ಮಂಗಳೂರಿನ ನೀರುಮಾರ್ಗದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಸ್ಟಾಫ್ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವತಿಗೆ ನಿರಂತರ ಕಿರುಕುಳ ಹಾಗೂ ಜೀವ ಬೆದರಿಕೆ ಹಾಕಿದ ಆರೋಪಿ ಮೊಹಮ್ಮದ್ ನೌಶಾದ್ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ವಿಶ್ವಹಿಂದೂ ಪರಿಷತ್ ಆಗ್ರಹಿಸಿದೆ.
ಮಂಗಳೂರು: ಮಂಗಳೂರಿನ ನೀರುಮಾರ್ಗದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಸ್ಟಾಫ್ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವತಿಗೆ ನಿರಂತರ ಕಿರುಕುಳ ಹಾಗೂ ಜೀವ ಬೆದರಿಕೆ ಹಾಕಿದ ಆರೋಪಿ ಮೊಹಮ್ಮದ್ ನೌಶಾದ್ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ವಿಶ್ವಹಿಂದೂ ಪರಿಷತ್ ಆಗ್ರಹಿಸಿದೆ.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೂರದಾರ ಯುವತಿ ನಂದಿನಿ, ನಾನು ಊರಿಗೆ ಹೋಗಿದ್ದ ವೇಳೆ ಬಾಡಿಗೆ ಮನೆಯಲ್ಲಿನ ನಾಯಿಗೆ ಊಟ ಹಾಕಲು ನನ್ನ ಗೆಳತಿಗೆ ಹೇಳಿದ್ದು, ಇದೇ ಕಾರಣಕ್ಕೆ ಆಕೆಯ ಪರಿಚಯದ ಮೊಹಮ್ಮದ್ ನೌಶಾದ್ ನನ್ನ ಪೋನ್ ನಂಬರ್ ಪಡೆದು ನನಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆ ಹಾಕಿದ್ದು, ಈ ಬಗ್ಗೆ ಮಹಿಳಾ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.ಮೊಹಮ್ಮದ್ ನೌಶಾದ್ ವಿರುದ್ಧ ದೂರು ನೀಡಿರುವ ಹಿನ್ನೆಲೆಯಲ್ಲಿ ನಾನು ಕೆಲಸ ನಿರ್ವಹಿಸುವ ಆಸ್ಪತ್ರೆ/ಕಾಲೇಜಿನ ಮ್ಯಾನೇಜರ್ ಝಿಶಾನ್ ಆರೋಪಿ ನೌಶಾದ್ ಪರವಾಗಿ ನಿಂತು ನನಗೆ ಬೆದರಿಕೆ ಹಾಕಿ, ನನ್ನ ಹಾಗೂ ನನ್ನ ಸ್ನೇಹಿತೆಯಿಂದ ಒತ್ತಾಯ ಪೂರ್ವಕವಾಗಿ ರಾಜಿನಾಮೆ ಪಡೆದುಕೊಂಡಿದ್ದಾರೆ. ಆಸ್ಪತ್ರೆಗೆ ನಾಲ್ವರು ಹುಡುಗರು ಬಂದು ಜಗಳ ಮಾಡಿ, ಬೆದರಿಸಿದ್ದಾರೆ. ಇವರೆಲ್ಲರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ನನ್ನ ಸ್ನೇಹಿತೆಗೆ ನೌಶಾದ್ ಬ್ಲ್ಯಾಕ್‌ಮೇಲ್ ಮಾಡಿರುವ ಸಂಶಯ ಇದೆ. ಈ ನಿಟ್ಟಿನಲ್ಲಿ ಸೂಕ್ತ ತನಿಖೆ ನಡೆಸಬೇಕು. ಆರೋಪಿ ಮೊಹಮ್ಮದ್ ನೌಶಾದ್, ಆಸ್ಪತ್ರೆ/ಕಾಲೇಜಿನ ಮ್ಯಾನೇಜರ್ ಝಿಶನ್ ಅವರ ವಿರುದ್ಧ ಕೇಸ್ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದರು. ವಿಶ್ವಹಿಂದೂ ಪರಿಷತ್‌ನ ಪ್ರದೀಪ್ ಸರಿಪಳ್ಳ ಮಾತನಾಡಿ, ಆರೋಪಿ ನೌಶಾದ್ ವಿರುದ್ಧ ತಕ್ಷಣ ಕೇಸು ದಾಖಲಿಸಬೇಕು ಮತ್ತು ಕಠಿಣ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪ್ರಮುಖರಾದ ಸುಕನ್ಯಾ ರಾವ್, ಸುಜಾತ, ಪ್ರೀತಮ್ ಇದ್ದರು.
ಆರೋಪಿ ಕೋರ್ಟ್‌ಗೆ ಶರಣು, ಜಾಮೀನು
ಮಂಗಳೂರು: ಯುವತಿಯರಿಗೆ ಜೀವಬೆದರಿಕೆ ಹಾಕಿದ್ದ ಆರೋಪಿ ನೌಷದ್ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದು, ಗುರುವಾರ ಸಂಜೆ ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಲಯ ಆರೋಪಿಗೆ ಜಾಮೀನು ನೀಡಿದೆ.ಆತ ತಲೆಮರೆಸಿಕೊಂಡಿದ್ದ ಹಿನ್ನೆಲೆಯಲ್ಲಿ 35 ಬಿಎನ್‌ಎಸ್ ಅಡಿಯಲ್ಲಿ ಆತನ ಮನೆಯವರಿಗೆ ನೋಟಿಸ್ ನೀಡಿ ಮೂರು ದಿನಗಳೊಳಗೆ ಹಾಜರಾಗುವಂತೆ ತಿಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಆತ ಗುರುವಾರ ನ್ಯಾಯಾಲಯದ ಮುಂದೆ ಶರಣಾಗಿದ್ದಾನೆ. ನ್ಯಾಯಾಲಯ ಆತನಿಗೆ ಜಾಮೀನು ನೀಡಿದೆ.ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಪ್ರತಿಕ್ರಿಯಿಸಿ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕಾರ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.