ಬಿಜೆಪಿಯಿಂದ ನಿರ್ಲಕ್ಷ್ಯ, ಆದರೂ ಮೈತ್ರಿ ಧರ್ಮ ಪಾಲಿಸಿ, ಬೊಮ್ಮಾಯಿ ಗೆಲುವಿಗೆ ಶ್ರಮಿಸುತ್ತೇವೆ-ಮಂಜುನಾಥ

KannadaprabhaNewsNetwork | Published : Apr 18, 2024 2:21 AM

ಸಾರಾಂಶ

ಚುನಾವಣಾ ಪ್ರಚಾರ ಸಭೆಗೆ ನಮ್ಮನ್ನು ಕರೆಯದೇ ಬಿಜೆಪಿಯವರು ಕಡೆಗಣಿಸುತ್ತಿದ್ದಾರೆ. ಆದರೂ, ಎಚ್.ಡಿ. ಕುಮಾರಸ್ವಾಮಿಯವರ ಆದೇಶದಂತೆ ಮೈತ್ರಿ ಧರ್ಮ ಪಾಲಿಸುತ್ತೇವೆ. ಬಸವರಾಜ ಬೊಮ್ಮಾಯಿಯವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಹೇಳಿದರು.

ಹಾವೇರಿ: ಚುನಾವಣಾ ಪ್ರಚಾರ ಸಭೆಗೆ ನಮ್ಮನ್ನು ಕರೆಯದೇ ಬಿಜೆಪಿಯವರು ಕಡೆಗಣಿಸುತ್ತಿದ್ದಾರೆ. ಆದರೂ, ಎಚ್.ಡಿ. ಕುಮಾರಸ್ವಾಮಿಯವರ ಆದೇಶದಂತೆ ಮೈತ್ರಿ ಧರ್ಮ ಪಾಲಿಸುತ್ತೇವೆ. ಬಸವರಾಜ ಬೊಮ್ಮಾಯಿಯವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಹೇಳಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಹಾವೇರಿಯಲ್ಲಿ ಈಚೆಗೆ ನಡೆದ ಬಿಜೆಪಿ ಯುವ ಸಮಾವೇಶಕ್ಕೂ ನಮ್ಮನ್ನು ಕಾಟಾಚಾರಕ್ಕೆ ಕರೆಯಲಾಯಿತು. ಈ ಸಮಾವೇಶಕ್ಕೆ ಬಂದಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ನಮ್ಮ ಕೆಲವು ಮುಖಂಡರು ಪತ್ರ ನೀಡಿ, ಜೆಡಿಎಸ್ ಕಾರ್ಯಕರ್ತರಿಗೆ ಸರಿಯಾದ ಗೌರವ ಸಿಗುತ್ತಿಲ್ಲ ಎಂದು ಗಮನಕ್ಕೆ ತಂದಿದ್ದೆವು. ಆದರೂ ಇಲ್ಲಿಯವರೆಗೆ ಸರಿಪಡಿಸುವ ಕಾರ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಏ.19ರಂದು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರು ಬೃಹತ್ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಕಾರ್ಯಕ್ರಮಕ್ಕೂ ಮುನ್ನ ಜಂಟಿ ಪತ್ರಿಕಾಗೋಷ್ಠಿ ನಡೆಸೋಣ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ ಅವರಿಗೆ ತಿಳಿಸಿದ್ದೆ. ಬೊಮ್ಮಾಯಿಯವರನ್ನು ಕೇಳಿ ಹೇಳುತ್ತೇನೆ ಎಂದವರು, ನಮ್ಮನ್ನು ಕರೆಯದೇ ಪ್ರತ್ಯೇಕವಾಗಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ರಾಣಿಬೆನ್ನೂರಿನಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಗೂ ನಮ್ಮನ್ನು ಕರೆದಿಲ್ಲ ಎಂದು ದೂರಿದರು. ಮೈತ್ರಿ ಧರ್ಮ ಪಾಲಿಸುವುದು ನಮ್ಮ ಕರ್ತವ್ಯ. ಹೀಗಾಗಿ ಮೈತ್ರಿಕೂಟದ ಅಭ್ಯರ್ಥಿಯಾದ ಬೊಮ್ಮಾಯಿಯವರನ್ನು ನಾವು ಬೆಂಬಲಿಸುತ್ತೇವೆ. ನಾಮಪತ್ರ ಮೆರವಣಿಗೆಯಲ್ಲಿ ನಮ್ಮ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದೇವೆ ಎಂದು ತಿಳಿಸಿದರು. ಜಿಲ್ಲಾ ಘಟಕದ ಉಪಾಧ್ಯಕ್ಷ ಸತೀಶ ಮಾಳದಕರ್, ಮೂಕಪ್ಪ ಪಡಿಯಪ್ಪನವರ, ಕತ್ತಲ್‌ಸಾಬ್ ಬಣಗಾರ, ಸಿದ್ದಪ್ಪ ಗುಡಿಮುಂದರ್, ರಾಮನಗೌಡ ಪಾಟೀಲ, ಮಲ್ಲಿಕಾರ್ಜುನ ಅರಳಿ, ಚಂದ್ರಗೌಡ ಭರಮಗೌಡ, ಎಂ.ಎಸ್. ಹಣಗಿ, ಅಲ್ತಾಫ್ ನದಾಫ್, ಮಂಜುನಾಥ ಕನ್ನನಾಯಕನವರ, ರಮೇಶ ಮಾಕನೂರ, ರೀಟಾ ನಾಯ್ಕರ್, ನಾಗರಾಜ ಪಾಟೀಲ, ಲಲಿತಾ ಉಜ್ಜನಗೌಡರ ಇದ್ದರು.

Share this article