ಮೇ 4ರಂದು ಜಿಲ್ಲೆಯ 5 ಪರೀಕ್ಷಾ ಕೇಂದ್ರಗಳಲ್ಲಿ ‘ನೀಟ್’ (ಯುಜಿ) ಪರೀಕ್ಷೆ: ಶಿವಾನಂದಮೂರ್ತಿ

KannadaprabhaNewsNetwork |  
Published : May 01, 2025, 12:45 AM IST
30ಕೆಎಂಎನ್ ಡಿ22 | Kannada Prabha

ಸಾರಾಂಶ

ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜು (ಸ್ವಾಯತ್ತ), ಮೇಲುಕೋಟೆ ಎಸ್‌ಇಟಿ ಪಬ್ಲಿಕ್ ಸ್ಕೂಲ್-2, ಪಾಂಡವಪುರದ ಪಿಎಸ್ಎಸ್‌ಕೆ ಹೈಸ್ಕೂಲ್ ಮತ್ತು ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸೇರಿ ಒಟ್ಟು 5 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 1872 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ ಮೇ 4ರಂದು ಜಿಲ್ಲೆಯ 5 ಪರೀಕ್ಷಾ ಕೇಂದ್ರಗಳಲ್ಲಿ ‘ನೀಟ್’ (ಯುಜಿ) ಪರೀಕ್ಷೆ ನಡೆಯಲಿದೆ. ಯಾವುದೇ ಲೋಪವಾಗದಂತೆ ಸುಗಮ ಹಾಗೂ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯ್ತಿ ವಿಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ನಡೆದ ನೀಟ್ ಪರೀಕ್ಷೆ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೇ 4 ರಂದು ನೀಟ್‌ (ಯುಜಿ) ಪರೀಕ್ಷೆಯು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ನಡೆಯಲಿದೆ ಎಂದರು.

ಮಂಡ್ಯದ ಸರ್ಕಾರಿ ಮಹಿಳಾ ಕಾಲೇಜು (ಸ್ವಾಯತ್ತ), ಮೇಲುಕೋಟೆ ಎಸ್‌ಇಟಿ ಪಬ್ಲಿಕ್ ಸ್ಕೂಲ್-2, ಪಾಂಡವಪುರದ ಪಿಎಸ್ಎಸ್‌ಕೆ ಹೈಸ್ಕೂಲ್ ಮತ್ತು ಕೆ.ಆರ್.ಪೇಟೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸೇರಿ ಒಟ್ಟು 5 ಪರೀಕ್ಷಾ ಕೇಂದ್ರಗಳಲ್ಲಿ ಒಟ್ಟು 1872 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಾತಿ ಪತ್ರದೊಂದಿಗೆ ಕಾಲೇಜಿನಿಂದ ನೀಡಲ್ಪಟ್ಟಿರುವ ಐಡಿ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಡಿ.ಎಲ್, ವೋಟರ್ ಐಡಿ ಹಾಗೂ ಪ್ರವೇಶ ಪತ್ರದಲ್ಲಿ ತಿಳಿಸಿರುವ ಇತರೆ ಯಾವುದಾದರೂ ಅಂಗೀಕೃತ ಐಡಿಗಳ ಜೊತೆ 1 ಪೋಸ್ಟ್ ಕಾರ್ಡ್ ಸೈಜ್ ಫೋಟೋ ಮತ್ತು 2 ಪಾಸ್ ಪೋರ್ಟ್ ಸೈಜ್ ಫೋಟೋಗಳನ್ನು ಕಡ್ಡಾಯವಾಗಿ ತೆಗೆದುಕೊಂಡು ಪರೀಕ್ಷೆಗೆ ಹಾಜರಾಗಬೇಕು ಎಂದು ಸೂಚಿಸಿದರು.

ಪರೀಕ್ಷಾ ಕೇಂದ್ರಗಳಿಗಲ್ಲಿ ಬೆಳಗ್ಗೆ 11 ಗಂಟೆಯಿಂದಲೇ ಎನ್‌ಟಿಎ ವತಿಯಿಂದ ನೇಮಿಸಿರುವ ಏಜೆನ್ಸಿಗಳಿಂದಲೇ ಪ್ರವೇಶಾತಿಗೆ ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು. ನಿಯೋಜಿತ ಪೊಲೀಸ್ ಸಿಬ್ಬಂದಿಯಿಂದಲೂ ತಪಾಸಣೆ ನಡೆಸಲಾಗುವುದು ಎಂದರು.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಕಡ್ಡಾಯವಾಗಿದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಈಗಾಗಲೇ ಡೌನ್ ಲೋಡ್ ಮಾಡಿಕೊಂಡಿರುವ ಪ್ರವೇಶಾತಿ ಪತ್ರದಲ್ಲಿ ನೀಡಲಾಗಿರುವ ಸೂಚನೆ ಪಾಲಿಸಬೇಕು ಎಂದರು.

ಅಭ್ಯರ್ಥಿಗಳು ಪೂರ್ಣ ತೋಳಿರುವ ಮೇಲಂಗಿಯನ್ನು ಹಾಗೂ ದೊಡ್ಡ ಬಟನ್‌ಗಳಿರುವ ಶರ್ಟ್ ಮತ್ತು ಪ್ಯಾಂಟ್‌ಗಳನ್ನು, ಶೂ, ಸಾಕ್ಸ್, ಎತ್ತರದ ಚಪ್ಪಲಿಗಳು, ಕಿವಿಯೋಲೆ, ಬಳೆ, ಸರ, ಕಾಲ್ಗೆಜ್ಜೆ, ಮೂಗುತಿ ಹಾಗೂ ಇತರೆ ಯಾವುದೇ ಮೆಟಲ್ ಉಪಕರಣಗಳನ್ನು (ಮಂಗಳ ಸೂತ್ರವನ್ನು ಹೊರತುಪಡಿಸಿ) ಧರಿಸುವಂತಿಲ್ಲ. ಜಡೆಗೆ ಹಾಕುವ ಕ್ಲಿಪ್ಸ್ ಹಾಗೂ ಯಾವುದೇ ರೀತಿಯ ಇಲೆಕ್ಟ್ರಾನಿಕ್ ಉಪಕರಣ ಧರಿಸುವಂತಿಲ್ಲ ಎಂದರು.

