ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಪದಗ್ರಹಣ: ಕಿಶೋರ್‌ ಕುಮಾರ್‌ ಬಹಿರಂಗ ಅಸಮಾಧಾನ

KannadaprabhaNewsNetwork |  
Published : Jun 17, 2025, 04:20 AM IST
32 | Kannada Prabha

ಸಾರಾಂಶ

ನನ್ನ ಬಳಿ ಅಧಿಕಾರ ಇಲ್ಲದೆ ಬೇರೊಬ್ಬರಿಗೆ ಅಧಿಕಾರ ಹಸ್ತಾಂತರ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ. ರಾಜಕಾರಣ ಬಿಟ್ಟು ದೊಡ್ಡ ಪ್ರಪಂಚ ನನ್ನ ಮುಂದೆ ಇದೆ. ಅಲ್ಲಿ ಹೇಗೆ ಇರಬೇಕು ಎಂಬುದು ನನಗೆ ಗೊತ್ತಿದೆ ಎಂದು ನಿರ್ಗಮಿತ ಜಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ನಿರ್ಗಮನ ಅಧ್ಯಕ್ಷರಿಗೆ ಅಭಿನಂದನೆ ಮಾಡುವ ಪದ್ದತಿ ಇದ್ದು ಅದನ್ನು ನಾನು ಸ್ವೀಕರಿಸುವುದಿಲ್ಲ. ಈಗಾಗಲೇ ನನ್ನಲ್ಲಿದ್ದ ಅಧಿಕಾರ ಕಸಿದುಕೊಳ್ಳಲಾಗಿದೆ. ನನ್ನ ಬಳಿ ಅಧಿಕಾರ ಇಲ್ಲದೆ ಬೇರೊಬ್ಬರಿಗೆ ಅಧಿಕಾರ ಹಸ್ತಾಂತರ ಮಾಡಿದರೆ ತಪ್ಪು ಸಂದೇಶ ಹೋಗುತ್ತದೆ. ರಾಜಕಾರಣ ಬಿಟ್ಟು ದೊಡ್ಡ ಪ್ರಪಂಚ ನನ್ನ ಮುಂದೆ ಇದೆ. ಅಲ್ಲಿ ಹೇಗೆ ಇರಬೇಕು ಎಂಬುದು ನನಗೆ ಗೊತ್ತಿದೆ ಎಂದು ನಿರ್ಗಮಿತ ಜಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಹೇಳಿದ್ದಾರೆ.

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸೋಮವಾರ ನಡೆದ ನೂತನ ಜಿಲ್ಲಾಧ್ಯಕ್ಷರ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮಾಡುವಾಗ ಜಾತಿ, ಹಣಗಳ ಬಗ್ಗೆ ಚರ್ಚೆ ಆಗುತ್ತದೆ. ಆದರೆ ಒಬ್ಬ ಜಿಲ್ಲಾಧ್ಯಕ್ಷನ ನೇಮಕ ಮಾಡುವಾಗ ಇದೆಲ್ಲ ಬೇಕೇ? ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದಾಗಿ ಕೇವಲ ಭಾಷಣದಲ್ಲಿ ಮಾತ್ರ ಹೇಳಿದರೆ ಸಾಲದು. ನಾನು ಜಿಲ್ಲಾಧ್ಯಕ್ಷನಾಗಿದ್ದಾಗ ಲೋಕಸಭಾ ಚುನಾವಣೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲವು ಸಾಧಿಸಿತ್ತು. ಪಕ್ಷ ಕೊಟ್ಟ ಕಾರ್ಯಕ್ರಮಗಳನ್ನು ಅತ್ಯಂತ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ರಾಜ್ಯಕ್ಕೆ ಯಾವುದೇ ಸುಳ್ಳು ವರದಿ ಕಳುಹಿಸದೆ ಮಾಡಿದ್ದೇನೆ. ಆದರೂ ನನ್ನಿಂದ ಏನು ತೊಂದರೆ ಆಗಿತ್ತು ಎಂಬುದು ಗೊತ್ತಿಲ್ಲ ಎಂದರು.ಬಿಜೆಪಿ ಜಿಲ್ಲಾಧ್ಯಕ್ಷನಾಗಿ ಆಯ್ಕೆ ಆಗುತ್ತೇನೆ ಎಂಬುದು ನನಗೆ ಗೊತ್ತಿರಲಿಲ್ಲ. ಬೇರೆಯವರು ಅದಕ್ಕೆ ಪ್ರಯತ್ನ ಪಟ್ಟಿದ್ದರು. ಆದರೆ ನಾನು ಯಾವುದೇ ಪ್ರಯತ್ನ ಪಟ್ಟಿರಲಿಲ್ಲ. ಒಂದು ವರ್ಷ ನಾಲ್ಕು ತಿಂಗಳು ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಿದೆ. ಆದರೆ ಅಧ್ಯಕ್ಷನಾಗಿ ಎಂಟು ತಿಂಗಳು ಆಗುವಾಗಲೇ ನನ್ನ ಅಧ್ಯಕ್ಷ ಸ್ಥಾನ ಹೋಗುವ ಬಗ್ಗೆ ವದಂತಿಗಳು ಹರಡಲು ಆರಂಭಿಸಿತು. ಈ ವಿಚಾರ ತಿಳಿದ ಕೂಡಲೇ ಜಿಲ್ಲಾ ಪದಾಧಿಕಾರಿಗಳ ಸಭೆ ಕರೆದು ನಾನು ಯಾವತ್ತು ಈ ಸ್ಥಾನ ಉಳಿಸಿ ಅಂತ ಯಾರ ಬಳಿಯೂ ಬೇಡಿಕೊಳ್ಳುವುದಿಲ್ಲ. ನಿಮಗೆ ನಾನು ಈ ಸ್ಥಾನದಲ್ಲಿ ಮುಂದುವರಿಯಬೇಕೆಂದು ಅನಿಸಿದರೆ ನೀವು ಪ್ರಯತ್ನ ಮಾಡುವುದಾದರೆ ನನ್ನ ಆಕ್ಷೇಪ ಇಲ್ಲ ಎಂದು ಹೇಳಿದ್ದೆ ಎಂದರು.

