ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ನ. 26ರಿಂದ 29ರವರೆಗೆ ನಡೆಯಲಿರುವ ಪಂಚಮುಖಿ ಆಂಜನೇಯ ಹವನದ ಅಂಗವಾಗಿ ಭಾನುವಾರ ಚಪ್ಪರ ಮುಹೂರ್ತ ನಡೆಯಿತು.
ಪುತ್ತೂರು : ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ನ. 26ರಿಂದ 29ರವರೆಗೆ ನಡೆಯಲಿರುವ ಪಂಚಮುಖಿ ಆಂಜನೇಯ ಹವನದ ಅಂಗವಾಗಿ ಭಾನುವಾರ ಚಪ್ಪರ ಮುಹೂರ್ತ ನಡೆಯಿತು.
ಕಾರ್ಯಕ್ರಮದ ಸ್ವಾಗತ ಸಮಿತಿ ಸಂಚಾಲಕ, ಹೈಕೋರ್ಟ್ ಹಿರಿಯ ನ್ಯಾಯವಾದಿ ಡಾ. ಅರುಣ್ ಶ್ಯಾಮ್, ಗೌರವಾಧ್ಯಕ್ಷ ಹಾಗೂ ವಿಶ್ವ ಹಿಂದೂ ಪರಿಷತ್ ಕರ್ನಾಟಕ ಪ್ರಾಂತ ಉಪಾಧ್ಯಕ್ಷ ಯು. ಪೂವಪ್ಪ, ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಚಾಲಕ ಕೆ. ಜೀವಂಧರ್ ಜೈನ್ ಹಾಗೂ ಉಪಾಧ್ಯಕ್ಷ ಉಜ್ವಲ್ ಪ್ರಭು ಅವರು ಜತೆಯಾಗಿ ಚಪ್ಪರ ಮುಹೂರ್ತ ನೆರವೇರಿಸಿದರು. ಸುದರ್ಶನ್ ವೈಲಾಯ ಕೊಡಿಪ್ಪಾಡಿ ಅವರು ವೈದಿಕ ಕಾರ್ಯಕ್ರಮಗಳನ್ನು ನಿರ್ವಹಿಸಿದರು.
ಬಳಿಕ ಕ್ಷೇತ್ರದ ಕಾರ್ಯಾಲಯದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ಮಾತನಾಡಿದ ಸ್ವಾಗತ ಸಮಿತಿ ಸಂಚಾಲಕ ಹೈಕೋರ್ಟ್ ಹಿರಿಯ ನ್ಯಾಯವಾದಿ ಡಾ. ಅರುಣ್ ಶ್ಯಾಮ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಡೆಯುತ್ತಿರುವ ಪಂಚಮುಖಿ ಆಂಜನೇಯ ಹವನದ ಮೂಲಕ ಪುತ್ತೂರು ಭಾಗದಲ್ಲಿ ಒಂದು ವಿಶೇಷವಾದ ಶಕ್ತಿ ಸಂಚಲನವಾಗಬೇಕು ಎಂಬ ಸಂಕಲ್ಪ ಮಾಡಲಾಗಿದೆ ಎಂದರು.
ಭಜನೆ, ಪ್ರವಚನ, ನೃತ್ಯ, ಸಂಗೀತ ಹಾಗೂ ಉಪನ್ಯಾಸ ಸೇರಿದಂತೆ ಪರಿಪೂರ್ಣ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಹವನ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, 26ರಂದು ತಾಲೂಕಿನ ವಿವಿಧ ಧಾರ್ಮಿಕ ಕೇಂದ್ರಗಳಿಂದ ಪವಿತ್ರ ತೀರ್ಥ ಸಂಗ್ರಹಿಸಿ, ಮೆರವಣಿಗೆಯ ಮೂಲಕ ಕ್ಷೇತ್ರಕ್ಕೆ ತಂದು ತೀರ್ಥಕಲಶದ ರೂಪದಲ್ಲಿ ಆಂಜನೇಯನಿಗೆ ಸಮರ್ಪಿಸಲಾಗುವುದು. ಅಂದು ಸಾಮೂಹಿಕ ಸಂಕಲ್ಪ ನಡೆಯಲಿದ್ದು, 10 ಮಂದಿ ವೈದಿಕರಿಂದ ಪಾರಾಯಣ ನಡೆಯಲಿದೆ. ಸಂಜೆ 4.30ಕ್ಕೆ ರಾಮಮಂದಿರ ನಿರ್ಮಾಣದ ಉಸ್ತುವಾರಿ ವಹಿಸಿದ್ದ ಗೋಪಾಲ್ ಜಿ ಅವರು ಕ್ಷೇತ್ರಕ್ಕೆ ಆಗಮಿಸಿ ಧರ್ಮಜಾಗೃತಿ ಮಾಡಲಿದ್ದಾರೆ ಎಂದರು.
ನ.28ರಂದು ಸಂಜೆ 6.30ರಿಂದ ಪಾವಗಡದ ಡಾ. ಪ್ರಕಾಶ್ ಅವರಿಂದ ಸುಂದರಕಾಂಡ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಂಜೆ 7 ಗಂಟೆಯಿಂದ ಗಾಯಕ ಜಗದೀಶ್ ಆಚಾರ್ಯ ಅವರ ನೇತೃತ್ವದಲ್ಲಿ ರಾಷ್ಟ್ರಜಾಗೃತಿಯ ಕುರಿತ ವಿಶೇಷ ಭಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ನ.29ರಂದು ಬೆಳಿಗ್ಗೆ 7 ಗಂಟೆಗೆ ಹವನ ಆರಂಭವಾಗಲಿದ್ದು, 10 ಮಂದಿ ವೈದಿಕರ ನೇತೃತ್ವದಲ್ಲಿ ಪಂಚಮುಖಿ ಆಂಜನೇಯ ಹವನ ನೆರವೇರಲಿದೆ. ಮೂರು ದಿನಗಳ ಕಾಲ ಡಾ. ಪಾವಗಡ ಪ್ರಕಾಶ್ ಅವರಿಂದ ರಾಮಾಯಣದ ಸುಂದರಕಾಂಡ ಪಾರಾಯಣ ನಡೆಯಲಿದೆ ಎಂದು ತಿಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.