ಗದಗ: ರಾಜ್ಯದಲ್ಲಿ ಸದ್ಯದಲ್ಲಿಯೇ ನೂತನ ಜೈವಿಕ ಇಂಧನ ನೀತಿ ಜಾರಿ ಮಾಡಲಾಗುವುದು ಎಂದು ಕರ್ನಾಟಕ ಜೈವಿಕ ಮಂಡಳಿ ಅಧ್ಯಕ್ಷ ಈ. ಎಸ್. ಸುಧೀಂದ್ರ ಹೇಳಿದರು.
ತಾಲೂಕಿನ ನಾಗಾವಿ ಗ್ರಾಮದಲ್ಲಿರುವ ಗ್ರಾಮೀಣಾಭಿವೃದ್ಧಿ ವಿವಿಯಲ್ಲಿ ಬುಧವಾರ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯಿಂದ ಸದ್ಭಾವನ ದಿವಸ್, ಅಕ್ಷಯ ಊರ್ಜಾ ದಿವಸ್ ಮತ್ತು ವಿಶ್ವ ಜೈವಿಕ ಇಂಧನ ದಿನಾಚರಣೆ ಕಾರ್ಯಕ್ರಮವನ್ನು ಇಂಧನ ಸಸಿಗಳನ್ನು ನೆಡುವುದು ಹಾಗೂ ವಾಹನಗಳಿಗೆ ಬಯೋಡೀಸೆಲ್ ತುಂಬುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಈಗಾಗಲೇ ನೂತನ ಜೈವಿಕ ಇಂಧನ ನೀತಿ ರಚನೆಯ ಕುರಿತು ಎಲ್ಲ ಪೂರ್ವಭಾವಿ ಕಾರ್ಯ ಚಟುವಟಿಕೆ ಪೂರ್ಣಗೊಳಿಸಿದೆ. ಶೀಘ್ರದಲ್ಲಿಯೇ ನೂತನ ಜೈವಿಕ ಇಂಧನ ನೀತಿಯು ರಾಜ್ಯ ಸರ್ಕಾರದಿಂದ ಘೋಷಣೆಯಾಗಲಿದೆ. ಈಗಾಗಲೇ ಅನುಷ್ಠಾನ ಪ್ರಕ್ರಿಯೆ ಮಾರ್ಗಸೂಚಿ ಸಿದ್ಧಗೊಳಿಸಲಾಗಿದ್ದು, ಮುಂದಿನ 5 ವರ್ಷಗಳಲ್ಲಿ 1ಲಕ್ಷ ಕೋಟಿಗೂ ಹೆಚ್ಚಿನ ಬಂಡವಾಳ ಹೂಡಿಕೆ ಜೈವಿಕ ಇಂಧನ ಕ್ಷೇತ್ರದಲ್ಲಿ ನಿರೀಕ್ಷಿಸಲಾಗಿದೆ. 3 ಲಕ್ಷಕ್ಕೂ ಹೆಚ್ಚಿನ ಪ್ರತ್ಯಕ್ಷ ಹಾಗೂ ಪರೋಕ್ಷ ಉದ್ಯೋಗ ಸೃಜನೆ, ರೈತರ ಕುಟುಂಬಗಳ ಆದಾಯದ ಹೆಚ್ಚಳ, ಯುವ ಉದ್ದಿಮೆದಾರರಿಗೆ ಪ್ರೋತ್ಸಾಹ ದೊರೆಯಲಿದ್ದು, ಮುಂದಿನ 5 ವರ್ಷಗಳು ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಯಲ್ಲಿ ನಿರ್ಣಾಯಕವಾಗಲಿದೆ ಎಂದರು.
