ಡಿ.ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ
ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರಾಜ್ಯದಲ್ಲಿ ಭೂ ಒಡೆತನ, ಮೀಸಲಾತಿ ಸೌಲಭ್ಯ ಕಲ್ಪಿಸಿ ಶೋಷಿತ ಸಮುದಾಯಗಳಿಗೆ ಅಸ್ಮಿತೆಯನ್ನು ತಂದುಕೊಟ್ಟ ಸಾಮಾಜಿಕ ಕ್ರಾಂತಿಯ ಹರಿಕಾರ ಎಂದು ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ (ಲಿಡ್ಕರ್) ಅಧ್ಯಕ್ಷ ಮುಂಡರಗಿ ನಾಗರಾಜ ಹೇಳಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಕ್ರೀಡಾಂಗಣ ರಸ್ತೆಯ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಸಾಮಾಜಿಕ ನ್ಯಾಯದ ಹರಿಕಾರ, ಹಿಂದುಳಿದ ವರ್ಗಗಳ ನೇತಾರ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆಯ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ದೇವರಾಜ ಅರಸು ಅವರು 1972ರಿಂದ 1980ರವರೆಗೆ ಮುಖ್ಯಮಂತ್ರಿಯಾಗಿದ್ದರು. ಅವರು ಕರ್ನಾಟಕದ ಅಪರೂಪದ ರಾಜಕಾರಣಿ. ಬಡವರು, ಸಾಮಾಜಿಕ ನ್ಯಾಯದ ಪರವಾಗಿ ಇದ್ದವರು.
ದೇವರಾಜು ಅರಸು ಹಲವು ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೊಳಿಸಿ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಕ್ಕೆ ಅನುಕೂಲ ಮಾಡಿಕೊಟ್ಟರು. ದಕ್ಷ ಆಡಳಿತಗಾರ ಆಗಿದ್ದ ಅವರು ಎಲ್.ಜಿ.ಹಾವನೂರು ವರದಿ ಜಾರಿಗೊಳಿಸಿ ಸಣ್ಣ, ಶೋಷಿತ ಸಮುದಾಯಕ್ಕೆ ನೆರವಾದರು ಎಂದರು.
ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ಒಬ್ಬ ಮನುಷ್ಯ ದೇವರಾಗಲು ಸಾಧ್ಯವಿಲ್ಲ. ಅಂದಿನ ಸಮಯದಲ್ಲಿ ದೇವರಾಜು ಅರಸರನ್ನು ಬಡವರು, ದಲಿತರು, ಹಿಂದುಳಿದ ವರ್ಗದವರ ದೇವರೆಂದೇ ಭಾವಿಸಿದ್ದರು. ಯಾರೇ ಆದರೂ ಅಧಿಕಾರವನ್ನು ಒಳ್ಳೆಯ ಕೆಲಸಗಳಿಗಾಗಿಯೇ ವಿನಿಯೋಗಿಸದಾಗ ಮಾತ್ರ ಸಾರ್ಥಕವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಂವಿಧಾನ ಪೀಠಿಕೆ ಬೋಧಿಸಲಾಯಿತು. ನಂತರ ‘ಸದ್ಭಾವನಾ ದಿನಾಚರಣೆ’ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಅತಿಹೆಚ್ಚು ಅಂಕ ಪಡೆದ, ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳಿಗೆ ಪ್ರಶಸ್ತಿ, ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಡಿ.ದೇವರಾಜ ಅರಸು ದೂರದೃಷ್ಟಿ ಹೊಂದಿದ ಬಹುತ್ವವಾದಿಯಾಗಿದ್ದರು. ವಿಧಾನಸೌಧದ ಮೆಟ್ಟಿಲು ಹತ್ತದವರನ್ನು ವಿಧಾನಸೌಧಕ್ಕೆ ಬರುವ ಹಾಗೆ ಮಾಡಿದವರು. ಅವರ ಕನಸುಗಳನ್ನು ಈಡೇರಿಸುವ ಹೊಣೆಗಾರಿಕೆ ಈಗಿನ ಯುವಕರ ಮೇಲಿದೆ ಎಂದರು.