ಬಿಜೆಪಿ, ಆರ್‌ಎಸ್‌ಎಸ್‌ ಅಸ್ತಿತ್ವದಲ್ಲಿರಲು ನೆಹರು ಕಾರಣ

KannadaprabhaNewsNetwork |  
Published : Nov 20, 2025, 12:45 AM IST
ಹುಬ್ಬಳ್ಳಿ ಕಾರವಾರ ರಸ್ತೆಯ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ನಡೆದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಮಾತನಾಡಿದರು. | Kannada Prabha

ಸಾರಾಂಶ

ಪಾಕಿಸ್ತಾನ ಮತ್ತು ಬಾಂಗ್ಲಾ ದೇಶವನ್ನು ಭಾರತದಿಂದ ವಿಭಜಿಸದಿದ್ದರೆ ಪಾಕಿಸ್ತಾನದಲ್ಲಿನ 25 ಕೋಟಿ ಮುಸ್ಲಿಮರು ಹಾಗೂ ಬಾಂಗ್ಲಾ ದೇಶದ 17 ಕೋಟಿ ಮುಸ್ಲಿಂ ಪ್ರಜೆಗಳು ಭಾರತದಲ್ಲೇ ಉಳಿದುಕೊಳುತ್ತಿದ್ದರು. ಆಗ ಬಿಜೆಪಿ ಅಸ್ತಿತ್ವ ಇರುತ್ತಿತ್ತೇ? ಆರ್‌ಎಸ್‌ಎಸ್ ಸಂಘಟನೆ ಸ್ಥಾಪನೆ ಆಗುತ್ತಿತ್ತೇ?.

ಹುಬ್ಬಳ್ಳಿ:

ದೇಶದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂಘಟನೆ ಅಸ್ತಿತ್ವದಲ್ಲಿರಲು ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಅವರೇ ಕಾರಣ ಎಂಬುದನ್ನು ಮರೆಯಬಾರದು ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಜನ್ಮದಿನದ ಅಂಗವಾಗಿ ಇಲ್ಲಿನ ಕಾರವಾರ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳು ಭಾರತದಿಂದ ವಿಭಜನೆಯಾಗಲು ಜವಾಹರಲಾಲ್ ನೆಹರು ಅವರೇ ಕಾರಣ ಎಂದು ದೂಷಿಸುವ ಬಿಜೆಪಿ ನಾಯಕರು, ಅವರು ಪಾಕಿಸ್ತಾನ ಮತ್ತು ಬಾಂಗ್ಲಾ ದೇಶವನ್ನು ಭಾರತದಿಂದ ವಿಭಜಿಸದಿದ್ದರೆ ಪಾಕಿಸ್ತಾನದಲ್ಲಿನ 25 ಕೋಟಿ ಮುಸ್ಲಿಮರು ಹಾಗೂ ಬಾಂಗ್ಲಾ ದೇಶದ 17 ಕೋಟಿ ಮುಸ್ಲಿಂ ಪ್ರಜೆಗಳು ಭಾರತದಲ್ಲೇ ಉಳಿದುಕೊಳುತ್ತಿದ್ದರು. ಆಗ ಬಿಜೆಪಿ ಅಸ್ತಿತ್ವ ಇರುತ್ತಿತ್ತೇ? ಆರ್‌ಎಸ್‌ಎಸ್ ಸಂಘಟನೆ ಸ್ಥಾಪನೆ ಆಗುತ್ತಿತ್ತೇ? ಎಂದು ಪ್ರಶ್ನಿಸಿದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ತಮ್ಮ ಮನೆಗಳಲ್ಲಿ ಜವಾಹರಲಾಲ್ ನೆಹರು ಅವರ ಭಾವಚಿತ್ರ ಹಾಕಿಕೊಂಡು ಅವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದರು.

ಭಾರತದಲ್ಲಿ ಎಲ್ಲ ಸಮುದಾಯದವರು ಸಮಾನರಾಗಿ ಬಾಳಬೇಕು ಎಂಬ ಕಾರಣಕ್ಕೆ ಇಂದಿರಾ ಗಾಂಧಿ ಅವರು `ಊಳುವವನೇ ಭೂಮಿಯ ಒಡೆಯ'''' ಕಾಯ್ದೆ ಜಾರಿಗೆ ತಂದರು. ಇದರಿಂದ ಕೋಟ್ಯಾಂತರ ಜನ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕೇವಲ ಬಂಡವಾಳ ಶಾಹಿಗಳ ಮತ್ತು ಶ್ರೀಮಂತರಿಗೆ ಸಾಲ ಸೌಲಭ್ಯ ಇದ್ದ ಕಾಲಘಟ್ಟದಲ್ಲಿ ಹೆಚ್ಚಿನ ಬಡ್ಡಿಗೆ ಹಣ ನೀಡುತ್ತಿದ್ದ ಲೇವಾದೇವಿಗಾರರಿಂದಲೇ ಜೀತ ಪದ್ಧತಿ ಹೆಚ್ಚುತ್ತಿದೆ ಎಂದರಿತ ಇಂದಿರಾ ಗಾಂಧಿ ಅವರು ಜೀತ ಪದ್ಧತಿ ರದ್ಧು ಮಾಡಿದರು. ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದರು. ಅದರಿಂದ ಬಡ, ಮಧ್ಯಮ ವರ್ಗದವರಿಗೆ ಅತೀ ಕಡಿಮೆ ಬಡ್ಡಿ ದರಕ್ಕೆ ಸಾಲ ಸೌಲಭ್ಯ ದೊರೆಯುವಂತಾಗಿದ್ದು, ಜೀತ ಪದ್ಧತಿ ಸಂಪೂರ್ಣ ನಿರ್ನಾಮವಾಗಿದೆ ಎಂದು ಲಾಡ್‌ ಹೇಳಿದರು.