ಪ್ರವೇಶಾತಿ ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಂಡ ವಿದ್ಯಾರ್ಥಿಗಳು ತಮ್ಮ ರಿಜಿಸ್ಟರ್ ನಂಬರ್ ಇರುವ ಕೊಠಡಿಗೆ ನೇರವಾಗಿ ತೆರಳಲು ಅವಕಾಶವಿದೆ. ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆವರೆಗೆ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಅವಧಿಯಲ್ಲಿ ಪ್ರತಿ ಗಂಟೆಗೊಂದು ಬಾರಿ ಬೆಲ್ ಮೂಲಕ ಸೂಚನೆ ನೀಡಲಾಗುತ್ತದೆ ಎಂದರು.

ಪರೀಕ್ಷಾ ಕೇಂದ್ರಗಳಿಗೆ ನಿರಂತರ ವಿದ್ಯುತ್ ವ್ಯವಸ್ಥೆ ಒದಗಿಸಲಾಗುವುದು. ಆರೋಗ್ಯ ಸಿಬ್ಬಂದಿ ಹಾಗೂ ತುರ್ತು ಸೇವೆಗಳ ನಿಯೋಜನೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸ್ವಚ್ಛತೆಯನ್ನು ಸಹ ಕಾಪಾಡಲಾಗುವುದು. ಪರೀಕ್ಷೆಗೆ ಹಾಜರಾಗುವ ದಿವ್ಯಾಂಗ ಚೇತನ ಮಕ್ಕಳಿಗೆ ಅನುಕೂಲವಾಗುವಂತೆ ವೀಲ್ ಚೇರ್ ವ್ಯವಸ್ಥೆ ಹಾಗೂ ತುರ್ತು ಅಗ್ನಿ ಶಾಮಕ ವ್ಯವಸ್ಥೆ ಜಿಲ್ಲಾಡಳಿತದಿಂದ ಮಾಡಿಕೊಳ್ಳಲಾಗಿದೆ ಎಂದರು.

ಪರೀಕ್ಷಾ ದಿನಗಳಂದು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಕೇಂದ್ರಗಳಿಗೆ ನಿಗತ ಸಮಯಕ್ಕೆ ತಲುಪುವಂತೆ ಹೆಚ್ಚಿನ ಬಸ್ ಗಳ ವ್ಯವಸ್ಥೆ ಮಾಡಲಾಗುವುದು. ಪ್ರತಿ ಪರೀಕ್ಷಾ ಕೇಂದ್ರಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ ನೀಡಲಾಗಿರುವ ಸೂಚನೆ ಹಾಗೂ ಉಪಕರಣಗಳನ್ನು ಅಳವಡಿಸಿರುವ ಬಗ್ಗೆ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಖಚಿತಪಡಿಸಿಕೊಳ್ಳುವುದು ಕಡ್ಡಾಯ ಎಂದರು.

ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಒಬ್ಬ ಪೊಲೀಸ್ ವೃತ್ತ ನಿರೀಕ್ಷಕರು, ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಯೋಜಿತ ಸಿಬ್ಬಂದಿಯು ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳನ್ನು ಸೂಕ್ತ ತಪಾಸಣೆಗೆ ಒಳಪಡಿಸುವಲ್ಲಿ ನಿಯಮಾನುಸಾರ ಅಗತ್ಯ ಕ್ರಮವಹಿಸಬೇಕು ಎಂದರು.

ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯಿಂದ ಪರೀಕ್ಷೆಗೂ ಮುನ್ನ ಪ್ರತೀ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಮೂಲ ಸೌಕರ್ಯಗಳು, ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲಿಸಲಾಗುವುದು. ಸುತ್ತಮುತ್ತಾ ಪರೀಕ್ಷಾ ದಿನದಂದು ನಿಷೇಧಾಜ್ಞೆ ಜಾರಿ, ಕೇಂದ್ರಗಳಿಗೆ ನಿಯೋಜಿತ ಅಧಿಕಾರಿ, ಸಿಬ್ಬಂದಿಯನ್ನು ಹೊರತುಪಡಿಸಿ ಇತರೆ ಯಾವುದೇ ಸಾರ್ವಜನಿಕರಿಗೆ ಪ್ರವೇಶಿಸುವಂತಿಲ್ಲ ಎಂದರು.

ಜಿಲ್ಲಾಡಳಿತದಿಂದ ಪರೀಕ್ಷಾ ಕೇಂದ್ರವಾರು ವೀಕ್ಷಕರು ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಇವರು ಸೂಚಿಸಿದ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷೆಯಲ್ಲಿ ಯಾವುದೇ ಅವ್ಯವಹಾರ, ಅಶಿಸ್ತು, ಪ್ರಕರಣಗಳು ಜರುಗದಂತೆ ಮುಂಜಾಗ್ರತೆ ವಹಿಸುವಂತೆ ತಿಳಿಸಿದರು.

ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವರಾಮೇಗೌಡ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಲುವಯ್ಯ, ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ: ಗುರುರಾಜ್ ಪ್ರಭು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!