ನೆಟ್ಟಾರು ಕೊಲೆ: ಒಂದೇ ಜೈಲಿಗೆ ಸ್ಥಳಾಂತರಿಸುವ ಅರ್ಜಿ ವಜಾ

KannadaprabhaNewsNetwork |  
Published : Mar 22, 2024, 01:02 AM IST
11 | Kannada Prabha

ಸಾರಾಂಶ

ರಾಜ್ಯದ ಎಲ್ಲ ಜೈಲುಗಳಲ್ಲಿ ಕೈದಿಗಳೊಂದಿಗೆ ವಕೀಲರು ಸಂಭಾಷಣೆ/ಸಮಾಲೋಚನೆ ನಡೆಸಲು ಅತ್ಯತ್ತಮ ವಿಡಿಯೋ ಕಾನ್ಫರೆನ್ಸಿಂಗ್ ವ್ಯವಸ್ಥೆ ಕಲ್ಪಿಸಬೇಕು. ವಕೀಲರು ಹಾಗೂ ಕುಟುಂಬದ ಸದಸ್ಯರೊಂದಿಗೆ ನಡೆಸುವ ಸಂಭಾಷಣೆ ಮತ್ತೊಬ್ಬರಿಗೆ ತಿಳಿಯದಂತೆ ಗೌಪ್ಯತೆ ಕಾಪಾಡಲು ಹೆಡ್‌ಫೋನ್‌ಗಳನ್ನು ಒದಗಿಸಬೇಕು ಎಂದು ಆದೇಶದಲ್ಲಿ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜೀವ ಭಯ ಇರುವುದರಿಂದ ಮತ್ತು ವಕೀಲರೊಂದಿಗೆ ಚರ್ಚೆ ನಡೆಸಲು ತಮ್ಮನ್ನು ಒಂದೇ ಕಾರಾಗೃಹಕ್ಕೆ ಸ್ಥಳಾಂತರಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ 11 ಮಂದಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಪ್ರವೀಣ್ ನೆಟ್ಟಾರು ಕೊಲೆ ಆರೋಪದಲ್ಲಿ ಬಂಧನಕ್ಕೆ ಒಳಗಾಗಿ ಸದ್ಯ ರಾಜ್ಯದ ವಿವಿಧ ಜೈಲುಗಳಲ್ಲಿರುವ ಅಬ್ದುಲ್ ಬಷೀರ್ ಸೇರಿದಂತೆ 11 ಮಂದಿ ವಿಚಾರಣಾಧೀನ ಕೈದಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.ರಾಜ್ಯದ ಎಲ್ಲ ಜೈಲುಗಳಲ್ಲಿ ಕೈದಿಗಳೊಂದಿಗೆ ವಕೀಲರು ಸಂಭಾಷಣೆ/ಸಮಾಲೋಚನೆ ನಡೆಸಲು ಅತ್ಯತ್ತಮ ವಿಡಿಯೋ ಕಾನ್ಫರೆನ್ಸಿಂಗ್ ವ್ಯವಸ್ಥೆ ಕಲ್ಪಿಸಬೇಕು. ವಕೀಲರು ಹಾಗೂ ಕುಟುಂಬದ ಸದಸ್ಯರೊಂದಿಗೆ ನಡೆಸುವ ಸಂಭಾಷಣೆ ಮತ್ತೊಬ್ಬರಿಗೆ ತಿಳಿಯದಂತೆ ಗೌಪ್ಯತೆ ಕಾಪಾಡಲು ಹೆಡ್‌ಫೋನ್‌ಗಳನ್ನು ಒದಗಿಸಬೇಕು ಎಂದು ಆದೇಶದಲ್ಲಿ ಸರ್ಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿದೆ.