ಹಿಂದಿನ ಯೋಜನೆಗಳೇ ಈಗ ಜಾರಿ:

ಇಂದಿರಾ ಗಾಂಧಿ ಅವರು ಪ್ರಧಾನಿ ಇದ್ದಾಗ ಹಾಕಿಕೊಂಡಿದ್ದ ಯೋಜನೆಗಳನ್ನೇ ಇಂದು ಪ್ರಧಾನಿ ನರೇಂದ್ರ ಮೋದಿ ಜಾರಿಗೊಳಿಸುತ್ತಿದ್ದಾರೆ. ಅಲ್ಲದೆ, ತಮ್ಮದೇ ಯೋಜನೆ ಎಂದು ಬಿಂಬಿಸಿಕೊಂಡು ತಾವೇ ಬೆನ್ನು ಚಪ್ಪರಿಸಿಕೊಳ್ಳುತ್ತಿದ್ದಾರೆ. ಹಲವು ದೇಶಗಳ ವಿರೋಧದ ನಡುವೆಯೂ ಪಾಕಿಸ್ತಾನ ಸೇನೆಯನ್ನು ಮಂಡಿಯೂರುವಂತೆ ಮಾಡಿದ್ದ ಇಂದಿರಮ್ಮನ ಬಗ್ಗೆ ಸ್ವತಃ ಅಟಲ್ ಬಿಹಾರಿ ವಾಜಪೇಯಿ ಅವರೇ ಶ್ಲಾಘನೆ ವ್ಯಕ್ತಪಡಿಸಿದ್ದರು. ಆದರೆ, ಈಗಿನ ಬಿಜೆಪಿ ನಾಯಕರಿಗೆ ಇಂದಿರಾ ಗಾಂಧಿ ಅವರು ದೇಶಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮಾಹಿತಿಯೇ ಇಲ್ಲ ಎಂದು ಕಿಡಿಕಾರಿದರು.

ವಿಧಾನಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಇಂದಿರಾ ಗಾಂಧಿ ಅವರು ದೇಶಕಂಡ ಅಪ್ರತಿಮ ನಾಯಕಿ. ಇಡೀ ಪ್ರಪಂಚ ಅವರನ್ನು ಉಕ್ಕಿನ ಮಹಿಳೆ ಎಂದು ಗುಣಗಾನ ಮಾಡುತ್ತಿತ್ತು. ಸತತ 16 ವರ್ಷ ದೇಶವನ್ನು ಉತ್ತಮ ರೀತಿಯಲ್ಲಿ ಆಳಿ ಸೈ ಎನ್ನಿಸಿಕೊಂಡಿದ್ದರು. 20 ಅಂಶಗಳ ಕಾರ್ಯಕ್ರಮ ನೀಡುವ ಮೂಲಕ ದೇಶದ ಜನರ ಅಭ್ಯುದಯಕ್ಕೆ ಕಾರಣೀಭೂತರಾಗಿದ್ದರು ಎಂದರು.

ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಹುಡಾ ಅಧ್ಯಕ್ಷ ಶಾಕಿರ ಸನದಿ, ಪಾಲಿಕೆಯ ವಿಪಕ್ಷ ನಾಯಕ ಇಮ್ರಾನ್ ಯಲಿಗಾರ, ಮುಖಂಡರಾದ ಸದಾನಂದ ಡಂಗನವರ, ವಸಂತ ಲದ್ವಾ, ಎಂ.ಎಸ್. ಅಕ್ಕಿ, ಮೋಹನ ಲಿಂಬಿಕಾಯಿ, ಸತೀಶ ಮೆಹರವಾಡೆ, ಬಸವರಾಜ ಗುರಿಕಾರ, ರಾಜಶೇಖರ ಮೆಣಸಿನಕಾಯಿ, ಮಹೇಂದ್ರ ಸಿಂಘಿ, ಶಿವಾನಂದ ಮುತ್ತಣ್ಣವರ, ಪ್ರೇಮನಾಥ ಚಿಕ್ಕತುಂಬಳ, ಅರ್ಜುನ ಪಾಟೀಲ ಸೇರಿದಂತೆ ಹಲವರಿದ್ದರು.

PREV

Recommended Stories

ಮೀಸಲು ಕ್ಷೇತ್ರ ಬದಲಾದರೆ ಕೊರಟಗೆರೆ ಕ್ಷೇತ್ರದಿಂದ ಸ್ಪರ್ಧೆ
ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೊ. ಎಂ.ಆರ್. ಗಂಗಾಧರ್‌ ಸಲಹೆ