ನೇಹಾ ಹಿರೇಮಠ ಬರ್ಬರ ಕೊಲೆ ಪ್ರಕರಣ ಸಮಗ್ರ ತನಿಖೆಯಾಗಲಿ

KannadaprabhaNewsNetwork |  
Published : Apr 21, 2024, 02:27 AM IST
ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಕೊಲೆಯನ್ನು ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗೆ ಕಠಿಣ ಶಿಕ್ಷೆ ವಿಧಿಸುವುದರ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು.

ಬಳ್ಳಾರಿ: ಹುಬ್ಬಳ್ಳಿಯ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಕೊಲೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಕಾಲೇಜಿನ ಆವರಣದಲ್ಲಿಯೇ ವಿದ್ಯಾರ್ಥಿನಿಯನ್ನು ಕೊಲೆಗೈದಿರುವ ಘಟನೆ ತೀವ್ರ ಆತಂಕ ಮೂಡಿಸಿದೆ. ಪ್ರೀತಿ ನಿರಾಕರಿಸಿದ ಕಾರಣಕ್ಕಾಗಿ ಕಾಲೇಜಿಗೆ ನುಗ್ಗಿ ವಿದ್ಯಾರ್ಥಿನಿ ಕೊಲೆಗೈದಿದ್ದಾನೆ. ಈ ಘಟನೆ ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಗೊತ್ತಾಗುತ್ತಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಕೂಡಲೇ ಪ್ರಕರಣವನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಬೇಕು. ದುಷ್ಕರ್ಮಿ ಸೇರಿದಂತೆ ಆತನಿಗೆ ಕುಮ್ಮಕ್ಕು ನೀಡಿರುವವರನ್ನು ಸಹ ಬಂಧಿಸಿ, ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ವಿನೋದ್ ರಾಂಪುರ ಮಾತನಾಡಿ, ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗೆ ಕಠಿಣ ಶಿಕ್ಷೆ ವಿಧಿಸುವುದರ ಮೂಲಕ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು. ರಾಜ್ಯದ ಎಲ್ಲ ಶಾಲಾ-ಕಾಲೇಜುಗಳ ಬಳಿ ಪೊಲೀಸರು ಮಫ್ತಿಯಲ್ಲಿ ಕಾರ್ಯನಿರ್ವಹಿಸಿ ಸಂಭಾವ್ಯ ಘಟನೆಗಳನ್ನು ತಡೆಯಲು ಪ್ರಯತ್ನಿಸಬೇಕು. ಕಾಲೇಜುಗಳನ್ನು ಸುರಕ್ಷಿತಾ ಕೇಂದ್ರಗಳನ್ನಾಗಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ತೆಗೆದುಕೊಳ್ಳಬೇಕು. ಸಾಧ್ಯವಾದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದ ಪ್ರತಿಭಟನಾಕಾರರು ಕೊಲೆಗೈದ ದುಷ್ಕರ್ಮಿಯನ್ನು ಕಠಿಣವಾಗಿ ಶಿಕ್ಷಿಸಬೇಕು. ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡಬೇಕು. ಇಂತಹ ಕೃತ್ಯಗಳು ಮತ್ತೆ ಜರುಗದಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ರಾಜ್ಯಪಾಲರು, ಮುಖ್ಯಮಂತ್ರಿ, ಗೃಹಮಂತ್ರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತ ಮೂಲಕ ಕಳಿಸಿಕೊಡಲಾಯಿತು. ಎಬಿವಿಪಿ ಜಿಲ್ಲಾ ಪದಾಧಿಕಾರಿಗಳು ಸೇರಿದಂತೆ ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