ಎನ್‌ಇಪಿ ಪದವೀಧರರಿಗೆ ಶಿಕ್ಷಕರ ನೇಮಕಾತಿಯಲ್ಲಿ ಅವಕಾಶ ವಂಚನೆ

KannadaprabhaNewsNetwork |  
Published : Nov 02, 2026, 03:15 AM IST
ಲೋಗೋ | Kannada Prabha

ಸಾರಾಂಶ

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೊಳಿಸಿದ ಸರ್ಕಾರವೇ, ಆ ನೀತಿಯಡಿ ಪದವಿ ಪಡೆದು ಬಿ.ಇಡಿ ಹಾಗೂ ಶಿಕ್ಷಕರ ಅರ್ಹತಾ ಪರೀಕ್ಷೆ ಪಾಸಾದ ಅಭ್ಯರ್ಥಿಗಳಿಗೆ ಶಿಕ್ಷಕರ ನೇಮಕಾತಿಯಲ್ಲಿ ಅವಕಾಶ ಕಲ್ಪಿಸದಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ, ಹಾವೇರಿ

ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿಗೊಳಿಸಿದ ಸರ್ಕಾರವೇ, ಆ ನೀತಿಯಡಿ ಪದವಿ ಪಡೆದು ಬಿ.ಇಡಿ ಹಾಗೂ ಶಿಕ್ಷಕರ ಅರ್ಹತಾ ಪರೀಕ್ಷೆ ಪಾಸಾದ ಅಭ್ಯರ್ಥಿಗಳಿಗೆ ಶಿಕ್ಷಕರ ನೇಮಕಾತಿಯಲ್ಲಿ ಅವಕಾಶ ಕಲ್ಪಿಸದಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಅಗತ್ಯ ಶೈಕ್ಷಣಿಕ ಅರ್ಹತೆ ಹೊಂದಿದ್ದರೂ ಪಠ್ಯಕ್ರಮದ ವಿಷಯ ಸಂಯೋಜನೆಯಲ್ಲಿನ ವ್ಯತ್ಯಾಸದಿಂದಾಗಿ ಸಾವಿರಾರು ಅಭ್ಯರ್ಥಿಗಳು ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಲೂ ಸಾಧ್ಯವಾಗದೆ ಅವಕಾಶ ವಂಚಿತರಾಗಿದ್ದಾರೆ.

2021-24ರ ಅವಧಿಯಲ್ಲಿ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅಡಿಯಲ್ಲಿ ಪದವಿ ಶಿಕ್ಷಣ ಜಾರಿಗೊಳಿಸಲಾಗಿತ್ತು. ಹಿಂದಿನ ಪದವಿ ಪದ್ಧತಿಯಲ್ಲಿ ಮೂರು ಮುಖ್ಯ ಐಚ್ಛಿಕ ವಿಷಯಗಳನ್ನು ಅಧ್ಯಯನ ಮಾಡುವ ವ್ಯವಸ್ಥೆಯಿದ್ದರೆ, ಎನ್‌ಇಪಿ ಪದ್ಧತಿಯಲ್ಲಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಎರಡು ಮುಖ್ಯ ವಿಷಯಗಳನ್ನು ಅಧ್ಯಯನ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಈ ಪದ್ಧತಿಯಡಿ ಭೌತಶಾಸ್ತ್ರ-ಗಣಿತ, ಭೌತಶಾಸ್ತ್ರ-ರಸಾಯನಶಾಸ್ತ್ರ, ರಸಾಯನಶಾಸ್ತ್ರ-ಸಸ್ಯಶಾಸ್ತ್ರ, ಇತಿಹಾಸ-ರಾಜಕೀಯ ವಿಜ್ಞಾನ, ಇತಿಹಾಸ-ಭೂಗೋಳ ಸೇರಿದಂತೆ ವಿವಿಧ ವಿಷಯ ಸಂಯೋಜನೆಗಳಲ್ಲಿ ವಿದ್ಯಾರ್ಥಿಗಳು ಪದವಿ ಪಡೆದಿದ್ದಾರೆ.

