ಬ್ಯಾಡಗಿ: ಕನಕದಾಸರ ಕರ್ಮಭೂಮಿ ಕಾಗಿನೆಲೆಯನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸಿದೆ ಎಂದು ಜೆಡಿಎಸ್ ಮುಖಂಡ ಮೋಹನ ಬಿನ್ನಾಳ ಆರೋಪಿಸಿದರು.
8 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಕಾಗಿನೆಲೆಯಲ್ಲಿ ಯಾವುದೇ ಮೂಲ ಸೌಕರ್ಯಗಳಿಲ್ಲ. ಒಂದೇ ಒಂದು ಕುಡಿಯುವ ನೀರಿನ ಘಟಕವಿದೆ ಎಂದು ಹೇಳಿದರು.
ಶಾಸಕ ಬಸವರಾಜ ಶಿವಣ್ಣನವರ ಕಾಗಿನೆಲೆ ಗ್ರಾಮ ನಿರ್ಲಕ್ಷಿಸಿದ್ದಾರೆ. ಕೆರೆ ಒತ್ತುವರಿ ಇಂದಿಗೂ ತೆರವುಗೊಳಿಸಿಲ್ಲ. ಉಪ ತಹಸೀಲ್ದಾರ್ ಕಚೇರಿ ನಿರ್ಮಾಣವಾಗಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ, ಚಿಕಿತ್ಸೆ ಸಿಗದೇ ಜನರು ಪರದಾಡುತ್ತಿದ್ದಾರೆ. ಆಸ್ಪತ್ರೆ ಮೇಲ್ದರ್ಜೆಗೇರಿಸುವ ಪ್ರಯತ್ನ ನಡೆದಿಲ್ಲ ಎಂದರು.ಬಿಜೆಪಿ ಮ್ಯಾಚ್ ಫಿಕ್ಸಿಂಗ್: ಬ್ಯಾಡಗಿ ಮತಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಸಮರ್ಥ ವಿರೋಧ ಪಕ್ಷವಾಗಿ ಕೆಲಸ ನಿರ್ವಹಿಸಬೇಕಾಗಿದ್ದ ಬಿಜೆಪಿ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡ ಬಗ್ಗೆ ಅನುಮಾನಗಳಿವೆ. ರಾಜ್ಯ ಸರ್ಕಾರದ ವೈಫಲ್ಯದ ಕುರಿತು ಮನೆ ಮನೆಗೆ ಭಿತ್ತಿಪತ್ರಗಳನ್ನು ಅಂಟಿಸುವ ಮೂಲಕ ಜಾಗೃತಿ ಮೂಡಿಸಲಿದ್ದೇನೆ. ಬರುವ ದಿನಗಳಲ್ಲಿ ರಾಜ್ಯ ಸರ್ಕಾರದ ವೈಫಲ್ಯ ವಿರುದ್ಧ ಧರಣಿ ನಡೆಸಲಾಗುವುದು ಎಂದು ಜೆಡಿಎಸ್ ಮುಖಂಡ ಮೋಹನ ಬಿನ್ನಾಳ ಆರೋಪಿಸಿದರು.
ಮೋಹಿನ್ ಮುಲ್ಲಾ ಮಾತನಾಡಿ, ಕಾಗಿನೆಲೆಯಲ್ಲಿರುವ ಮುಸ್ಲಿಂ ಸಮಾಜದ ಖಬರಸ್ಥಾನ ಗುರುಪೀಠದ ಬಳಿಯಿದೆ. ಆದರೆ ಇಂದಿಗೂ ಅದಕ್ಕೆ ಕಾಂಪೌಂಡ್ ನಿರ್ಮಾಣವಾಗಿಲ್ಲ. ಕೆಲವರು ಪವಿತ್ರ ಸ್ಥಳ ಮಲಿನಗೊಳಿಸುತ್ತಿದ್ದಾರೆ. ಮಳೆಗಾಲದಲ್ಲಿ ಅಲ್ಲಿ ನೀರು ನುಗ್ಗುತ್ತಿದೆ. ಕೂಡಲೇ ಅದನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವ ಕೆಲಸ ಶಾಸಕರಿಂದ ಆಗಬೇಕು ಎಂದು ಆಗ್ರಹಿಸಿದರು.