ನೇಹಾ ಹತ್ಯೆ: ಮುಂದುವರಿದ ಪ್ರತಿಭಟನೆ

KannadaprabhaNewsNetwork |  
Published : Apr 22, 2024, 02:19 AM IST
ನೇಹಾ ಹತ್ಯೆ ಖಂಡಿಸಿ ಮುನವಳ್ಳಿ ಬಂದ್ ಕರೆಯ ಹಿನ್ನೆಲೆಯಲ್ಲಿ  ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು, ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿರುವ ಮುಖ್ಯ ರಸ್ತೆ. | Kannada Prabha

ಸಾರಾಂಶ

ನೇಹಾ ಹತ್ಯೆ ಖಂಡಿಸಿ ತಾಲೂಕಿನ ಮುನವಳ್ಳಿಯ ಪಂಚಲಿಂಗೇಶ್ವರ ವೃತ್ತದಲ್ಲಿ ಭಾನುವಾರ 3ನೇ ದಿನವೂ ಪ್ರತಿಭಟನೆ ಮುಂದುವರೆದಿದೆ.

ಕನ್ನಡಪ್ರಭ ವಾರ್ತೆ ಸವದತ್ತಿ

ನೇಹಾ ಹತ್ಯೆ ಖಂಡಿಸಿ ತಾಲೂಕಿನ ಮುನವಳ್ಳಿಯ ಪಂಚಲಿಂಗೇಶ್ವರ ವೃತ್ತದಲ್ಲಿ ಭಾನುವಾರ 3ನೇ ದಿನವೂ ಪ್ರತಿಭಟನೆ ಮುಂದುವರೆದಿದ್ದು, ಘಟನೆ ಖಂಡಿಸಿ ಪಟ್ಟಣ ಬಂದ್‌ ಗೆ ಕರೆ ನೀಡಿರುವ ಹಿನ್ನೆಲೆ ಮುನವಳ್ಳಿ ಪಟ್ಟಣದ ರಸ್ತೆಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ. ಸಾರಿಗೆ ಸಂಪರ್ಕ ಹೊರತುಪಡಿಸಿ ಅಂಗಡಿ ಮುಂಗಟ್ಟು ಸಂಪೂರ್ಣ ವಹಿವಾಟು ನಿಲ್ಲಿಸಿವೆ. 3ನೇ ದಿನವಾದ ಭಾನುವಾರವೂ ಸಹ ಮುನವಳ್ಳಿಯ ಎಲ್ಲ ವ್ಯಾಪಾರಸ್ಥರು ಅಂಗಡಿ ಮುಂಗಟ್ಟು ಬಂದ್ ಮಾಡಿ ಬೆಂಬಲ ವ್ಯಕ್ತಪಡಿಸಿದರು.

ಮೂರನೇ ದಿನದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡ ವಿರುಪಾಕ್ಷ ಮಾಮನಿ ಮಾತನಾಡಿ, ಹಿಂದೂ ವಿದ್ಯಾರ್ಥಿನಿಯನ್ನು ಹಾಡಹಗಲೇ ಕಾಲೇಜು ಕ್ಯಾಂಪಸ್‌ ನಲ್ಲಿ ಹತ್ಯೆ ಮಾಡಿರುವ ಘಟನೆಯಿಂದ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕೊಲೆ ಆರೋಪಿಗೆ ತಕ್ಷಣ ಶಿಕ್ಷೆಗೊಳಪಡಿಸಿದರೆ ಮಾತ್ರ ವಿದ್ಯಾರ್ಥಿಗಳಲ್ಲಿರುವ ಭಯ ಕಡಿಮೆಯಾಗಲು ಸಾಧ್ಯ. ಸರ್ಕಾರ ಕೂಡಲೇ ಪಾತಕಿಗಳನ್ನು ಮಟ್ಟಹಾಕುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ಜೆಡಿಎಸ್ ಮುಖಂಡ ಸೌರವ್ ಚೋಪ್ರಾ ಮಾತನಾಡಿ, ಸರ್ಕಾರ ಎಚ್ಚೆತ್ತುಕೊಂಡು ತಪ್ಪಿತಸ್ಥರಿಗೆ ತಕ್ಷಣ ಶಿಕ್ಷೆ ಕೊಡಬೇಕು. ಸರ್ಕಾರ ಪ್ರಕರಣವನ್ನು ತಿರುಚುವ ಪ್ರಯತ್ನ ಮಾಡುತ್ತಿರುವುದು ನೇಹಾ ಕುಟುಂಬಕ್ಕೆ ನೋವನ್ನುಂಟು ಮಾಡುತ್ತಿದೆ. ನೇಹಾ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ತಕ್ಷಣ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕೆಂದು ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್‌ ಮಾತನಾಡಿ, ಕೊಲೆಗಾರರಿಗೆ ಪುಷ್ಟಿ ನೀಡುವಂತಹ ಹೇಳಿಕೆಗಳನ್ನು ಸರ್ಕಾರ ನೀಡುತ್ತಿದ್ದು, ಇದರಿಂದ ನೇಹಾ ಕುಟುಂಬಕ್ಕೆ ನೋವಾಗಿದೆ. ಪ್ರಕರಣವನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ವೈಯಕ್ತಿಕ ಕಾರಣದಿಂದ ಕೊಲೆ ನಡೆದಿದೆ ಎನ್ನುತ್ತಿರುವುದು ಯಾವ ನ್ಯಾಯ. ಪ್ರೀತಿ ವಿರೋಧಿಸಿದರೆ ಕೊಲೆ ಮಾಡುವಷ್ಟು ಕ್ರೂರತನ ಮೆರೆಯುವಂತವರಿಗೆ ಕಠಿಣ ಶಿಕ್ಷೆಯಾಗಬೇಕಿದ್ದು, ಸರ್ಕಾರ ಇಂತಹವರಿಗೆ ಸಹಕಾರ ನೀಡದೆ ಯುಪಿ ಮಾದರಿಯಲ್ಲಿ ಶಿಕ್ಷೆ ನೀಡುವಂತೆ ಆಗ್ರಹಿಸಿದರು.

