ಕನ್ನಡಪ್ರಭ ವಾರ್ತೆ ಬೆಳಗಾವಿ
ಬದುಕಿಗೆ ಬುನಾದಿ ಹಾಕುವ ಕಲಿತ ಶಾಲೆಯನ್ನು ಕಲಿಸಿದ ಗುರುಗಳನ್ನು ಹಾಗೂ ಸಹಪಾಠಿ ಗೆಳೆಯರನ್ನು ಎಂದಿಗೂ ಮರೆಯಬಾರದು. ಸಂಕಷ್ಟ ಬಂದಾಗ ಎಲ್ಲರಿಗಿಂತ ಮೊದಲು ಸಹಾಯಕ್ಕೆ ಸಹಪಾಠಿ ಗೆಳೆಯರು ಬರುತ್ತಾರೆ. ಅದಕ್ಕಾಗಿ ನಾನೆಂದಿಗೂ ಅವರನ್ನು ಮರೆತಿಲ್ಲ ನೀವೂ ಮರೆಯಬೇಡಿ ಎಂದು ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ ಹೇಳಿದರು.ನಗರದ ಕನ್ನಡ ಭವನದಲ್ಲಿ ಎಂ.ಕೆ ಹುಬ್ಬಳ್ಳಿಯ ಶ್ರೀ ಕಲ್ಮೇಶ್ವರ ಇಂಗ್ಲಿಷ್ ಹೈಸ್ಕೂಲಿನ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯ ಗುರುಗಳಾದ ಗಂಗಾಧರ ಕೋಟಗಿ ಮಾತನಾಡಿ, ಶಿಕ್ಷಕನಿಗೆ ನಿವೃತ್ತಿ ಎಂಬುದಿಲ್ಲ. ಗುರು-ಶಿಷ್ಯನ ಸಂಬಂಧ ಅಳೆಯಲು ಸಾಧ್ಯವಿಲ್ಲ. ಅದು ಎಲ್ಲಿಯವರೆಗೆ ಗಟ್ಟಿಯಾಗಿರುತ್ತದೋ ಆವತ್ತಿನವರೆಗೂ ಶಿಕ್ಷಕನ ಸೇವೆ ನಿರಂತರವಾಗಿರುತ್ತದೆ. ಕಲಿಸಿದ ಗುರುಗಳನ್ನು ಸ್ಮರಿಸಿಕೊಂಡು ಯಾವುದೇ ಕೆಲಸ ಮಾಡಿದರೂ ಆ ಕಾರ್ಯ ಸಿದ್ಧಿಯಾಗುತ್ತದೆ ಎಂದು ಹೇಳಿದರು.
ಕಲ್ಮೇಶ್ವರ ಪ್ರೌಢಶಾಲೆ ಬಹಳಷ್ಟು ಜನ ಹಿರಿಯರಯ ಸೇರಿ ಸಂಸ್ಥೆ ಕಟ್ಟಿ ಬೆಳೆಸಿದ್ದಾರೆ. ಇಲ್ಲಿ ಕಲಿತ ಲಕ್ಷಾಂತರ ಜನರು ಬದುಕು ಕಟ್ಟಿಕೊಂಡಿದ್ದಾರೆ. ಶಾಲೆಯು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿದೆ. ಇಲ್ಲಿ ಕಲಿತ ಹಲವಾರು ಜನ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗಿದೆ. ಎಲ್ಲ ಸಾಧಕರನ್ನು ಶಾಲೆಗೆ ಕರೆದು ಗೌರವಿಸಲು ವಿಶೇಷವಾದ ಕಾರ್ಯಕ್ರಮವನ್ನು ಶೀಘ್ರ ಮಾಡಲಾಗುವುದು ಎಂದ ಅವರು, ಈ ಶಾಲೆಯಲ್ಲಿ ಕಲಿತ ಎಲ್ಲ ವಿದ್ಯಾರ್ಥಿಗಳು ಸಂಘಟಿತರಾಗಿ ಶಾಲೆಯ ಶ್ರೇಯೋಭಿವೃದ್ಧಿಗೆ ಚಿಂತನೆ ಮಾಡಬೇಕು ಎಂದು ಗಂಗಾಧರ ಕೋಟಗಿ ಹೇಳಿದರು.ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯಾಧ್ಯಕ್ಷ ಪ್ರಸಿದ್ಧ ನ್ಯಾಯವಾದಿ ದಿನೇಶ್ ಪಾಟೀಲ ಮಾತನಾಡಿ, 60 ದಶಕದಲ್ಲಿ ಹಿರಿಯರು ಕಲ್ಮೇಶ್ವರ ಇಂಗ್ಲಿಷ್ ಮಿಡಿಯಂ ಹೈಸ್ಕೂಲ್ ಆರಂಭಿಸಿದರು. ಬದುಕಿನಲ್ಲಿ ಇಂಗ್ಲಿಷ್ ಎಷ್ಟು ಅವಶ್ಯಕತೆ ಇದೆ ಅನ್ನೋದನ್ನು ಅವರು ಆಗಿನ ಸಮಯದಲ್ಲೇ ಅರಿತುಕೊಂಡಿದ್ದರು. ಇದರ ಪರಿಣಾಮ ಈ ಶಾಲೆಯಲ್ಲಿ ಕಲಿತ ಅನೇಕರು ಬೇರೆ ಬೇರೆ ಕ್ಷೇತ್ರಗಳಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೆಲ್ಲರನ್ನು ಒಂದೇ ಒಂದೇ ವೇದಿಕೆಗೆ ಕರೆತರುವ ಕಾರ್ಯವನ್ನು ಹಳೆಯ ವಿದ್ಯಾರ್ಥಿಗಳ ಸಂಘ ಮಾಡುತ್ತಿದೆ. ಕಲ್ಮೇಶ್ವರ ಹೈಸ್ಕೂಲಿನಲ್ಲಿ ಕಲಿತ ವಿದ್ಯಾರ್ಥಿಗಳು ಒಂದೇ ಕಡೆ ಸೇರಿಸುವ ಸಂಕಲ್ಪ ಮಾಡಿದ್ದೀರಿ. ಇದಕ್ಕೆ ಎಲ್ಲ ವಿದ್ಯಾರ್ಥಿಗಳ ಸಹಕಾರ ನೀಡಬೇಕು ಎಂದು ತಿಳಿಸಿದರು.
ಹಳೆಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮವನ್ನು ಬೇರೆ ಸಮಯದಲ್ಲಿ ಹಮ್ಮಿಕೊಳ್ಳುವ ಉದ್ದೇಶ ಇತ್ತು. ಆದರೆ ಇಂದು ಫ್ರಂಡ್‌ಶಿಪ್ ಡೇ ಇರುವುದರಿಂದ ಇವತ್ತಿನ ದಿನವೇ ಕಾರ್ಯಕ್ರಮ ಮಾಡೋದು ಸೂಕ್ತ ಎಂದು ನಿರ್ಧರಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಾಲೆಯ ಸಂಬಂಧ, ಗುರುವಿನ ದೀಕ್ಷೆ, ಆ ಸಮಯದ ಗೆಳೆಯರ ಒಡನಾಟವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಸಾಯೋವರೆಗೂ ಆ ನೆನಪು ಅಚ್ಚಳಿಯೇ ಉಳಿಯುತ್ತದೆ ಎಂದರು.ಇದೇ ಸಂಧರ್ಭದಲ್ಲಿ ಕಲ್ಲೇಶ್ವರ ಹೈಸ್ಕೂಲಿನಲ್ಲಿ ಕಲಿತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು, ಶಾಲೆಯ ಶಿಕ್ಷಕರನ್ನು ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರನ್ನು ಸತ್ಕರಿಸಿ ಗೌರವಿಸಲಾಯಿತು. ಎಸ್.ಎಸ್ ಗಂಗಾಧರ ಮಠ, ಜಿ.ಎಸ್ ಹಲಸಗಿ, ಎನ್ ಬಿ ಬಳಿಗಾರ ಉಪಸ್ಥಿತರಿದ್ದರು.