ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
2030ನೇ ಇಸವಿಯವರೆಗೆ ಕರ್ನಾಟಕ ರಾಜ್ಯದಲ್ಲಿ ಪೊಲೀಸರಿಗಾಗಿ ಪೊಲೀಸ್ ಗೃಹ ಯೋಜನೆ ಮುಂದುವರಿಸಲಾಗುವುದು ಎಂದು ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಭಾನುವಾರ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸುಂಟಿಕೊಪ್ಪದಲ್ಲಿ ನೂತನ ಪೊಲೀಸ್ ವಸತಿ ಗೃಹ ಕಟ್ಟಡದ ಉದ್ಘಾಟನೆ ನೇರವೇರಿಸಿ ಅವರು ಮಾತನಾಡಿದರು.ಈಗಾಗಲೇ ಪೊಲೀಸ್ ಗೃಹ ಯೋಜನೆಯಡಿ 40,000 ಮನೆಗಳು ಪೂರ್ಣಗೊಂಡಿದ್ದು, ಇನ್ನು 60,000 ಮನೆಗಳನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಹೇಳಿದ ಅವರು, ಈ ಬಗ್ಗೆ ಕೆಲವು ದಿನಗಳ ಹಿಂದೆ ಬಜೆಟ್ ಪೂರ್ವ ಇಲಾಖಾವಾರು ಚರ್ಚೆ ಸಂದರ್ಭ ಹೆಚ್ಚುವರಿ ಪೊಲೀಸ್ ಠಾಣೆಗಳನ್ನು ನೀಡಲು ಸಾಧ್ಯವಾಗದಿದ್ದರೂ ಪೊಲೀಸ್ ಮನೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಬೇಡಿಕೆ ಇಟ್ಟಿದ್ದೇನೆ ಎಂದರು.ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊದಲ ಹಂತದ ಪೊಲೀಸ್ ವಸತಿಗೃಹ ನಿರ್ಮಾಣ ಪೂರ್ಣಗೊಂಡಿದ್ದು, ಇದರಲ್ಲಿ 12 ಮನೆಗಳಿವೆ. ಈಗಾಗಲೇ ಮಡಿಕೇರಿಯಲ್ಲಿ 7.5 ಕೋಟಿ ರು. ವೆಚ್ಚದಲ್ಲಿ ಪೊಲೀಸ್ ವಸತಿ ಸಮುಚ್ಛಯ ನಿರ್ಮಾಣಕ್ಕೆ ಭೂಮಿ ಪೂಜೆ ನಿರ್ಮಿಸಲಾಗಿದೆ. ಇದನ್ನು ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ನಿರ್ಮಿಸಲಾಗುತ್ತಿದ್ದು, ಅದಷ್ಟು ಬೇಗ ಕಾಮಗಾರಿ ಪೂರ್ಣಗೊಂಡರೇ ನಾನೇ ಉದ್ಘಾಟಿಸಲು ಬರುತ್ತೇನೆ ಎಂದು ಹೇಳಿದರು.
ಪೊಲೀಸ್ ಪೇದೆಗಳ ಜೀವನವನ್ನು ಅವರ ವಸತಿ ಸಮಸ್ಯೆಯನ್ನು ಹತ್ತಿರದಿಂದ ಬಲ್ಲವನಾಗಿದ್ದು, ಜೌರಾಗತರ್ ಸಮಿತಿ ಮಾಡಿ ಆ ಸಮಿತಿಯ ವರದಿಯನ್ನು ಹಂತ ಹಂತವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಕಾರ್‍ಯನಿರ್ವಹಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಪೊಲೀಸ್ ಟೋಪಿ, ವೇತನ ಮತ್ತು ಇತರ ಮೂಲಭೂತ ವ್ಯವಸ್ಥೆಗಳನ್ನು ಹಂತ ಹಂತವಾಗಿ ಈಡೇರಿಸಲಾಗುತ್ತಿದೆ ಎಂದು ಹೇಳಿದರು. ನಮ್ಮ ಸರಕಾರ ಸಾವಿರ ದಿನಗಳನ್ನು ಪೂರೈಸಿದ್ದು, ತಮ್ಮ ನೇತೃತ್ವದಲ್ಲೇ ಪ್ರಣಾಳಿಕೆಯನ್ನು ಮಾಡಿದ್ದು, 593 ಭರವಸೆಗಳ ಪೈಕಿ ಶೇ.50ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದೇವೆ. 5 ಗ್ಯಾರಂಟಿಗಳ ಒಟ್ಟು ಮೊತ್ತ 1.36 ಲಕ್ಷ ಕೋಟಿ ರು. ಈ ಪೈಕಿ ಗೃಹಲಕ್ಷಿಗೆ 70 ಸಾವಿರ ಕೋಟಿ ರು. ಖರ್ಚು ಮಾಡುತ್ತಿದ್ದೇವೆ ಎಂದು ವಿವರಿಸಿದರು.