- ಪಿ.ಸಿ.ಎ.ಆರ್.ಡಿ ಬ್ಯಾಂಕ್ ನೂತನ ಅಧ್ಯಕ್ಷ ಕೆ.ಎಂ.ಸುಂದರೇಶ್, ಉಪಾಧ್ಯಕ್ಷ ಎಚ್.ಎಸ್.ಕೌಸಿಕ್ ಗೆ ಅಭಿನಂದನೆ
ಜವಹರಲಾಲ್ ನೆಹರೂ ಅವರು ಸಹಕಾರ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದ್ದರು. ಪ್ರತಿ ವರ್ಷ ಅವರು ಹುಟ್ಟಿದ ದಿನದಿಂದ ಸಹಕಾರ ಸಪ್ತಾಹ ಪ್ರಾರಂಭಿಸಲಾಗುತ್ತದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಶನಿವಾರ ಪಿಸಿಎಆರ್ ಡಿ ಬ್ಯಾಂಕಿನ ನೂತನ ಅಧ್ಯಕ್ಷ ಕೆ.ಎಂ.ಸುಂದರೇಶ್, ಉಪಾಧ್ಯಕ್ಷ ಕೌಸಿಕ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಹಕಾರ ಕ್ಷೇತ್ರ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗಿ ಬಡವರು, ರೈತರು ಆರ್ಥಿಕ ವಾಗಿ ಮೇಲೆ ಬರಬಹುದು ಎಂದು ಗಾಂಧೀಜಿ, ನೆಹರೂ ಕನಸು ಕಂಡಿದ್ದರು.ಪ್ರಸ್ತುತ ಸಹಕಾರ ಕ್ಷೇತ್ರ ಅಭಿವೃದ್ಧಿ ಕಂಡಿದೆ. ಒಂದು ಕಾಲದಲ್ಲಿ ರೈತರು ಸಾಲ ಕಟ್ಟಲಾಗದೆ ಅನೇಕರು ಸುಸ್ತಿದಾರ ರಾಗಿದ್ದರು. ಸರ್ಕಾರ ಸಾಲ ಮನ್ನಾ, ಬಡ್ಡಿ ಮನ್ನಾ ಮಾಡಿತ್ತು.ಈಗ ಬ್ಯಾಂಕುಗಳು ಸಹ ಚೇತರಿಕೆ ಕಂಡಿದೆ. ಕೊಪ್ಪ ಪಿಸಿಎಆರ್ ಡಿ ಬ್ಯಾಂಕ್ ಹಿಂದೆ ₹8 ಕೋಟಿ ನಷ್ಟದಲ್ಲಿತ್ತು. ಈಗ ನೂತನ ಅಧ್ಯಕ್ಷರು ಅದನ್ನು ಲಾಭದಾಯಕವಾಗಿಸಿ ಜಿಲ್ಲೆಯಲ್ಲಿಯೇ ಮೊದಲ ಸ್ಥಾನಕ್ಕೆ ತಂದಿದ್ದಾರೆ. ಆ ಬ್ಯಾಂಕಿನ ನವೀಕರಣಕ್ಕಾಗಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದಿಂದ ₹20 ಲಕ್ಷ ಹಾಗೂ ನನ್ನ ಶಾಸಕರ ಅನುದಾನದಿಂದ ₹10 ಲಕ್ಷ ನೀಡಿದ್ದೇನೆ ಎಂದರು.
ನೂತನ ಅಧ್ಯಕ್ಷ ಕೆ.ಎಂ.ಸುಂದರೇಶ್ ಮಾತನಾಡಿ, ಶಾಸಕರು ಹಾಗೂ ಸಹಕಾರಿ ದುರೀಣರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ. ರೈತರ ಮನ ಒಲಿಸಿ ಸುಸ್ತಿದಾರರ ಸಾಲ ಕಟ್ಟಿಸುವ ಪ್ರಯತ್ನ ಮಾಡುತ್ತೇವೆ. ಎಲ್ಲಾ ನಿರ್ದೇಶಕರು ಬ್ಯಾಂಕಿನ ಅಭಿವೃದ್ಧಿಗೆ ಕೈ ಜೋಡಿಸಬೇಕು. ಮೊದಲ ಬಾರಿಗೆ ಕಾಂಗ್ರೆಸ್ ನೇತೃತ್ವದಲ್ಲಿ 7 ನಿರ್ದೇಶಕರು ಗೆದ್ದಿದ್ದೇವೆ ಎಂದರು.
-- ಬಾಕ್ಸ್ ---
ಪಿಸಿಎಆರ್ ಡಿ ಬ್ಯಾಂಕಿನ ಆವರಣದಲ್ಲಿ ಶನಿವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕೆ.ಎಂ.ಸುಂದರೇಶ್ ಅಧ್ಯಕ್ಷರಾಗಿ, ಎಚ್.ಎಸ್. ಕೌಸಿಕ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.