ಸಂಜೆ 7.30ಕ್ಕೆ ನನಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಿಂದ ಕರೆ ಬಂದಿತ್ತು. ನಿಮ್ಮನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಬದಲು ಮಾಡುವುದಾಗಿ ಹೇಳಿದರು. ಆ ಸ್ಥಾನಕ್ಕೆ ಶಾಸಕರನ್ನು ನೇಮಕ ಮಾಡುವುದಿಲ್ಲ ಎಂದರು. ಅದಕ್ಕೆ ನಾನು ನನ್ನನ್ನು ತೆಗೆದ ನಂತರ ನೀವು ಯಾರನ್ನು ಮಾಡಿದರೂ ನನಗೆ ಅದರ ಅವಶ್ಯಕತೆ ಇಲ್ಲ ಎಂದು ಹೇಳಿದೆ. ಯಾವಾಗ ಅಧ್ಯಕ್ಷರ ಆಯ್ಕೆ ಮಾಡುತ್ತೀರಿ ಎಂದು ಕೇಳಿದಕ್ಕೆ ರಾತ್ರಿ ಮಾಡುತ್ತೇವೆ ಎಂದು ಹೇಳಿದರು. ಆದರೆ ಫೋನ್ ಇಟ್ಟು ವಾಟ್ಸಾಪ್ ನೋಡುವಾಗ ಅಧ್ಯಕ್ಷರ ಬದಲಾವಣೆ ಮಾಡಿರುವ ಆದೇಶ ಬಂದಿತ್ತು. ಈ ರೀತಿ ಮೋಸ ಯಾಕೆ ಮಾಡಬೇಕು ಎಂದು ಕಿಶೋರ್ ಕುಮಾರ್ ಪ್ರಶ್ನಿಸಿದರು.ಶಾಸಕರಾದ ಸುರೇಶ್ ಶೆಟ್ಟಿ ಗುರ್ಮೆ, ಕಿರಣ್ ಕೊಡ್ಗಿ, ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮುಖಂಡರಾದ ವಿಕಾಸ್ ಪುತ್ತೂರು, ರೇಷ್ಮಾ ಉದಯ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ ಇದ್ದರು.

..............ಹಿಂದಕ್ಕೆ ಕೈ ಕಟ್ಟಿ ನಿಂತ ಕಿಶೋರ್!ನಿರ್ಗಮಿತ ಅಧ್ಯಕ್ಷರು ಅಧಿಕಾರ ಹಸ್ತಾಂತರ ನಿರಾಕರಿಸಿದ ಬಳಿಕ ನೂತನ ಜಿಲ್ಲಾಧ್ಯಕ್ಷರಿಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. ಆ ವೇಳೆ ವೇದಿಕೆಯಲ್ಲಿದ್ದ ನಿರ್ಗಮನ ಅಧ್ಯಕ್ಷ ತಮ್ಮ ಕೈಯನ್ನು ಹಿಂದಕ್ಕೆ ಕೈಕಟ್ಟಿ ನಿಂತರು. ಇದೇ ವೇಳೆ ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ, ನಿರ್ಗಮನ ಅಧ್ಯಕ್ಷರಿಗೆ ಶಾಲು ಹಾಕಿ ಅಭಿನಂದಿಸಲು ಮುಂದಾದಾಗ ಕಿಶೋರ್ ಕುಮಾರ್ ಅದನ್ನು ನಿರಾಕರಿಸಿ ವೇದಿಕೆಯಿಂದ ಹೊರನಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