)
ದೇವನಹಳ್ಳಿ: ಸಾರ್ವಜನಿಕರ ಕೆಲಸಗಳು ತಾಲೂಕು ಕಚೇರಿಗಳಲ್ಲಿ ಯಾವುದೇ ವಿಳಂಬವಿಲ್ಲದೆ ನಡೆಯಬೇಕು. ಕಂದಾಯ ದಾಖಲೆಗಳ ನಿರ್ವಹಣೆ, ಭೂಮಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಹಾಗೂ ಸಾರ್ವಜನಿಕ ಸೇವೆಗಳಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವುದನ್ನು ಸಹಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ತಾಲೂಕು ಕಚೇರಿಗೆ ಬಂದಾಗ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಅಧಿಕಾರಿಗಳು ಆ ಸಮಸ್ಯೆಗಳಿಗೆ ಹೇಗೆ ಸ್ಪಂದಿಸುತ್ತಿದ್ದಾರೆ ಹಾಗೂ ಅರ್ಜಿಗಳ ವಿಲೇವಾರಿ ಯಾವ ಹಂತದಲ್ಲಿದೆ ಎಂಬುದನ್ನು ಖುದ್ದಾಗಿ ತಿಳಿದುಕೊಳ್ಳುವ ಉದ್ದೇಶದಿಂದ ಅನಿರೀಕ್ಷಿತ ಭೇಟಿ ನೀಡಿದ್ದೇನೆ. ಸಾಮಾನ್ಯ ಜನರಿಗೆ ಸರಳ ಮತ್ತು ಸುಗಮ ಆಡಳಿತ ಒದಗಿಸುವುದು ಸರ್ಕಾರದ ಉದ್ದೇಶ. ಕರ್ತವ್ಯಲೋಪ ಎಸಗುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ದಾಖಲೆಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ: ಅಧಿಕಾರಿ ಅಮಾನತುದಾಖಲೆಗಳ ಕೊಠಡಿಯಲ್ಲಿ ಕಂದಾಯ ದಾಖಲೆಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವುದು ಹಾಗೂ ದತ್ತಾಂಶಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸದ ಸಂಬಂಧಪಟ್ಟ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಕಂದಾಯ ದಾಖಲೆಗಳು ಜನಸಾಮಾನ್ಯರ ಆಸ್ತಿ ಮತ್ತು ಹಕ್ಕುಗಳಿಗೆ ಸಂಬಂಧಿಸಿದ ಅತ್ಯಂತ ಮಹತ್ವದ ದಾಖಲೆಗಳಾಗಿವೆ. ಒಂದು ಮೂಲ ದಾಖಲೆ ಹಾಳಾದರೂ ಅದರಿಂದ ಸಂಬಂಧಪಟ್ಟ ಕುಟುಂಬಗಳಿಗೆ ತೀವ್ರ ತೊಂದರೆಯಾಗುತ್ತದೆ. ಸ್ವಾತಂತ್ರ್ಯಪೂರ್ವ ಕಾಲದ ಮೂಲ ದಾಖಲೆಗಳೂ ಕಂದಾಯ ಇಲಾಖೆಯಲ್ಲಿದ್ದು, ದಾಖಲೆಗಳ ಕೊಠಡಿಯಲ್ಲಿರುವ ಎಲ್ಲ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕು ಎಂದರು.
