ನೆಲಮಂಗಲ/ದಾಬಸ್‍ಪೇಟೆ: ಕನ್ನಡ ಸಾಹಿತ್ಯ ಪರಿಷತ್ತು ಕೇವಲ ವೇದಿಕೆ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಕನ್ನಡ ಶಾಲೆಗಳ ಸಬಲೀಕರಣ ಹಾಗೂ ಗಡಿಭಾಗಗಳಲ್ಲಿ ಕನ್ನಡ ಭಾಷೆಯ ರಕ್ಷಣೆಗೆ ನೂತನ ಆಡಳಿತ ಮಂಡಳಿ ಶ್ರಮಿಸಬೇಕು ಎಂದು ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ತಿಳಿಸಿದರು
ನೆಲಮಂಗಲ/ದಾಬಸ್‍ಪೇಟೆ: ಕನ್ನಡ ಸಾಹಿತ್ಯ ಪರಿಷತ್ತು ಕೇವಲ ವೇದಿಕೆ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಕನ್ನಡ ಶಾಲೆಗಳ ಸಬಲೀಕರಣ ಹಾಗೂ ಗಡಿಭಾಗಗಳಲ್ಲಿ ಕನ್ನಡ ಭಾಷೆಯ ರಕ್ಷಣೆಗೆ ನೂತನ ಆಡಳಿತ ಮಂಡಳಿ ಶ್ರಮಿಸಬೇಕು ಎಂದು ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ತಿಳಿಸಿದರು.
ನೆಲಮಂಗಲದ ದಿವ್ಯಜ್ಯೋತಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕಸಾಪ ನೆಲಮಂಗಲ ನಗರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಮಹಾರಾಜರು ಮತ್ತು ಸರ್. ಎಂ.ವಿಶ್ವೇಶ್ವರಯ್ಯನವರ ದೂರದೃಷ್ಟಿಯಿಂದ ಸ್ಥಾಪಿತವಾದ ಕನ್ನಡ ಸಾಹಿತ್ಯ ಪರಿಷತ್ ಘನತೆಯನ್ನು ಎತ್ತಿಹಿಡಿಯುವುದು ನೂತನ ಪದಾಧಿಕಾರಿಗಳ ಕರ್ತವ್ಯ. ಮುಂದಿನ ದಿನಗಳಲ್ಲಿ ಗ್ರಾಮೀಣ ಮಟ್ಟದಲ್ಲೂ ಕನ್ನಡ ಸಾಹಿತ್ಯದ ಚಟುವಟಿಕೆಗಳನ್ನು ತಲುಪಿಸಬೇಕು. ಯುವಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾ ಪ್ರೇಮ ಮೂಡಿಸಲು ವಿಶೇಷ ಸಾಹಿತ್ಯ ಕಮ್ಮಟಗಳು, ಕವಿಗೋಷ್ಠಿಗಳು ಮತ್ತು ದತ್ತಿ ಉಪನ್ಯಾಸಗಳನ್ನು ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.
ಕಸಾಪ ನೆಲಮಂಗಲ ರಾಜ್ಯ ಪ್ರತಿನಿಧಿ ಡಾ.ಕೃಷ್ಣಮೂರ್ತಿ ಮಾತನಾಡಿ, ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವಲ್ಲಿ ಕಸಾಪ ಪಾತ್ರ ಮಹತ್ವದ್ದಾಗಿದೆ. ಯುವ ಸಮುದಾಯದಲ್ಲಿ ಸಾಹಿತ್ಯಾಸಕ್ತಿ ಬೆಳೆಸಿ ಭಾಷಾಭಿವೃದ್ಧಿಗೆ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಗೌರವ ಕಾರ್ಯದರ್ಶಿ ಡಾ. ಜಿ.ಗಂಗರಾಜು ಮಾತನಾಡಿ, ಕಸಾಪ ಕೇವಲ ಸಾಹಿತ್ಯ ಚಟುವಟಿಕೆಗಳಿಗೆ ಸೀಮಿತವಾಗದೆ ಸಮಾಜಮುಖಿ, ಜನಪರ ಕಾಳಜಿ ವ್ಯಕ್ತಪಡಿಸುತ್ತಿದೆ. ನೂತನ ಪದಾಧಿಕಾರಿಗಳು ನೆಲಮಂಗಲದಲ್ಲಿ ಕನ್ನಡದ ಕಹಳೆಯನ್ನು ಇನ್ನಷ್ಟು ಗಟ್ಟಿಯಾಗಿ ಮೊಳಗಿಸುವಂತೆ ಹೇಳಿದರು.
ಇದೇ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೆಲಮಂಗಲ ನಗರ ಘಟಕದ ನೂತನ ಅಧ್ಯಕ್ಷರಾಗಿ ಪವನ್ ಕುಮಾರ್ ನಾಯಕ್ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಎನ್.ಗಣೇಶ್, ಪೌರಾಯುಕ್ತ ಗಂಗಾಧರಯ್ಯ, ಕಸಾಪ ತಾಲೂಕು ಅಧ್ಯಕ್ಷ ವೀರಸಾಗರ ಭಾನುಪ್ರಕಾಶ್, ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯ ಕಾರ್ಯದರ್ಶಿ ಆರ್.ಕೊಟ್ರೇಶ್, ಕೇಶವಮೂರ್ತಿ, ಮುರಳಿ ಕುಮಾರ್, ಸಿದ್ದಯ್ಯ, ಪ್ರೆಸ್ ಕ್ಲಬ್ ಕೌನ್ಸಿಲ್ ತಾಲೂಕು ಅಧ್ಯಕ್ಷ ವಿಜಯ್ ಹೊಸಪಾಳ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಭಿಷೇಕ್, ಗಂಗಾಧರ್, ಶಿವಕುಮಾರ್, ಬೈಲೇಗೌಡ, ಮಲ್ಲೇಶ್, ಪುರುಶೊತ್ತಮ್, ಸರಸ್ವತಿ, ಕಲಾವತಿ, ಚೇತನ್ ಕುಮಾರ್, ಶಶಿದಾಸ್ ಕಸಾಪ ಸದಸ್ಯರು ಉಪಸ್ಥಿತರಿದ್ದರು.
ಪೋಟೋ 3 :
ನೆಲಮಂಗಲದ ದಿವ್ಯಜ್ಯೋತಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕಸಾಪ ನೆಲಮಂಗಲ ನಗರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ವನಕಲ್ಲು ಮಠದ ಡಾ.ಶ್ರೀ ಬಸವರಮಾನಂದ ಸ್ವಾಮೀಜಿ ಉದ್ಘಾಟಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.