ನ್ಯೂಕ್ಲಿಯರ್ ಶಕ್ತಿಗಿಂತ ಆಧ್ಯಾತ್ಮಿಕ ಶಕ್ತಿ ದೊಡ್ಡದು: ಉಪರಾಷ್ಟ್ರಪತಿ ಜಗದೀಪ ಧನಕರ್

KannadaprabhaNewsNetwork |  
Published : Jan 17, 2025, 12:45 AM IST
54564 | Kannada Prabha

ಸಾರಾಂಶ

ಭಾರತ ಜಾಗತಿಕ ಮಟ್ಟದಲ್ಲಿ ಇಂದಿಗೂ ಹಲವು ಸವಾಲು ಎದುರಿಸುತ್ತಿದೆ. ನಿಜವಾದ ವಿಕಾಸವಾದಲ್ಲಿ ಭಾರತ ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲ. ನಮ್ಮ ಸಿರಿವಂತ ಸಂಸ್ಕೃತಿಯು ಇಂದು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದೆ.

ಹುಬ್ಬಳ್ಳಿ:

ನ್ಯೂಕ್ಲಿಯರ್ ಶಕ್ತಿಗಿಂತ ಆಧ್ಯಾತ್ಮಿಕ ಶಕ್ತಿ ದೊಡ್ಡದು. ಮಠ-ಮಂದಿರಗಳು ಕೇವಲ ಧಾರ್ಮಿಕ ಕೇಂದ್ರಗಳಲ್ಲ, ಸಾಮಾಜಿಕ ಬದಲಾವಣೆಯ ಕೇಂದ್ರಗಳು ಎಂದು ಉಪರಾಷ್ಟ್ರಪತಿ ಜಗದೀಪ ಧನಕರ್ ಹೇಳಿದರು.

ಅವರು ಜೈನ ಸಮುದಾಯದ ಶ್ರದ್ಧಾಕೇಂದ್ರವಾಗಿರುವ ತಾಲೂಕಿನ ವರೂರಿನಲ್ಲಿರುವ ನವಗ್ರಹ ತೀರ್ಥ ಕ್ಷೇತ್ರದಲ್ಲಿ 12 ವರ್ಷಗಳ ಬಳಿಕ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಹಾಗೂ ಸುಮೇರು ಪರ್ವತ ಜೀನಬಿಂಬ ಪ್ರತಿಷ್ಠಾ ಪಂಚಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಗುರುವಾರ 405 ಅಡಿ ಎತ್ತರದ "ಸುಮೇರು ಪರ್ವತ " ಲೋಕಾರ್ಪಣೆಗೊಳಿಸಿ ಮಾತನಾಡಿದರು.

ನಂಬಿಕೆ, ಜ್ಞಾನ, ಅಧ್ಯಾತ್ಮ ಪ್ರತಿರೂಪವೇ ಜೈನ ಧರ್ಮ. ಲೋಕಾರ್ಪಣೆಗೊಂಡಿರುವ 405 ಅಡಿ ಎತ್ತರದ ಸುಮೇರು ಪರ್ವತವು ಧಾರ್ಮಿಕತೆಯ ಮೇರು ಪರ್ವತವಾಗಿದೆ. ವರೂರು ಇಂದು ಆಚಾರ್ಯ ಗುಣಧರನಂದಿ ಮಹಾರಾಜರಿಂದಾಗಿ ತೀರ್ಥಕ್ಷೇತ್ರವಾಗಿ ಹೊರಹೊಮ್ಮಿರುವುದು ಸಂತಸದ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಶಾಂತಿಯ ಮಂತ್ರ ಜಪಿಸಿ:

ಜೈನ ಧರ್ಮದ ತತ್ವಗಳನ್ನು ಯುವಸಮೂಹ ಅಳವಡಿಕೊಳ್ಳಬೇಕು. ಸದ್ಯ ವಿಶ್ವ ಶಾಂತಿಯ ಅಗತ್ಯವಿದೆ. ಹಲವು ಸಂಘರ್ಷಗಳ ಕಾರಣದಿಂದ ಜಾಗತಿಕ ಬಿಕ್ಕಟ್ಟುಗಳು ಹೆಚ್ಚಾಗುತ್ತಿರುವುದು ನೋವಿನ ಸಂಗತಿ. ಮಾತುಕತೆಗೆ ಸರಿಯಾದ ಮಾನ್ಯತೆ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಂಸ್ಕೃತಿಗೆ ಸಂಕಷ್ಟ:

