ಕನ್ನಡಪ್ರಭ ವಾರ್ತೆ, ದಾವಣಗೆರೆ
ಪತ್ನಿಯ ಶೀಲ ಶಂಕಿಸಿ ತನ್ನ ಮನೆಯಲ್ಲೇ ನಡುರಾತ್ರಿ ಲಟ್ಟಣಿಗೆ ಮತ್ತು ತರಕಾರಿ ಕತ್ತರಿಸುವ ಮರದ ತುಂಡಿನಿಂದ ತಲೆ ಹಾಗೂ ಮೈ, ಕೈಗಳಿಗೆ ಹೊಡೆದು ಕೊಲೆ ಮಾಡಿದ್ದ ಆರೋಪಿಯನ್ನು ಹರಿಹರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.ಹರಿಹರ ತಾಲೂಕಿನ ಬೆಳ್ಳೂಡಿ ಸಮೀಪದ ಶ್ರೀ ಕನಕ ಗುರುಪೀಠದ ಬಳಿಯ ಅಕ್ಷಯ್ ಹೋಟೆಲ್ ಕೆಲಸಗಾರ, ನೇಪಾಳ ಮೂಲದ ರಮನ್ ಕುಮಾರ ಥಾಪ (40) ಬಂಧಿತ ಪತಿರಾಯ.
ಮಾ.21ರಂದು ಘಟನೆ ನಡೆದಿದ್ದು, ಇಂದ್ರ ಥಾಪ ಮೃತ ಗೃಹಿಣಿ. ರಮನ್ ಕುಮಾರ ಥಾಪ ಹಾಘೂ ಇಂದ್ರ ಥಾಪ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ನೇಪಾಳ ದೇಶದ ಸುರುಕೇತ್ ಜಿಲ್ಲೆಯ ದುಲೈಪೀಟಿ ಪಟ್ಟಣದ ಏರ್‌ಪೋರ್ಟ್ ಸಮೀಪದ ವಾಸಿಯಾಗಿದ್ದಾರೆ. ಈ ದಂಪತಿ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ಕನಕ ಮಠದ ಬಳಿ ಶಂಷೇರ್ ಅಲಿ ಬರಗೇರ್‌ರ ಮನೆಯಲ್ಲಿ ವಾಸವಾಗಿದ್ದರು. ರಮನ್ ಕುಮಾರ್ ಸನಿಹದ ಅಕ್ಷಯ ಹೊಟೆಲ್‌ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದನು. ಆದರೆ, ಪತ್ನಿಯ ಶೀಲದ ಬಗ್ಗೆ ಪದೇಪದೇ ಶಂಕೆಗೊಳ್ಳುತ್ತಿದ್ದನು.ಮಾ.21ರ ಬೆಳಗಿನ ಜಾವ 12.30ರಿಂದ ಮಧ್ಯಾಹ್ನ 12.45ರ ಮಧ್ಯದ ಅವಧಿಯಲ್ಲಿ ಪತಿ-ಪತ್ನಿ ಮಧ್ಯೆ ಜಗಳ ಉಂಟಾಗಿದೆ. ಈ ವೇಳೆ ಪತ್ನಿ ಇಂದ್ರ ಥಾಪೆಗೆ ಲಟ್ಟಣಿಗೆ ಮತ್ತು ತರಕಾರಿ ಕತ್ತರಿಸುವ ಮರದ ತುಂಡಿನಿಂದ ಹಲ್ಲೆ ನಡೆಸಿದ್ದನು. ತಲೆ ಹಾಗೂ ಮೈ-ಕೈಗಳಿಗೆ ಹೊಡೆದಿದ್ದ ಪರಿಣಾಮ ಆಕೆ ಮೃತಪಟ್ಟಿದ್ದಳು. ಈ ಬಗ್ಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಪೊಲೀಸರು ಆರೋಪಿ ರಮನ್ ಕುಮಾರ್ ಥಾಪೆನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಎಎಸ್‌ಪಿಗಳಾದ ವಿಜಯಕುಮಾರ ಎಂ. ಸಂತೋಷ, ಜಿ.ಮಂಜುನಾಥ, ಡಿವೈಎಸ್‌ಪಿ ಪ್ರಶಾಂತ ಎಫ್. ಸಿದ್ದನಗೌಡ ಮಾರ್ಗದರ್ಶನದಲ್ಲಿ ಹರಿಹರ ಸಿಪಿಐ ಸುರೇಶ ಸಗರಿ, ಗ್ರಾಮಾಂತರ ಎಸ್ಐ ಮಂಜು ಕುಪ್ಪೆಲೂರು, ಸಿಬ್ಬಂದಿ ಮಹಮ್ಮದ್ ಇಲಿಯಾಸ್, ಜಿ.ಎಂ.ನಾಗರಾಜ, ಮುರಳಿಧರ, ಜಿ.ಎನ್.ರಮೇಶ, ನೀಲಮೂರ್ತಿ, ಅರ್ಜುನ್, ಅನಿಲ್ ನಾಯ್ಕ, ಸಿದ್ದಪ್ಪ ಅವರನ್ನು ಒಳಗೊಂಡ ತಂಡ ಹಂತಕನನ್ನು ಬಂಧಿಸಿದೆ. ಅಧಿಕಾರಿಗಳು, ಸಿಬ್ಬಂದಿ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.