ನೆಲ್ಲೂರು ಸರ್ಕಾರಿ ಪ್ರೌಢಶಾಲೆಗೆ ನುಗ್ಗಿದ ನೀರು

KannadaprabhaNewsNetwork |  
Published : Aug 18, 2024, 01:51 AM IST
ಗಜೇಂದ್ರಗಡ ತಾಲೂಕಿನ ನೆಲ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಿಂತಿರುವ ನೀರು. | Kannada Prabha

ಸಾರಾಂಶ

ಸರ್ಕಾರಿ ಶಾಲೆಗಳ ಸ್ಥಿತಿ ಹೇಳಿಕೊಳ್ಳುವಷ್ಟು ಸುಧಾರಿಸಿಲ್ಲ ಎನ್ನುವದಕ್ಕೆ ನೆಲ್ಲೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಉತ್ತಮ ನಿರ್ದಶನವಾಗಿ ನಿಲ್ಲುತ್ತದೆ.

ಗಜೇಂದ್ರಗಡ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಶನಿವಾರ ನಸುಕಿನ ಜಾವ ಸುರಿದ ಮಳೆಗೆ ನೆಲ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ)ಯ ಆವರಣವು ಸಂಪೂರ್ಣ ಜಲಾವೃತಗೊಂಡ ಪರಿಣಾಮ ಶಾಲಾ ವಿದ್ಯಾರ್ಥಿಗಳು ಪರದಾಡಿದ ಘಟನೆ ನಡೆದಿದೆ.

ಮಳೆ ಬಂದಾಗೊಮ್ಮೆ ಈ ಶಾಲೆಯ ಆವರಣದಲ್ಲಿ ನುಗ್ಗುವ ಹಳ್ಳದ ನೀರಿನಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭ್ಯಾಸಕ್ಕೆ ತೊಂದರೆ ಆಗುತ್ತಿದೆ ಎಂದು ಪಾಲಕರು ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಪರಿಣಾಮ ಮಳೆ ಬಂದರೆ ಹಳ್ಳದಿಂದ ಹರಿದು ಹೋಗುವ ನೀರು ಶಾಲೆಯ ಮುಂಭಾಗದಲ್ಲಿ ಸಂಗ್ರಹ ಮತ್ತು ಉಂಟಾಗುವ ಗಲೀಜಿನಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ನಿರ್ಮಾಣವಾಗುತ್ತದೆ.

ತಾಲೂಕಿನಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿ ಹೇಳಿಕೊಳ್ಳುವಷ್ಟು ಸುಧಾರಿಸಿಲ್ಲ ಎನ್ನುವದಕ್ಕೆ ನೆಲ್ಲೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಉತ್ತಮ ನಿರ್ದಶನವಾಗಿ ನಿಲ್ಲುತ್ತದೆ. ಶಾಲೆಗೆ ಪ್ರತಿದಿನ ೧೧೫ ವಿದ್ಯಾರ್ಥಿಗಳು ಶಿಕ್ಷಣ ಅರಿಸಿ ಬರುತ್ತಾರೆ. ಆದರೆ ಮಳೆ ನೀರಿನಿಂದ ಎದುರಾಗುವ ಸಂಕಷ್ಟಕ್ಕೆ ಪರಿಹಾರ ಒದಗಿಸುವಂತೆ ಮೇಲಾಧಿಕಾರಿಗಳು ಮತ್ತು ಗ್ರಾಪಂಗೆ ಮನವಿ ಮಾಡಲಾಗಿತ್ತು. ಹೀಗಾಗಿ ಇತ್ತೀಚೆಗೆ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಶಾಲೆಗೆ ಭೇಟಿ ನೀಡಿ ಸಮಸ್ಯೆ ಆಲಿಸಿ, ಪರಿಹಾರದ ಭರವಸೆ ನೀಡಿದ್ದರು. ಹೀಗಾಗಿ ಪಾಲಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೆಲ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂಬ ಆಶಾಭಾವ ಹೊಂದಿದ್ದರು. ಆದರೆ ನೆಲ್ಲೂರು ಗ್ರಾಮದ ಪ್ರೌಢಶಾಲೆ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಅಧಿಕಾರಿಗಳು ವಿಫಲವಾದ ಪರಿಣಾಮ ಶುಕ್ರವಾರ ಸುರಿದ ಮಳೆಗೆ ಶಾಲೆಯ ಮುಂಭಾಗದಲ್ಲಿ ಮತ್ತೆ ಅಪಾರ ಪ್ರಮಾಣದ ನೀರು ನಿಂತಿದ್ದರಿಂದ ಶಾಲಾ ವಿದ್ಯಾರ್ಥಿಗಳ ಪ್ರಾರ್ಥನೆ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ತೊಂದರೆಯಾಗಿದೆ. ವಿದ್ಯಾರ್ಥಿಗಳು ಶಾಲೆಯೊಳಗೆ ಹೋಗಲು ಹಾಗೂ ಅವಧಿ ಪೂರ್ಣವಾದ ಬಳಿಕ ಮನೆಗೆ ತೆರಳುವಾಗ ಪರದಾಡಬೇಕಾಯಿತು. ಸಂಬಂಧಿಸಿದ ಅಧಿಕಾರಿಗಳು ಇನ್ನಾದರೂ ಸಮಸ್ಯೆಗೆ ಪರಿಹಾರ ನೀಡಲು ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ನೆಲ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ (ಆರ್‌ಎಂಎಸ್‌ಎ)ಯ ಆವರಣದಲ್ಲಿ ಶನಿವಾರ ಮಳೆಯಿಂದ ಹಳ್ಳದ ನೀರು ನಿಂತಿದ್ದರಿಂದ ಸಮಸ್ಯೆ ಉಂಟಾಗಿತ್ತು. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ನೆಲ್ಲೂರು ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಸ್.ಕೆ.ಕವಡಿಮಟ್ಟಿ ತಿಳಿಸಿದ್ದಾರೆ.

ನೆಲ್ಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ(ಆರ್‌ಎಂಎಸ್‌ಎ)ಯ ಆವರಣದಲ್ಲಿ ನರೇಗಾ ಅಡಿ ಕಂಪೌಂಡ್ ನಿರ್ಮಾಣಕ್ಕೆ ತಾಪಂ ಇಒ ಹಾಗೂ ಗ್ರಾಪಂ ಪಿಡಿಒ ಅವರಿಗೆ ಪತ್ರ ಬರೆಯಲಾಗುವುದು. ಕಂಪೌಂಡ್ ನಿರ್ಮಾಣವಾದರೆ ಶಾಲಾ ಆವರಣದಲ್ಲಿ ನಿಲ್ಲುವ ನೀರಿಗೆ ಪರಿಹಾರ ಸಿಗಲಿದೆ ಎಂದು ಬಿಇಒ ಆರ್.ಎನ್.ಹುರಳಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!