ಪದವಿ ನಂತರ ಶಿಕ್ಷಣ ಇಲಾಖೆಯ ನಿಯಮಾನುಸಾರ ಎರಡು ವರ್ಷಗಳ ಬಿ.ಎಡ್. ಶಿಕ್ಷಣವನ್ನೂ ಪೂರ್ಣಗೊಳಿಸಿದ್ದಾರೆ. ಇದರ ಜತೆಗೆ ಶಿಕ್ಷಕರ ನೇಮಕಾತಿಗೆ ಅಗತ್ಯವಾದ ಟಿಇಟಿ ಪರೀಕ್ಷೆಯಲ್ಲೂ ಉತ್ತೀರ್ಣರಾಗಿದ್ದಾರೆ. ಹೀಗಿದ್ದರೂ ಪ್ರಸ್ತುತ ನೇಮಕಾತಿ ನಿಯಮಗಳಲ್ಲಿನ ವಿಷಯ ಸಂಯೋಜನೆ ನಿರ್ಬಂಧದಿಂದಾಗಿ ಪರೀಕ್ಷೆ ಬರೆಯುವ ಅವಕಾಶವೇ ಇಲ್ಲದಂತಾಗಿದೆ.

ಮೂರು ವಿಷಯಗಳ ನಿಯಮದಿಂದ ಸಂಕಷ್ಟ: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಪದವಿಯಲ್ಲಿ ಮೂರು ಐಚ್ಛಿಕ ವಿಷಯಗಳನ್ನು ಅಧ್ಯಯನ ಮಾಡಿರಬೇಕು ಎಂಬ ನಿಯಮವಿದೆ. ಆದರೆ ಎನ್‌ಇಪಿ ಪದ್ಧತಿಯಲ್ಲಿ ಎರಡು ಮುಖ್ಯ ವಿಷಯಗಳನ್ನಷ್ಟೇ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡುವ ಅವಕಾಶವಿದೆ. ವಿದ್ಯಾರ್ಥಿಗಳು ಸರ್ಕಾರ ರೂಪಿಸಿದ ಪಠ್ಯಕ್ರಮದಂತೆ ಓದಿದ್ದು, ಅದೇ ಪಠ್ಯಕ್ರಮದಂತೆ ಬಿಎಡ್ ಪೂರ್ಣಗೊಳಿಸಿ ಟಿಇಟಿಯನ್ನೂ ಪಾಸಾಗಿದ್ದಾರೆ. ಆದರೆ ಹಳೆಯ ನೇಮಕಾತಿ ನಿಯಮಗಳನ್ನೇ ಮುಂದುವರಿಸಿರುವುದರಿಂದ ಈ ಅಭ್ಯರ್ಥಿಗಳು ಅರ್ಹತೆ ಹೊಂದಿದ್ದರೂ ನೇಮಕಾತಿ ಪ್ರಕ್ರಿಯೆಯಿಂದ ಹೊರಗುಳಿಯುವಂತಾಗಿದೆ.