ರಾಜ್ಯ ಸರ್ಕಾರ ರಿನೀವೆಬಲ್ ಎನರ್ಜಿಗಳಾದ ಸೋಲಾರ್, ವಿಂಡ್ ಎನರ್ಜಿ ಕ್ಷೇತ್ರದಲ್ಲಿ ರಾಜ್ಯವು ಉತ್ತಮ ಸಾಧನೆ ಮಾಡಲು ಈಗಾಗಲೇ ಹಲವಾರು ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸಿದೆ. ಪ್ರಸ್ತುತ ಜೈವಿಕ ಇಂಧನ ಕ್ಷೇತ್ರದ ಅಭಿವೃದ್ಧಿಗೂ ಸರ್ಕಾರ ಆಸಕ್ತಿ ತೋರಿದೆ. ನೂತನ ಜೈವಿಕ ಇಂಧನ ನೀತಿಯು ಈ ಕ್ಷೇತ್ರದ ಅಭಿವೃದ್ಧಿಗೆ ವೇಗ ವರ್ಧಕವಾಗಲಿದೆ ಎಂದು ತಿಳಿಸಿದರು.“ಭಾರತದ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ವಿಜ್ಞಾನ, ತಂತ್ರಜ್ಞಾನ ಮತ್ತು ಪುನರ್‌ಉತ್ಪಾದನೀಯ ಇಂಧನ ಕ್ಷೇತ್ರಕ್ಕೆ ನೀಡಿದ ದೂರದೃಷ್ಟಿ ಇಂದು ಜೈವಿಕ ಇಂಧನ ಚಳುವಳಿಗೆ ಪ್ರೇರಕವಾಗಿದೆ. ಸದ್ಭಾವನಾ ದಿವಸ್ ಹಾಗೂ ಊರ್ಜಾ ದಿವಸ್ ಒಂದೇ ನಾಣ್ಯದ ಎರಡು ಮುಖಗಳಂತಿವೆ. ಇದರಿಂದ ರಾಷ್ಟ್ರೀಯ ಏಕತೆ, ಸಾಮಾಜಿಕ ಸೌಹಾರ್ದತೆ ಮತ್ತು ಸಹಿಷ್ಣುತೆಯ ಸಂದೇಶವನ್ನು ಜನತೆಗೆ ತಲುಪಿಸುವುದರ ಜೊತೆಗೆ, ವಿದ್ಯಾರ್ಥಿಗಳಲ್ಲಿ ನವೀಕರಿಸಬಹುದಾದ ಇಂಧನಗಳ ಕುರಿತು ಅರಿವು ಮೂಡಿಸುವುದೇ ಮುಖ್ಯ ಉದ್ದೇಶ” ಎಂದು ಹೇಳಿದರು.
ಸದ್ಭಾವನಾ ದಿವಸ್ ಹಾಗೂ ಊರ್ಜಾ ದಿವಸ್ 21ನೇ ಶತಮಾನದ ವಿಜ್ಞಾನ, ತಂತ್ರಜ್ಞಾನ, ಮಾಹಿತಿ ಹಾಗೂ ಜೀವ ವಿಜ್ಞಾನಕ್ಕೆ ಮುನ್ನುಡಿ ಬರೆದ ದಿನಾಚರಣೆ, ರಾಷ್ಟ್ರೀಯ ಐಕ್ಯತೆ, ಸಾಮಾಜಿಕ ಸೌಹಾರ್ದತೆ ಮತ್ತು ಸಹಿಷ್ಣತೆ ಕುರಿತು ಜನತೆಯಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವುದು ಈ ಊರ್ಜಾ ದಿವಸ್ ಮುಖ್ಯ ಉದ್ದೇಶವಾಗಿದೆ. ರಿನೀವಬಲ್ ಎನರ್ಜಿ ಕುರಿತು ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಅರಿವು ಮತ್ತು ಜಾಗೃತಿ ಮೂಡಿಸುವುದಾಗಿದೆ. ಈ ವಿಶ್ವ ಜೈವಿಕ ಇಂಧನ ದಿನಾಚರಣೆಯ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ರಾಜ್ಯದಲ್ಲಿ ಜೈವಿಕ ಇಂಧನ ಕುರಿತು ಈಗಾಗಲೇ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಜೈವಿಕ ಇಂಧನ ಕ್ಷೇತ್ರದ ಉನ್ನತೀಕರಣ ಮತ್ತು ವಾಣಿಜ್ಯೀಕರಣ ಅತ್ಯಗತ್ಯವಾಗಿದೆ. ಬೇರೆ ಬೇರೆ ರಾಜ್ಯಗಳಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಗಣನೀಯವಾಗಿ ಜೈವಿಕ ಇಂಧನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು ಮಂಡಳಿಯೂ ಸಹ ಈ ದಿಶೆಯಲ್ಲಿ ಕಾರ್ಯಯೋಜನೆ ರೂಪಿಸುವುದು ಅನಿವಾರ್ಯವಾಗಿದೆ ಎಂದರು.