ಭರವಸೆ ವಿಫಲವಾದರೆ ತೋಡಿನಲ್ಲಿ ಹರಿಯುವ ತ್ಯಾಜ್ಯ ನೀರನ್ನು ಕ್ಯಾನು ಬ್ಯಾರಲ್‌ಗಳಲ್ಲಿ ಸಂಗ್ರಹಿಸಿ ಪಟ್ಟಣ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ನಾಗರಿಕರು ಎಚ್ಚರಿಗೆ ನೀಡಿದರು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಹೋಟೆಲ್ ಬಾರ್, ವಸತಿ ಸಮುಚ್ಚಯಗಳ ಘನತ್ಯಾಜ್ಯವು ಮಳೆ ನೀರು ಹಾದು ಹೋಗುವ ತೋಡಿನಲ್ಲಿ ಹರಿಯಲು ಬಿಟ್ಟಿರುವುದನ್ನು ವಿರೋಧಿಸಿ ಹಾಗೂ ಘನತ್ಯಾಜ್ಯ ವಿಲೇವಾರಿಗೆ ಶಾಶ್ವತ ಮುಕ್ತಿ ನೀಡಬೇಕೆಂದು ಆಗ್ರಹಿಸಿ ಕಿನ್ನಿಗೋಳಿ ಬಿತ್ತುಲ್ ಪರಿಸರದ ಸಾರ್ವಜನಿಕರು ಪಟ್ಟಣ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಕಿನ್ನಿಗೋಳಿ ಪಟ್ಟಣ ಪಂಚಾಯಿತಿ 2021ರಲ್ಲಿ ಅಸ್ತಿತ್ವಕ್ಕೆ ಬಂದು, ಮೂರು ವರ್ಷಗಳು ಕಳೆದರೂ ಇಲ್ಲಿನ ಸ್ಥಳೀಯ ಸಮಸ್ಯೆಗಳಿಗೆ, ಮೂಲಭೂತ ಸೌಕರ್ಯವಾದ ಸಮರ್ಪಕ ಕಸ ವಿಲೇವಾರಿ, ಘನತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಸಾಧ್ಯವಾಗಿಲ್ಲ, ವಸತಿ ಸಮುಚ್ಚಯಗಳು ವಾಣಿಜ್ಯ ಸಂಕೀರ್ಣಗಳು ದಿನದಿಂದ ದಿನಕ್ಕೆ ತಲೆಎತ್ತುತ್ತಿದ್ದು ಘನತ್ಯಾಜ್ಯ ಕಸಗಳ ಪ್ರಮಾಣವೂ ಹೆಚ್ಚಿ ಸಮಸ್ಯೆ ಬಿಗಡಾಯಿಸುತ್ತಿದೆ. ಪಟ್ಟಣ ಪಂಚಾಯಿತಿ ಆಗಿ ಮೇಲ್ದರ್ಜೆಗೇರಿದ ಬಳಿಕ ನಾಲ್ಕು ಪಟ್ಟು ತೆರಿಗೆ ಹೆಚ್ಚಿಸಲಾಗಿದೆ, ತೆರಿಗೆ ಹಣವನ್ನು ಕ್ಲಪ್ತ ಸಮಯಕ್ಕೆ ಪಡೆದುಕೊಳ್ಳುವ ಪಟ್ಟಣ ಪಂಚಾಯಿತಿ ಆಡಳಿತವು ಸಮರ್ಪಕವಾಗಿ ಮೂಲ ಸೌಕರ್ಯಗಳನ್ನ ಒದಗಿಸುತ್ತಿಲ್ಲ, ಈಗಾಗಲೇ ಈ ಸಮಸ್ಯೆ ಬಗ್ಗೆ ಕಳೆದೊಂದು ವರ್ಷದಿಂದ ಲಿಖಿತ ದೂರು ನೀಡಿದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನಲ್ಲ, ಸ್ಥಳೀಯಾಡಳಿತಕ್ಕೆ ಚುನಾವಣೆ ನಡೆಯದೆ ಇರುವುದರಿಂದ ಆಡಳಿತ ಮಂಡಳಿ ರಚನೆಯಾಗಿರುವುದು ಸಮಸ್ಯೆಯಾಗಿದ್ದು ಬಿತ್ತುಲ್ ಪರಿಸರದಲ್ಲಿ ಹರಿಯುವ ಘನ ತ್ಯಾಜ್ಯ ಮುಕ್ತಿಗೆ ಕಾಲಮಿತಿ ತಿಳಿಸುವಂತೆ ನಾಗರಿಕರು ಒತ್ತಾಯಿಸಿದರು.
ಈ ಸಂದರ್ಭ ಮುಖ್ಯಾಧಿಕಾರಿಗಳು ಸಮಸ್ಯೆಯನ್ನು ಎರಡು ದಿನಗಳಲ್ಲಿ ಸರಿಪಡಿಸುವ ಭರವಸೆ ನೀಡಿದರು.
ನಾಗರಿಕರು ಮಾತನಾಡಿ, ಭರವಸೆ ವಿಫಲವಾದರೆ ತೋಡಿನಲ್ಲಿ ಹರಿಯುವ ತ್ಯಾಜ್ಯ ನೀರನ್ನು ಕ್ಯಾನು ಬ್ಯಾರಲ್‌ಗಳಲ್ಲಿ ಸಂಗ್ರಹಿಸಿ ಪಟ್ಟಣ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಂತಾನ್ ಡಿಸೋಜ, ಸಾಮಾಜಿಕ ಕಾರ್ಯಕರ್ತ ಸ್ಪ್ಯಾನಿ ಪಿಂಟೋ ಮತ್ತು ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.