ಪ್ರಕರಣದ ವಿವರದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿ ಸಮಿತಿಯ ಸದಸ್ಯನಾಗಿದ್ದ ಪ್ರವೀಣ್ ನೆಟ್ಟಾರು ಅವರನ್ನು 2022ರ ಜು.26ರಂದು ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದರು. ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಪೊಲೀಸರು, ಅರ್ಜಿದಾರರನ್ನು ಬಂಧಿಸಿದ್ದರು. 2023ರ ಜನವರಿಯಲ್ಲಿ ಪ್ರಕರಣದ ಆರೋಪಿಯಾದ ಮಹಮ್ಮದ್ ಜಬೀರ್‌, ತಪ್ಪೊಪ್ಪಿಕೊಳ್ಳುವುದಾಗಿ ತಿಳಿಸಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅದನ್ನು ಪರಿಗಣಿಸಿದ್ದ ರಾಜ್ಯ ಸರ್ಕಾರ ವಿಚಾರಣಾ ನ್ಯಾಯಾಲಯಕ್ಕೆ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಸ್ಥಳಾಂತರ ಮಾಡಲು ಅನುಮತಿ ಕೋರಿತ್ತು. ಅದರಂತೆ ನ್ಯಾಯಾಲಯ ಅನುಮತಿ ನೀಡಿತ್ತು. ಈ ನಡುವೆ ಅರ್ಜಿದಾರ ಆರೋಪಿಗಳು ಬೆಳಗಾವಿ ಕೇಂದ್ರ ಕಾರಾಗೃಹ ಪ್ರವೇಶಿಸುವ ಸಂದರ್ಭದಲ್ಲಿ ಇತರೆ ಕೈದಿಗಳು ಹಲ್ಲೆ ನಡೆಸಿರುವ ಆರೋಪ ಎದುರಾಗಿತ್ತು. ಆದ್ದರಿಂದ ಪ್ರಕರಣ ಎಲ್ಲ ಆರೋಪಿಗಳನ್ನು ಒಂದೇ ಜೈಲಿನಲ್ಲಿಡುವುದಕ್ಕೆ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಅರ್ಜಿದಾರರ ಪರ ವಕೀಲರು, ಅರ್ಜಿದಾರರನ್ನು ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಿ ವಿವಿಧ ಕೊಠಡಿಗಳಲ್ಲಿ ಇರಿಸಬೇಕು. ಜೈಲುಗಳಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆ ಸರಿಯಿಲ್ಲದ ಕಾರಣ ಅವರು ವಕೀಲರು ಚರ್ಚೆ ನಡೆಸಲು ಸಾಧ್ಯವಿಲ್ಲದಂತಾಗಿದೆ. ಹಾಗಾಗಿ, ಅಗತ್ಯವಿದ್ದಾಗ ವಕೀಲರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿದರು. ಅದನ್ನು ಆಕ್ಷೇಪಿಸಿದ ಅಡ್ವೋಕೇಟ್ ಜನರಲ್, ಅರ್ಜಿದಾರರನ್ನು ಒಂದೇ ಕಡೆಯಲ್ಲಿ ಇರಿಸಿದರೆ ಮತ್ತೊಂದು ಪಿತೂರಿ ನಡೆಸಲು ಸಿದ್ಧತೆ ಮಾಡಿಕೊಳ್ಳಬಹುದು. ಅವರ ಮೇಲೆ ಯಾವುದೇ ರೀತಿಯಲ್ಲಿಯೂ ಹಲ್ಲೆ ನಡೆದಿಲ್ಲ. ಬೆಳಗಾವಿಯಲ್ಲಿ ನಡೆದಿರುವುದು ಮತ್ತೊಂದು ಕೈದಿ ವಿರುದ್ಧವಾಗಿದೆ. ಹಾಗಾಗಿ, ಅರ್ಜಿದಾರರ ಮನವಿ ಪರಿಗಣಿಸಬಾರದು. ರಾಜ್ಯದ ಎಲ್ಲ ಜೈಲುಗಳಲ್ಲಿ ವಿಡಿಯೋ ಕಾನ್ಫರೆನ್ಸ್ ವ್ಯವಸ್ಥೆಯಿದೆ. ಕೈದಿಗಳು ಅಗತ್ಯವಿದ್ದರೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಬೆಂಗಳೂರಿನ ಕಾರಾಗೃಹದಲ್ಲಿ ನಾಲ್ಕು ಸಾವಿರ ಕೈದಿಗಳಿಗೆ ಮಾತ್ರ ಸ್ಥಳಾವಕಾಶ ಹಾಗೂ ಇತರೆ ವ್ಯವಸ್ಥೆ ಇದೆ. ಪ್ರಸ್ತುತ 5,200 ಕೈದಿಗಳನ್ನು ಇರಿಸಲಾಗಿದೆ. ಅರ್ಜಿದಾರರನ್ನು ಬೆಂಗಳೂರಿನ ಕಾರಾಗೃಹಕ್ಕೆ ಸ್ಥಳಾಂತರ ಮಾಡುವುದು ಉತ್ತಮ ಬೆಳವಣಿಗೆಯಲ್ಲ ಎಂದು ಪೀಠದ ಗಮನಕ್ಕೆ ತಂದಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಒಲವಿನ ಊಟ ಬಡಿಸಲು ಸಿದ್ಧವಾದ ಅಕ್ಕ ಕೆಫೆ
ಚನ್ನಮ್ಮ ಮೂರ್ತಿ ಉದ್ಘಾಟನಾ ಸಮಾರಂಭಕ್ಕೆ ಬಹಿಷ್ಕಾರ