ಸುಭಾಸ ಗಿದಿಗೌಡರ ಮಾತನಾಡಿ, ನೇಹಾ ಹತ್ಯೆಯ ಮೂರು ದಿನದ ಅಂತರದಲ್ಲಿ ಮುನವಳ್ಳಿಯಲ್ಲಿ ಮತಾಂಧರು ಹಿಂದು ಮಹಿಳೆಯ ಮೇಲೆ ದಬ್ಬಾಳಿಕೆ ನಡೆಸಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಮುನವಳ್ಳಿಯ ರಫೀಕ್ ಬೇಪಾರಿ ಎಂಬಾತ ವಿವಾಹಿತ ಮಹಿಳೆಯೊಬ್ಬಳನ್ನು ಪುಸಲಾಯಿಸಿ ಮತಾಂತರ ಮಾಡಿಸುವ ದುಷ್ಕೃತ್ಯಕ್ಕೆ ಕೈ ಹಾಕಿದ್ದು, ಅನ್ಯಾಯಕ್ಕೊಳಗಾದ ಯುವತಿ ತನಗಾಗಿರುವ ಅನ್ಯಾಯ ಹೊರಹಾಕಿದ್ದಾಳೆ. ಇಂತಹ ಪಾತಕಿಗಳಿಗೆ ತಕ್ಕ ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಿದರು.

ಪಂಚನಗೌಡ ದ್ಯಾಮನಗೌಡರ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಸರ್ಕಾರ ದುಷ್ಕರ್ಮಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸದ ಸಂಗತಿ ಎಂದರು.

ಶಂಕರಗೌಡ ಪಾಟೀಲ, ಮಲ್ಲೇಶ ಸೂಳೆಬಾವಿ, ಅಶೋಕ ಗೋಮಾಡಿ, ವಿನೋದ ಪಡಸಂಗಿ, ಶ್ರೀಕಾಂತ ಮಿರಜಕರ ಇತರರು ಉಪಸ್ಥಿತರಿದ್ದರು.

ಸಂಸ್ಕಾರ ನೀಡದಿದ್ದಲ್ಲಿ ಇಂತಹ ದುಷ್ಕೃತ್ಯ: ಸ್ವಾಮೀಜಿ

ಮನೆಯಲ್ಲಿ ಮಕ್ಕಳಿಗೆ ತಂದೆ ತಾಯಿ ಉತ್ತಮ ಸಂಸ್ಕಾರ ನೀಡದಿದ್ದರೆ ಮಕ್ಕಳು ತಪ್ಪು ದಾರಿ ಹಿಡಿಯುವುದು ಸಹಜ. ದುಷ್ಕೃತ್ಯ ಮಾಡಿದವರು ಹುಟ್ಟಿದ ಊರಿಗೆ ರಾಜ್ಯಕ್ಕೆ ಅಪಕೀರ್ತಿ ತರುತ್ತಿದ್ದಾರೆ ಎಂದು ಮುನವಳ್ಳಿ ಸೋಮಶೇಖರ ಮಠದ ಮುರಘೇಂದ್ರ ಸ್ವಾಮೀಜಿ ವಿಷಾದ ವ್ಯಕ್ತ ಪಡಿಸಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಏನೂ ಅರಿಯದ ಮುಗ್ದೆ ಹೆಣ್ಣು ಮಗಳನ್ನು ಭೀಕರವಾಗಿ ಕೊಲೆ ಮಾಡಿರುವುದು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಎಲ್ಲ ತಂದೆ ತಾಯಿಗಳು ಮಕ್ಕಳ ಮೇಲೆ ಕಾಳಜಿ ಮತ್ತು ಮಕ್ಕಳು ನಡೆಯ ಬಗ್ಗೆ ಗಮನ ಹರಿಸಬೇಕು ಎಂದರು. ಆರೋಪಿ ಫಯಾಜ್‌ಗೆ ಕಠಿಣ ಶಿಕ್ಷೆ ವಿಧಿಸಲಿ ಮುಂದಿನ ದಿನದಲ್ಲಿ ಯಾವುದೇ ಸಮಾಜದ ವ್ಯಕ್ತಿ ಈ ರೀತಿ ಹೇಯ ಕೃತ್ಯ ಮಾಡದಂತೆ ಸರ್ಕಾರಗಳು ಸೂಕ್ತ ಕಾನೂನು ಕೈಗೊಳ್ಳಲಿ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!