ಭಾರತ ಜಾಗತಿಕ ಮಟ್ಟದಲ್ಲಿ ಇಂದಿಗೂ ಹಲವು ಸವಾಲು ಎದುರಿಸುತ್ತಿದೆ. ನಿಜವಾದ ವಿಕಾಸವಾದಲ್ಲಿ ಭಾರತ ವಿಶ್ವಗುರುವಾಗುವುದರಲ್ಲಿ ಸಂದೇಹವಿಲ್ಲ. ನಮ್ಮ ಸಿರಿವಂತ ಸಂಸ್ಕೃತಿಯು ಇಂದು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದೆ. ಇದರಿಂದಾಗಿಯೇ ಅಭಿವೃದ್ಧಿಯಲ್ಲಿ ಹಿನ್ನೆಡೆ ಅನುಭವಿಸುವಂತಾಗಿದೆ. ಇನ್ನು ಮುಂದಾದರೂ ನಮ್ಮ ಸಂಸ್ಕೃತಿ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ ಎಂದು ಧನಕರ್‌ ಹೇಳಿದರು.

2047ಕ್ಕೆ ಭಾರತ ವಿಶ್ವಗುರು:

ನಮ್ಮ ನಾಗರಿಕತೆಗೆ ಐದು ಸಾವಿರ ವರ್ಷಗಳ ಇತಿಹಾಸವಿದೆ. ಅತ್ಯುನ್ನತ ಆಧ್ಯಾತ್ಮಿಕ ಇತಿಹಾಸ ಹೊಂದಿದೆ. ಇಂದು ಭಾರತ ಪ್ರಗತಿಯ ಪಥದಲ್ಲಿ ಮುಂದಡಿಯನ್ನಿಟ್ಟಿದ್ದು, 2047ರೊಳಗೆ ಭಾರತ ವಿಶ್ವಗುರು ಆಗುವುದರಲ್ಲಿ ಸಂದೇಹವಿಲ್ಲ. ದೇಶದ ಅಭಿವೃದ್ಧಿಗೆ ಯುವಕರಾದಿಯಾಗಿ ಎಲ್ಲರೂ ಕೈಜೋಡಿಸುವಂತೆ ಕರೆ ನೀಡಿದರು.

ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಮಾತನಾಡಿ, ಆಚಾರ್ಯ ಗುಣಧರನಂದಿ ಮಹಾರಾಜರ ಮಾರ್ಗದರ್ಶನದಲ್ಲಿ ವರೂರು ತೀರ್ಥಕ್ಷೇತ್ರವು ಧಾರ್ಮಿಕ, ಆಧ್ಯಾತ್ಮಿಕ ಕ್ಷೇತ್ರವಲ್ಲದೇ ಶಿಕ್ಷಣ ಕ್ಷೇತ್ರದ ಮೂಲಕ ಹಲವರ ಬದುಕಲ್ಲಿ ಶಿಕ್ಷಣದ ಮೂಲಕ ಕ್ರಾಂತಿ ಮೂಡಿಸಿದೆ ಎಂದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಶೂನ್ಯದಿಂದ ಹೊಸಸೃಷ್ಟಿಯನ್ನೇ ನಿರ್ಮಾಣ ಮಾಡಬಹುದು ಎಂಬುದಕ್ಕೆ ಗುಣಧರನಂದಿ ಮಹಾರಾಜರೇ ಉತ್ತಮ ಉದಾಹರಣೆ ಎಂದರು.

ನವಗ್ರಹ ತೀರ್ಥಕ್ಷೇತ್ರದ ಆಚಾರ್ಯ ಗುಣಧರನಂದಿ ಮಹಾರಾಜರು ಮಾತನಾಡಿ, ತೀರ್ಥಕ್ಷೇತ್ರದಲ್ಲಿ ದೇಶದಲ್ಲಿಯೇ ಅತೀ ಎತ್ತರದ ಸುಮೇರು ಪರ್ವತ ನಿರ್ಮಿಸಿ ಲೋಕಕ್ಕೆ ಅರ್ಪಿಸಬೇಕು ಎಂಬುದು ನನ್ನ ಹಲವು ವರ್ಷಗಳ ಕನಸು ಈಗ ನೆರವೇರಿದೆ ಎಂದು ಹೇಳಿದರು.