ಅದೇ ರೀತಿ ಹೈಸ್ಕೂಲ್‌ ಶಿಕ್ಷಕರ ನೇಮಕಾತಿಯಲ್ಲಿಯೂ ವಿಷಯ ಸಂಯೋಜನೆ ಸಮಸ್ಯೆ ಎದುರಾಗಿದೆ. ಪ್ರಚಲಿತ ಸಿ ಮತ್ತು ಆರ್ ನಿಯಮಗಳಲ್ಲಿ ನಿರ್ದಿಷ್ಟ ವಿಷಯಗಳ ಸಂಯೋಜನೆಗೆ ಅವಕಾಶ ನೀಡದಿರುವುದರಿಂದ ಕೆಲವು ವಿಷಯಗಳಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಉದಾಹರಣೆಗೆ, ಜೀವವಿಜ್ಞಾನ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಭೌತಶಾಸ್ತ್ರ ವಿಷಯ ಸಂಯೋಜನೆಯೊಂದಿಗೆ ಪದವಿ ಪಡೆದ ಅಭ್ಯರ್ಥಿಗಳಿಗೆ ಅವಕಾಶ ಸಿಗುತ್ತಿಲ್ಲ. ಮತ್ತೊಂದೆಡೆ, ಅರ್ಜಿ ಸಲ್ಲಿಸಲು ಅರ್ಹತೆ ದೊರೆತಿರುವ ಕೆಲವರಿಗೂ ಮೂರನೇ ವಿಷಯದ ಜಾಗದಲ್ಲಿ ಯಾವ ವಿಷಯ ನಮೂದಿಸಬೇಕು ಎಂಬ ಗೊಂದಲ ಎದುರಾಗಿದೆ.

ಆಕ್ಷೇಪಣೆಗೂ ಸಿಗದ ಸ್ಪಂದನೆ?: ನೇಮಕಾತಿ ನಿಯಮಗಳ ಕರಡು ಪ್ರಕಟವಾದಾಗಲೇ ಅಭ್ಯರ್ಥಿಗಳು ಈ ಸಮಸ್ಯೆಯನ್ನು ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದ್ದರು. ಜು.14, 2026ರಂದು ಪ್ರಕಟವಾದ ಸಿ ಆ್ಯಂಡ್ ಆರ್ ಕರಡು ನಿಯಮಗಳಿಗೆ ಆಕ್ಷೇಪಣೆ ಸಲ್ಲಿಸಿ, ಎನ್‌ಇಪಿ ಪದವೀಧರರಿಗೆ ನ್ಯಾಯಯುತ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದರು. ಆದರೆ ಆ.11ರಂದು ಪ್ರಕಟವಾದ ಅಂತಿಮ ನಿಯಮಗಳಲ್ಲಿಯೂ ಈ ಸಮಸ್ಯೆಗೆ ಪರಿಹಾರ ದೊರೆಯಲಿಲ್ಲ. ಅ.28ರಂದು ಪ್ರಕಟವಾದ ಮತ್ತೊಂದು ಕರಡು ನಿಯಮಗಳಲ್ಲಿಯೂ ತಮ್ಮ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ ಎಂಬುದು ಅಭ್ಯರ್ಥಿಗಳ ಅಳಲು.

ನಮಗೇಕೆ ಅವಕಾಶವಿಲ್ಲ ಎಂಬ ಪ್ರಶ್ನೆ: ನೇಮಕಾತಿ ನಿಯಮಗಳಲ್ಲಿ ಇತರ ಅಭ್ಯರ್ಥಿಗಳಿಗೆ ನೀಡಿರುವ ವಿನಾಯಿತಿಗಳನ್ನೂ ಎನ್‌ಇಪಿ ಪದವೀಧರರು ಪ್ರಶ್ನಿಸಿದ್ದಾರೆ. ಈ ಬಾರಿ ಕಲಾ ವಿಭಾಗದ ಹುದ್ದೆಗಳಿಗೆ ವಾಣಿಜ್ಯ ಪದವೀಧರ ಬಿ.ಎಡ್. ಅಭ್ಯರ್ಥಿಗಳಿಗೂ ಅವಕಾಶ ನೀಡಲಾಗಿದೆ. ನಾಲ್ಕು ವರ್ಷಗಳ ಸಂಯೋಜಿತ ಐಟಿಇಪಿ ಪದವಿ ಪಡೆದವರಿಗೂ ಕರಡು ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಂಪ್ಯೂಟರ್ ಶಿಕ್ಷಕರ ಹುದ್ದೆಗಳಿಗೆ ಕಂಪ್ಯೂಟರ್ ಪದವಿ, ಎಂಜಿನಿಯರಿಂಗ್ ಹಾಗೂ ಬಿಸಿಎ ಪದವೀಧರರಿಗೂ ಅವಕಾಶ ನೀಡಲಾಗಿದ್ದು, ನೇಮಕಾತಿಯಾದ ಐದು ವರ್ಷಗಳೊಳಗೆ ಬಿಎಡ್ ಮತ್ತು ಟಿಇಟಿ ಪೂರ್ಣಗೊಳಿಸಲು ವಿನಾಯಿತಿ ನೀಡಲಾಗಿದೆ.