ಅರಣ್ಯ ಸಂರಕ್ಷಾಧಿಕಾರಿ ಸಂತೋಷ ಕೆಂಚಪ್ಪಣ್ಣವರ ಮಾತನಾಡಿ, ದೇಶದಲ್ಲಿ ಹಸಿರು ಕ್ರಾಂತಿ, ಕ್ಷೀರ ಕ್ರಾಂತಿ ನಡೆದಿದೆ. ಈಗ ಜೈವಿಕ ಕ್ರಾಂತಿ ನಡೆದಿರುವುದು ದೇಶದ ಅಭಿವೃದ್ಧಿಗೆ ಪೂರಕ ಆಗಲಿದೆ. ಈ ಮೊದಲು ಗಿಡಮರಗಳಿಂದ ಉತ್ಪದನೆ ಆಗುವ ಇಂಧನಗಳಿಗೆ ಮಾತ್ರ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಇತ್ತೀಚಿಗೆ ಕಬ್ಬಿನಿಂದ ಎಥೆನಾಲ್ ಉತ್ಪಾದನೆ ಹೆಚ್ಚಾಗುತ್ತಿದೆ. ಕಬ್ಬಿನ ಕಸದಿಂದ ಸುಟ್ಟು ಬರುವ ಕಚ್ಚಾ ವಸ್ತುಗಳಿಂದ ವಿದ್ಯುತ್ ಉತ್ಪಾದನೆ ಆಗುತ್ತಿದೆ. ಸಕ್ಕರೆ ಕಾರ್ಖಾನೆಗಳಿಂದ ಜೈವಿಕ ಇಂಧನ ಅಧಿಕ ಉತ್ಪಾದನೆ ಆಗುತ್ತಿರುವುದು ಇಂಧನ ವಲಯಕ್ಕೆ ಶಕ್ತಿ ತುಂಬಿದೆ ಎಂದರು.
ಪುನರ್ಬಳಕೆ ಇಂಧನ ಬಳಕೆ ಇತ್ತೀಚಿನ ದಿನಗಳಲ್ಲಿ ಅಧಿಕವಾಗುತ್ತಿದೆ. ಪರಿಸರ ರಕ್ಷಣೆ ಮತ್ತು ಸಂಪನ್ಮೂಲಗಳ ಸಮರ್ಪಕ ಬಳಕೆಯಿಂದ ಪುನರ್ಬಳಕೆ ಇಂಧನ ಉದ್ದೇಶ ಸಾಕಾರವಾಗಲಿದೆ. ಜೈವಿಕ ಇಂಧನದಿಂದ ವಿದೇಶದಿಂದ ಇಂಧನ ಆಮದು ಕಡಿಮೆ ಆಗಲಿದೆ. ಜೈವಿಕ ಇಂಧನದಿಂದ ಹಸರೀಕರಣ ಹೆಚ್ಚಾಗಲಿದೆ ಎಂದರು.ಜೈವಿಕ ಇಂಧನ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ ಮಾತನಾಡಿ, ಶುಚಿತ್ವಕ್ಕೆ ಮೊದಲ ಆದ್ಯತೆ ನೀಡಬೇಕು. ಮುಂದಿನ 30 ವರ್ಷಗಳಲ್ಲಿ ಭಾರತ ಬಲಿಷ್ಠ ರಾಷ್ಟ್ರವಾಗಲಿದೆ ಎಂದರು. “ವಿಶ್ವವಿದ್ಯಾಲಯದಲ್ಲಿ ಜೈವಿಕ ಡೀಸೆಲ್ ಉತ್ಪಾದನಾ ಘಟಕಗಳ ಸ್ಥಾಪನೆಗೆ ಮಂಡಳಿ ಸಹಕಾರ ನೀಡಲಿದೆ ಇದರಿಂದ ವಿಶ್ವವಿದ್ಯಾಲಯದ ನವೀಕರಿಸಬಹುದಾದ ಶಕ್ತಿಸ್ವಾವಲಂಬನೆ ಸಾಧನೆಗೆ ಇದು ನೆರವಾಗಲಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಡಾ. ಸುರೇಶ್ ನಾಡಗೌಡರ, ವಿದ್ಯಾಲಯದ ವಿತ್ತಾಧಿಕಾರಿ ಪ್ರಶಾಂತ್ ಜೆ.ಸಿ, ಜೈವಿಕ ಇಂಧನ ಸಂಶೋಧನೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದ ಸಂಯೋಜಕ ಡಾ. ರವಿ ಜಡೆ, ಸಹಾಯಕ ನಿರ್ದೇಶಕ ಗಿರೀಶ್ ದಿಕ್ಷಿತ್ ಮುಂತಾದವರು ಇದ್ದರು.