ದಿಗಂಬರ ಜೈನ ಪಂಥದ ಮಹಾಗುರು ಆಚಾರ್ಯ ಶ್ರೀಗುರುದೇವ ಕುಂತುಸಾಗರ್‌ ಮಾಹಾರಾಜರು ಆಶೀರ್ವಚನ ನೀಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಮಹಾಮಸ್ತಕಾಭಿಷೇಕದ ಅಧ್ಯಕ್ಷ ಡಾ. ವೀರೇಂದ್ರ ಹೆಗ್ಗಡೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು.

ಈ ವೇಳೆ ಧರ್ಮಸೇನ ಭಟ್ಟಾರಕ ಸ್ವಾಮೀಜಿ, ಉಪರಾಷ್ಟ್ರಪತಿಗಳ ಪತ್ನಿ ಸುದೀಶ ಧನಕರ್, ಕಾರ್ಯಕ್ರಮದ ಕರ್ತುಋ ಸೌಧರ್ಮ ಇಂದ್ರ ಸೇರಿದಂತೆ ಹಲವರಿದ್ದರು.ಇಂದ್ರ ಇಂದ್ರಾಣಿಯರ ಅದ್ಧೂರಿ ಮೆರವಣಿಗೆ

ಸುಮೇರು ಪರ್ವತ ಲೋಕಾರ್ಪಣಾ ಕಾರ್ಯಕ್ರಮದ ಪೂರ್ವದಲ್ಲಿ ಗುರುವಾರ ಬೆಳಗ್ಗೆ ವರೂರು ಗ್ರಾಮದ ಪ್ರಮುಖ ಬೀದಿಗಳಲ್ಲಿ ಆನೆ, ಕುದುರೆ ಹಾಗೂ ರಥಗಳ ಮೂಲಕ ಇಂದ್ರ ಇಂದ್ರಾಣಿಯರ ಅದ್ಧೂರಿ ಮೆರವಣಿಗೆ ಹಾಗೂ ಕಲಶದೊಂದಿಗೆ ಶೋಭಾಯಾತ್ರೆ ನಡೆಯಿತು. ನಂತರ ತೀರ್ಥಕ್ಷೇತ್ರದಲ್ಲಿ ಆಚಾರ್ಯ ಶ್ರೀಗಳಿಂದ ಪ್ರವಚನ, ವೇಧಿ ಸುದ್ಧಿ ವಿಧಿ-ವಿಧಾನ ನೆರವೇರಿಸಲಾಯಿತು. ನಂತರ ತೀರ್ಥಕ್ಷೇತ್ರಕ್ಕೆ ಭೇಟಿ ನೀಡಿದ ಉಪರಾಷ್ಟ್ರಪತಿ ಜಗದೀಪ ಧನಕರ್‌ ಹಾಗೂ ರಾಜ್ಯಪಾಲ ತಾವರಚಂದ ಗೆಹಲೋತ್‌ ಅವರನ್ನು ವೇದಿಕೆಗೆ ಕರೆತರಲಾಯಿತು. ನವಗ್ರಹ ಶಾಂತಿ ಹವನ, ಆಚಾರ್ಯ ಶ್ರೀಗಳಿಂದ ಮಹಾಮಂಗಳಾರತಿ ಪೂಜಾ ವಿಧಾನ, ಅಷ್ಟಕುಮಾರಿಕೆಯರಿಂದ ಸೇವೆ ಮತ್ತು ಪೂಜಾ ವಿಧಾನ ಕೊನೆಗೆ ಗರ್ಭಕಲ್ಯಾಣ ಮಹೋತ್ಸವ ನೆರವೇರಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿ ಹಣ ಹೊಂದಿಸಲು ಕಾಂಗ್ರೆಸ್ ಸರ್ಕಾರ ಸುಲಿಗೆ
ಭಾರತ ಅಭಿವೃದ್ಧಿ ರಥಕ್ಕೆ ರಾಜಮಾರ್ಗ ನಿರ್ಮಿಸಿದ ವಾಜಪೇಯಿ