ದೊಡ್ಡಬಳ್ಳಾಪುರ: ಆಶ್ರಯ ನಿವೇಶನ ವಸತಿ ಯೋಜನೆ ಅಡಿ ಮಂಜೂರಾಗಿರುವ ಜಮೀನಿನಲ್ಲಿ ನಿವೇಶನಗಳ ರಚನೆ ಮತ್ತು ಬಡಾವಣೆ ಅಭಿವೃದ್ಧಿ, ನಿವೇಶನ ರಹಿತರಿಗೆ ಹಕ್ಕು ಪತ್ರ ವಿತರಿಸುವಲ್ಲಿ ಕೆಲವು ಗ್ರಾಮ ಪಂಚಾಯಿತಿಗಳ ನಿರ್ಲಕ್ಷ್ಯ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ತಾಲೂಕು ಘಟಕ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸಿ, ಶಾಸಕ ಧೀರಜ್ ಮುನಿರಾಜ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕರವೇ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ಗ್ರಾಮೀಣ ಪ್ರದೇಶದ ನಿವೇಶನ ರಹಿತ ಬಡಜನರಿಗೆ ಆದ್ಯತೆಯ ಮೇರಿಗೆ ಶೀಘ್ರವಾಗಿ ಆಶ್ರಯ ವಸತಿ ಅಥವಾ ನಿವೇಶನ ಒದಗಿಸಬೇಕು. ಸರ್ಕಾರದ ಯೋಜನೆಗಳಡಿಯಲ್ಲಿ ಇತರ ತಾಲೂಕುಗಳಲ್ಲಿ ಈಗಾಗಲೇ ಜಮೀನು ಹಂಚಿಕೆ ಪ್ರಯತ್ನಗಳು ನಡೆದಿವೆ. ಆದರೆ ದೊಡ್ಡಬಳ್ಳಾಪುರದಲ್ಲಿ ಈ ಪ್ರಯತ್ನಗಳು ನಡೆದಿಲ್ಲ ಎಂದು ಆರೋಪಿಸಿದರು.
ಕೆಲ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿ ಆಹ್ವಾನಿಸಿ, ಶುಲ್ಕ ಕಟ್ಟಿಸಿಕೊಂಡಿದ್ದರೂ ಪ್ರಕ್ರಿಯೆ ಜಾರಿಯಾಗಿಲ್ಲ. ಕೆಲವೆಡೆ ಹಕ್ಕು ಪತ್ರ ಹಂಚಿಕೆ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ. ರಾಜೀವ್‌ಗಾಂಧಿ ವಸತಿ ನಿಗಮದ ಅಡಿಯಲ್ಲಿ ಸರ್ಕಾರಿ ಜಾಗವನ್ನು ಗುರುತಿಸಿ ಬಡಾವಣೆಯಾಗಿ ಅಭಿವೃದ್ದಿ ಮಾಡಿ ನಿವೇಶನ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡಿ ಹಕ್ಕುಪತ್ರ ಹಂಚಿಕೆ ಮಾಡಲು ಮುಂದಾಗಬೇಕು. ಜಮೀನು ಮಂಜೂರಾಗದೇ ಇದ್ದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಸರ್ಕಾರಿ ಜಾಗವನ್ನು ಗುರುತಿಸಿ ಮಂಜೂರಾತಿ ಪ್ರಸ್ತಾವನೆ ಸಲ್ಲಿಸಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.ಕೆಲ ಗ್ರಾಮ ಪಂಚಾಯಿತಿ ಪಿಡಒಗಳ ನಿರ್ಲಕ್ಷ್ಯದಿಂದ ಸಮಸ್ಯೆ ಹೆಚ್ಚಾಗಿದೆ. ಕನಸವಾಡಿ, ಭಕ್ತರಹಳ್ಳಿ, ಹೊಸಹಳ್ಳಿ, ನಾಗಸಂದ್ರ, ಬಚ್ಚಹಳ್ಳಿ ಶಿವಪುರ, ಸೊಣ್ಣಪ್ಪನಹಳ್ಳಿ, ದೊಡ್ಡಹೆಜ್ಜಾಜಿ, ಮಧುರನಹೊಸಹಳ್ಳಿ, ಚಿಕ್ಕಬೆಳವಂಗಲ, ಪಿಂಡಕೂರು ತಿಮ್ಮನಹಳ್ಳಿ ಮತ್ತಿತರ ಕಡೆಗಳಲ್ಲಿ ಸರ್ಕಾರಿ ಜಾಗ ಇದ್ದು, ಪಹಣಿಗಳಲ್ಲಿ ಆಶ್ರಯ ನಿವೇಶನ ಯೋಜನೆ ಹಾಗೂ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ವರ್ಗಾಯಿಸಿರುವುದಾಗಿ ಮಾಹಿತಿ ಬರುತ್ತಿದೆ. ಆದರೆ ಅಭಿವೃದ್ದಿ ಪಡಿಸಿರುವ ದಾಖಲೆಗಳಿಲ್ಲ. ಕೂಡಲೇ ಈ ಬಗ್ಗೆ ಕ್ರಮ ವಹಿಸಿ ಅರ್ಹರಿಗೆ ವಸತಿ, ಸೂರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
2ಕೆಡಿಬಿಪಿ1-