ ಅವರನ್ನು ಮರು ನೇಮಕ ಮಾಡಿ ಪಕ್ಷದ ವರಿಷ್ಠರು ಆದೇಶ ಹೊರಡಿಸಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಅವರ ನೇಮಕ ಮಹತ್ವ ಪಡೆದುಕೊಂಡಿದೆ.
ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಮನ್ವಯ ಸಾಧಿಸಿಕೊಂಡು ಪಕ್ಷದ ಕಾರ್ಯಕ್ರಮಗಳನ್ನು ಸಂಘಟಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ತಾಲೂಕು ಹಾಗೂ ಬೂತ್‌ಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಸಕ್ರಿಯಗೊಳಿಸುವ ಪ್ರಯತ್ನ ನಡೆಸಿದ್ದರು.
ಚುನಾವಣಾ ಸಂದರ್ಭದಲ್ಲಿನ ಸಂಘಟನಾತ್ಮಕ ಕಾರ್ಯವೈಖರಿ, ಮುಖಂಡರು–ಕಾರ್ಯಕರ್ತರೊಂದಿಗೆ ಹೊಂದಾಣಿಕೆ ಹಾಗೂ ಪಕ್ಷದ ಚಟುವಟಿಕೆಗಳನ್ನು ನಿರಂತರವಾಗಿ ಮುನ್ನಡೆಸಿದ ಹಿನ್ನೆಲೆಯಲ್ಲಿ ಅವರ ಮೇಲೆಯೇ ಪಕ್ಷದ ನಾಯಕತ್ವ ವಿಶ್ವಾಸ ವ್ಯಕ್ತಪಡಿಸಿ ಅಧ್ಯಕ್ಷ ಹುದ್ದೆಯನ್ನು ಮುಂದುವರಿಸಿ ಆದೇಶ ಹೊರಡಿಸಲಾಗಿದೆ.ತಿಂಗಳ ಹಿಂದೆಯೇ ಎಐಸಿಸಿ ನೇಮಿಸಿರುವ ಉಸ್ತುವಾರಿ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಭೇಟಿ ನೀಡಿ, ಪಕ್ಷದ ಪದಾಧಿಕಾರಿಗಳು, ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದರು. ಬಹುತೇಕ ಶಾಸಕರು, ಪದಾಧಿಕಾರಿಗಳು ಸಂಜೀವಕುಮಾರ ಅವರನ್ನೇ ಮುಂದುವರಿಸುವ ಆಸಕ್ತಿ ತೋರಿದ್ದರಿಂದ ಬದಲಾವಣೆ ಗೋಜಿಗೆ ಹೋಗಿಲ್ಲ. ಮರುನೇಮಕದೊಂದಿಗೆ ಮುಂಬರುವ ದಿನಗಳಲ್ಲಿ ಜಿಲ್ಲೆಯ ಕಾಂಗ್ರೆಸ್ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಜವಾಬ್ದಾರಿ ನೀರಲಗಿ ಅವರ ಹೆಗಲೇರಿದೆ. ಬೂತ್‌ಮಟ್ಟದ ಸಂಘಟನೆ, ಕಾರ್ಯಕರ್ತರನ್ನು ಸಕ್ರಿಯಗೊಳಿಸುವುದು ಹಾಗೂ ಶಾಸಕರು–ಮುಖಂಡರು–ಕಾರ್ಯಕರ್ತರ ನಡುವೆ ಸಮನ್ವಯ ಮತ್ತಷ್ಟು ಗಟ್ಟಿಗೊಳಿಸುವುದು ಅವರ ಮುಂದಿರುವ ಪ್ರಮುಖ ಸವಾಲುಗಳಾಗಿವೆ.