ಕರ್ನಾಟಕ ಪೊಲೀಸ್ ದೇಶದಲ್ಲೇ ನಂ1 ಆಗಿದ್ದು, ಬೆಂಗಳೂರು ಅತ್ಯಂತ ಸುರಕ್ಷಿತ ಎಂದು ಹೆಸರು ಪಡೆದಿದೆ. ಇಲ್ಲದಿದ್ದರೆ 10 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆ ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದರು. ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕುಶಾಲನಗರ ಪೊಲೀಸ್ ಉಪ ವಿಭಾಗದಲ್ಲಿ 144 ವಸತಿಗೃಹಗಳ ಬೇಡಿಕೆ ಇದ್ದು, ಈಗ 32 ಮಾತ್ರ ಲಭ್ಯವಿದೆ. ಸುಂಟಿಕೊಪ್ಪದಲ್ಲಿ 50 ವಸತಿಗಳ ಪೈಕಿ 12 ನಿರ್ಮಾಣಗೊಂಡಿದ್ದು, ಇನ್ನು ವಸತಿಗೃಹಗಳು ಬೇಕಾಗಿವೆ. ಜೊತೆಗೆ ಚಿಕ್ಕಅಳುವಾರದಲ್ಲಿ 108 ಎಕರೆ ಮಿನಿ ವಿಮಾನ ನಿಲ್ಧಾಣಕ್ಕೆ ಕಾಯ್ದಿರಿಸಿದ ಜಾಗ ಪೊಲೀಸ್ ಇಲಾಖೆಗೆ ಬಂದಿದೆ. ಈ ಜಾಗವನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಕೊಡಗಿಗೆ ವಾರಾಂತ್ಯದಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಬರುತ್ತಿದ್ದು, ಪ್ರವಾಸಿಗರಿಗೂ, ಸ್ಥಳೀಯರಿಗೂ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಕನಿಷ್ಠ 500ರಿಂದ 600 ಮಂದಿ ಪೊಲೀಸರ ಅಗತ್ಯತೆ ಇದೆ ಎಂದು ಹೇಳಿದರು. ಕೊಡ್ಲಿಪೇಟೆಯಲ್ಲಿ ಪೊಲೀಸ್ ಠಾಣೆ ಬೇಡಿಕೆ ಮಂಡಿಸಿದ ಅವರು, ಕೊಡಗಿನ ಇಲಾಖೆಗೆ ಸಮಗ್ರ ಅಭಿವೃದ್ಧಿ ಹಿನ್ನೆಲೆಯಲ್ಲಿ ಒಂದು ಪ್ಯಾಕೇಜ್ ಗೆ ಮನವಿ ಮಾಡಿದರು. ಗೃಹ ಸಚಿವರನ್ನು ಪೊಲೀಸ್ ಇಲಾಖೆ ಪರವಾಗಿ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ಡಾ. ಎಂ.ಬಿ. ಬೋರಲಿಂಗಯ್ಯ ಸನ್ಮಾನಿಸಿದರು. ಕರ್ನಾಟಕ ಸರ್ಕಾರದ ಕ್ರೀಡಾ ಪ್ರಾಧಿಕಾರ ಉಪಾಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ ಮಾಸ್ಟರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ತಾಲೂಕು ಗ್ಯಾರಂಟಿ ಯೋಜನೆಗೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಪಿ.ಆರ್. ಸುನಿಲ್ ಕುಮಾರ್, ಕೊಡಗು ಜಿಲ್ಲಾಧಿಕಾರಿಗಳಾದ ಎಸ್.ಜೆ. ಸೋಮಶೇಖರ್, ಕೊಡಗು ಜಿಪಂ ಮುಖ್ಯ ಕಾರ್‍ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಬೆಂಗಳೂರು ಕ.ರಾ.ಪೊ.ವ ಮತ್ತು ಮೂ.ಸೌ.ಅ.ನಿ.ನಿ.ಮುಖ್ಯ ಅಭಿಯಂತರ ಪಿ.ಬಿ. ಪ್ರಕಾಶ್, ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಮಾಜಿ ಸದಸ್ಯ ಪಿ.ಎಂ. ಲತೀಫ್, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ, ಬೆಟ್ಟಗೇರಿ ಸಮೂಹ ತೋಟ ಮಾಲೀಕರಾದ ಡಿ. ವಿನೋದ್ ಶಿವಪ್ಪ, ಕಾಂಗ್ರೆಸ್ ಮುಖಂಡರಾದ ಕೆ.ಕೆ. ಮಂಜುನಾಥ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಕೆ.ಎಂ. ಲೋಕೇಶ್ ಮತ್ತಿತರರಿದ್ದರು.ಕುಶಾಲನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಪಿ. ಚಂದ್ರಶೇಖರ್, ಮಡಿಕೇರಿ ಡಿವೈಎಸ್‌ಪಿ ಐ.ಪಿ. ಮೇದಪ್ಪ, ವೃತ್ತ ನಿರೀಕ್ಷರಾದ ದಿನೇಶ್ ಕುಮಾರ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಪಿ. ಮೋಹನ್‌ರಾಜ್ ಮತ್ತು ಸಿಬ್ಬಂದಿ ಬಿಗಿ ಬಂದೋಬಸ್ತ್ ಕಲ್ಪಿಸಿದರು. ಗೃಹ ಸಚಿವರಿಗೆ ಪೂರ್ಣಕುಂಭ ಸ್ವಾಗತ ಕೋರಿ, ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ಗೌರವ ರಕ್ಷೆ ನೀಡಲಾಯಿತು. ಜಿಲ್ಲಾ ಪೊಲೀಸ್ ಸಾಂಸ್ಕೃತಿಕ ನಾಡ ಗೀತೆ ಹಾಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಸ್ವಾಗತಿಸಿದರು. ಜಿಲ್ಲಾ ಪೊಲೀಸ್‌ನ ಕಾವೇರಮ್ಮ ಮತ್ತು ಲೋಕೇಶ್ ಎಂ.ಎಸ್. ನಿರೂಪಿಸಿ ವಂದಿಸಿದರು. .......ಎಚ್‌ಡಿಕೆ ಅವರನ್ನು ತಡೆದವರಾರು: ಗೃಹ ಸಚಿವ ಪ್ರಶ್ನೆ
ಸುಂಟಿಕೊಪ್ಪ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿಯವರು ಕರ್ನಾಟಕ ಸರಕಾರವನ್ನು ಭ್ರಷ್ಟ ಸರಕಾರ ಎಂದು ಹೇಳಿದ್ದಲ್ಲದೆ ಇದನ್ನು ಕಿತ್ತೊಗೆಯುವುದೇ ನನ್ನ ಗುರಿ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ. ಪರಮೇಶ್ವರ್, ಅವರು ಹೋರಾಟ ಮುಂದುವರಿಸಲಿ. ಅವರನ್ನು ತಡೆದವರು ಯಾರು ಎಂದು ವ್ಯಂಗ್ಯವಾಡಿದರು. ವಂದೇ ಮಾತರಂ ಹಾಡುವುದನ್ನು ಕಡ್ಡಾಯಗೊಳಿಸಿರುವುದರ ಬಗ್ಗೆ ವಿರೋಧ ವ್ಯಕ್ತವಾಗಿರುವ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಇದು ರಾಷ್ಟ್ರೀಯ ವಿಷಯವಾಗಿದ್ದು, ಈ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು. ರಾಜ್ಯದಲ್ಲಿ ಪೊಲೀಸ್ ಇಲಾಖೆ ವೈಫಲ್ಯ ಬಗ್ಗೆ ಪ್ರತಿ ಪಕ್ಷದ ಆರೋಪದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಆರೋಪ ಮಾಡುತ್ತಿರುವವರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮಾತನಾಡಬೇಕು ಎಂದಷ್ಟೇ ಹೇಳಿದರು. ಕೊಡಗಿನಲ್ಲಿ 2018ರ ದುರಂತದ ನಂತರ ಮನೆ ನಿರ್ಮಾಣ ಪರಿಹಾರ ವಿಳಂಬವಾಗಿರುವ ಬಗ್ಗೆ ಪ್ರಶ್ನಿಸಿದಾಗ, ಈ ಬಾರಿಯ ಬಜೆಟ್‌ನಲ್ಲಿ ಇದಕ್ಕೆ ಸೂಕ್ತ ಅನುದಾನ ಲಭ್ಯವಾಗುವ ವಿಶ್ವಾಸ ವ್ಯಕ್ತಪಡಿಸಿದರು.ಸಚಿವರು ಎಲ್ಲರನ್ನೂ ಸ್ವಾಗತಿಸುವ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ‘ಬಿಂದು ಕುಮಾರಿ’ ಎಂದು ಹೇಳಿದಾಗ ‘ಬಿಂದುಮಣಿ’ ಎಂದು ಶಾಸಕರು ನೆನಪಿಸಿದಾಗ, ‘ಹಾಗಾದರೆ ಬೇಗನೆ ವಿವಾಹ ಮಾಡಿಕೊಳ್ಳಿ’ ಎಂದು ಸಚಿವರು ಹಾಸ್ಯ ಚಟಾಕಿ ಹಾರಿಸಿದರು.