ಬಗರ್ ಹುಕುಂ ಜಮೀನುಗಳಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿಯಲ್ಲಿ ಉಂಟಾಗಿರುವ ಸಮಸ್ಯೆಗಳ ಕುರಿತು ಸಾರ್ವಜನಿಕರು ನನ್ನ ಗಮನಕ್ಕೆ ತಂದಿದ್ದಾರೆ. ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಬಗರ್ ಹುಕುಂ ಜಮೀನುಗಳಿಗೆ ಸಂಬಂಧಿಸಿದ ನಮೂನೆ 52 ಮತ್ತು 53ರ ಅರ್ಜಿಗಳು ಸೇರಿದಂತೆ ನಿಯಮ ಜಾರಿಯಾದ ನಂತರ ಸಲ್ಲಿಕೆಯಾದ ಅರ್ಜಿಗಳನ್ನು ಪರಿಶೀಲಿಸಲಾಗುವುದು. ನ್ಯಾಯಾಲಯಗಳಿಂದ ಯಾವುದಾದರೂ ನಿರ್ದೇಶನಗಳು ಬಂದಿದ್ದರೆ ಅವುಗಳನ್ನು ಗಮನದಲ್ಲಿಟ್ಟುಕೊಂಡು ಕಾನೂನಿನ ಅನ್ವಯ ತೀರ್ಮಾನ ಕೈಗೊಳ್ಳಲಾಗುವುದು. ಬಾಕಿ ಇರುವ ಪೆÇೀಡಿ ದುರಸ್ತಿ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿರುವವರು ಎಷ್ಟೇ ಪ್ರಭಾವಿಗಳಾಗಿದ್ದರೂ ನಿಯಮಾನುಸಾರ ತೆರವುಗೊಳಿಸಬೇಕು. ನಿರ್ದಿಷ್ಟ ಒತ್ತುವರಿ ಪ್ರಕರಣಗಳನ್ನು ಗಮನಕ್ಕೆ ತಂದರೆ ಅವುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ಜಮೀನನ್ನು ಅಕ್ರಮವಾಗಿ ಬಿಟ್ಟುಕೊಡುವುದು ಅಥವಾ ಒತ್ತುವರಿಗೆ ಸಹಕರಿಸುವ ಅಧಿಕಾರಿಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು. ಭೂಸುಧಾರಣಾ ಕಾಯ್ದೆಯ 79ಎ ಮತ್ತು 79ಬಿ ಕಲಂಗಳಿಗೆ ಸಂಬಂಧಿಸಿದ ತಿದ್ದುಪಡಿ ಕುರಿತ ವಿಷಯ ಸರ್ಕಾರದ ಚರ್ಚೆಯ ಹಂತದಲ್ಲಿದ್ದು, ಯಾವ ರೀತಿಯ ಬದಲಾವಣೆಗಳನ್ನು ತರಬೇಕು ಎಂಬುದರ ಕುರಿತು ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಒಟ್ಟಾರೆ ಮಳೆಯ ಪ್ರಮಾಣ ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆಯಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳನ್ನು ಈಗಾಗಲೇ ಬರಪೀಡಿತವೆಂದು ಘೋಷಿಸಲಾಗಿದೆ. ಸರ್ಕಾರದ ನಿಯಮಗಳ ಪ್ರಕಾರ ಬರ ಪರಿಹಾರ ಹಾಗೂ ಇತರ ನೆರವು ಪಡೆಯಲು ಅರ್ಹವಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈಗಾಗಲೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ₹1 ಕೋಟಿ ಅನುದಾನ ಒದಗಿಸಿದೆ. ಜಿಲ್ಲೆಗಳಿಗೂ ಅಗತ್ಯಕ್ಕೆ ಅನುಗುಣವಾಗಿ 4 ರಿಂದ 5 ಕೋಟಿ ಅನುದಾನ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ವಿಪತ್ತು ನಿರ್ವಹಣೆಯ ಪಿ.ಡಿ. ಖಾತೆಯಲ್ಲಿ ಪ್ರಸ್ತುತ ₹9 ಕೋಟಿ ಅನುದಾನ ಲಭ್ಯವಿದೆ. ಲಭ್ಯವಿರುವ ಹಣವನ್ನು ಸಮರ್ಪಕವಾಗಿ ಬಳಸಿಕೊಂಡು ಜನರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಗತ್ಯವಿದ್ದರೆ ಸರ್ಕಾರದಿಂದ ಹೆಚ್ಚುವರಿ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಕೇಂದ್ರ ಸರ್ಕಾರದ ಎನ್‍ಡಿಆರ್‍ಎಫ್ ಮಾರ್ಗಸೂಚಿಗಳ ಪ್ರಕಾರ ರಾಜ್ಯಕ್ಕೆ ಬರ ಪರಿಹಾರ ಒದಗಿಸುವಂತೆ ಕೋರಿ ವಿವರವಾದ ಮನವಿ ಪತ್ರ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳು, ನಾನು ಹಾಗೂ ವಿರೋಧ ಪಕ್ಷಗಳ ಪ್ರತಿನಿಧಿಗಳನ್ನು ಒಳಗೊಂಡ ಸರ್ವಪಕ್ಷ ನಿಯೋಗದೊಂದಿಗೆ ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವರು, ಕೃಷಿ ಸಚಿವರು ಹಾಗೂ ಪ್ರಧಾನಮಂತ್ರಿಗಳನ್ನು ಭೇಟಿ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.