ಆದರೆ ಮೂರು ವರ್ಷಗಳ ಪದವಿ ಹಾಗೂ ಎರಡು ವರ್ಷಗಳ ಬಿಎಡ್ ಪೂರ್ಣಗೊಳಿಸಿ, ಈಗಾಗಲೇ ಟಿಇಟಿಯಲ್ಲಿಯೂ ಉತ್ತೀರ್ಣರಾಗಿರುವ ಎನ್‌ಇಪಿ ಅಭ್ಯರ್ಥಿಗಳಿಗೆ ಮಾತ್ರ ವಿಷಯ ಸಂಯೋಜನೆಯ ಕಾರಣ ನೀಡಿ ಅವಕಾಶ ನಿರಾಕರಿಸಿರುವುದು ಸರಿಯಲ್ಲ ಎಂಬುದು ಅವರ ವಾದ.

ಸರ್ಕಾರವೇ ಜಾರಿಗೊಳಿಸಿದ ಹೊಸ ಶಿಕ್ಷಣ ನೀತಿಯಡಿ ಪದವಿ ಪಡೆದ ಅಭ್ಯರ್ಥಿಗಳಿಗೆ ಅದೇ ಸರ್ಕಾರದ ನೇಮಕಾತಿ ಪ್ರಕ್ರಿಯೆಯಲ್ಲಿ ಅವಕಾಶ ನಿರಾಕರಿಸುವುದು ನ್ಯಾಯಸಮ್ಮತವಲ್ಲ ಎಂಬುದು ಅಭ್ಯರ್ಥಿಗಳ ಅಭಿಪ್ರಾಯ. ಪಠ್ಯಕ್ರಮದ ಬದಲಾವಣೆಗೆ ಅನುಗುಣವಾಗಿ ನೇಮಕಾತಿ ನಿಯಮಗಳನ್ನೂ ಕಾಲಕ್ಕೆ ತಕ್ಕಂತೆ ಪರಿಷ್ಕರಿಸಬೇಕಿತ್ತು. ಆದರೆ ಈಗ ಪರೀಕ್ಷೆಗೆ ಸಿದ್ಧತೆ ನಡೆಸಬೇಕಾದ ನಾವು ನಮ್ಮ ಅರ್ಹತೆಯನ್ನು ಸಾಬೀತುಪಡಿಸುವ ಅವಕಾಶಕ್ಕಾಗಿ ಹೋರಾಟ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ತಮಗೂ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು. ಸಿ ಮತ್ತು ಆರ್ ನಿಯಮಗಳಿಗೆ ತುರ್ತು ತಿದ್ದುಪಡಿ ತಂದು ಸಾವಿರಾರು ಅಭ್ಯರ್ಥಿಗಳ ಭವಿಷ್ಯಕ್ಕೆ ನ್ಯಾಯ ಒದಗಿಸಬೇಕು ಎಂದು ಅಭ್ಯರ್ಥಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರ ಮಕ್ಕಳಿಗೆ ಹಳ್ಳಿ ಜೀವನ ಪರಿಚಯಿಸುವ ‘ಗ್ರಾಮಾನುಭವ’ಕ್ಕೆ ಚಾಲನೆ
ಕಡಲ ಜೈವಿಕ ತಂತ್ರಜ್ಞಾನ ನೀತಿಗೆ ಅನುಮೋದನೆ: ರಿಝ್ವಾನ್ ಅರ್ಷದ್