ಸರ್ಕಾರ ಗುಣ ಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಿದೆ: ಡಾ.ಕೆ.ಪಿ.ಅಂಶುಮಂತ್

KannadaprabhaNewsNetwork |  
Published : Jun 17, 2025, 04:12 AM IST
ನರಸಿಂಹರಾಜಪುರ ತಾಲೂಕಿನ ಕಡಹಿನಬೈಲು ಗ್ರಾಮ ಪಂಚಾಯಿತಿಯ ಗುಳ್ಳದಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಧ್ಯಾಯಿನಿ ಶಿಲ್ಪಕುಮಾರಿ ಅವರನ್ನು ಗ್ರಾಮಸ್ಥರು, ಹಳೇ ವಿದ್ಯಾರ್ಥಿ ಸಂಘದಿಂದ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ನರಸಿಂಹರಾಜಪುರ, ಸರ್ಕಾರ ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಿದೆ ಎಂದು ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ತಿಳಿಸಿದರು.

ಗುಳ್ಳದಮನೆಯಲ್ಲಿ ನವೀಕರಿಸಿದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಉದ್ಘಾಟನಾ ಕಾರ್ಯಕ್ರಮ

ಕನ್ನಡಪ್ರಭವಾರ್ತೆ ನರಸಿಂಹರಾಜಪುರ

ಸರ್ಕಾರ ಗುಣಮಟ್ಟದ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡುತ್ತಿದೆ ಎಂದು ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ತಿಳಿಸಿದರು.

ಸೋಮವಾರ ಕಡಹಿನಬೈಲು ಗ್ರಾಪಂನ ಗುಳ್ಳದಮನೆಯಲ್ಲಿ ದಾನಿಗಳು, ತಾಪಂ, ಗ್ರಾಮ ಪಂಚಾಯಿತಿ ಅನುದಾನ ಸೇರಿ ಅಂದಾಜು ₹10 ಲಕ್ಷ ವೆಚ್ಚದಲ್ಲಿ ನವೀಕರಿಸಿದ ಗುಳ್ಳದಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಲ್ಲದೆ ಮುಚ್ಚುವ ಹಂತ ತಲುಪಿದ್ದ ಗುಳ್ಳದ ಮನೆ ಸರ್ಕಾರಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿ ಶಿಲ್ಪಕುಮಾರಿ ಶ್ರಮದಿಂದ ಮಕ್ಕಳ ಸಂಖ್ಯೆ ಜಾಸ್ತಿ ಮಾಡಿ, ಶಾಲೆಯನ್ನೂ ಸಹ ನವೀಕರಿಸಿರುವುದು ಗ್ರಾಮಸ್ಥರ ಸಂಭ್ರಮಕ್ಕೆ ಕಾರಣವಾಗಿದೆ ಎಂದರು.

ಒಮ್ಮೆ ಸರ್ಕಾರಿ ಶಾಲೆ ಮುಚ್ಚಿದರೆ ಮತ್ತೆ ಪ್ರಾರಂಭಿಸುವುದು ಕಷ್ಟ. ಹಳೇ ವಿದ್ಯಾರ್ಥಿ ಸಂಘ ಈ ಶಾಲೆ ಪುನಶ್ಚೇತನಕ್ಕೆ ಕೈ ಜೋಡಿಸಿದೆ. ಮಕ್ಕಳ ಶಿಕ್ಷಣದ ವ್ಯವಸ್ಥೆ ಬಂದಾಗ ಪಕ್ಷಾತೀತ, ಜಾತ್ಯಾತೀತವಾಗಿ ಎಲ್ಲರೂ ಕೈಜೋಡಿಸಬೇಕು. ಗುಳ್ಳದಮನೆಯು ಸರ್ವ ಜನಾಂಗದ ಶಾಂತಿ ತೋಟವಾಗಿದೆ ಎಂದರು.

ಕಣಿವೆ ನಾಗಚಂದ್ರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದಾನಿ ಕಣಿವೆ ವಿನಯ್ ಮಾತನಾಡಿ, ಸರ್ಕಾರಿ ಶಾಲೆಗೆ ಹೋಗುವ ಮಕ್ಕಳಿಗೆ ಸದಾ ಪೋಷಕರ ಸಂಪರ್ಕ ಇರುವುದರಿಂದ ಅಂತಹ ಮಕ್ಕಳಿಗೆ ಮನೆ, ಕುಟುಂಬದ ಸಂಸ್ಕಾರಯುತ ಶಿಕ್ಷಣ ಸಹ ಸಿಗಲಿದೆ. ನಮ್ಮ ನಾಗಚಂದ್ರ ಪ್ರತಿಷ್ಠಾನದಿಂದ ಗುಳ್ಳದಮನೆ ಸರ್ಕಾರಿ ಶಾಲೆಗೆ ಸ್ಮಾರ್ಟ್ ಕ್ಲಾಸ್ ನೀಡಿದ್ದು ಈ ಹಿಂದೆ ವಿವಿಧ 2 ಸರ್ಕಾರಿ ಶಾಲೆಗಳಿಗೂ ಸಹ ಸ್ಮಾರ್ಟ್ ಕ್ಲಾಸ್ ನೀಡಿದ್ದೇವೆ ಎಂದರು.

ಗುಳ್ಳದಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷಕುಮಾರ್ ಮಾತನಾಡಿ,1969 ರಲ್ಲಿ ಗುಳ್ಳದಮನೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಗಿತ್ತು. ಗುಳ್ಳದಮನೆ ಮಂಜಪ್ಪ ಗೌಡರು ಶಾಲೆಗಾಗಿ ಜಾಗ ನೀಡಿದ್ದರು. ಕಳೆದ ಸಾಲಿನಲ್ಲಿ ಮಕ್ಕಳಿಲ್ಲದೆ ಶಾಲೆ ಮುಚ್ಚುವ ಹಂತ ಬಂದಾಗ ಮುಖ್ಯೋಪಾ ಧ್ಯಾಯಿನಿಯಾಗಿ ಆಗಮಿಸಿದ ಶಿಲ್ಪ ಕುಮಾರಿ ದಾನಿಗಳ ಸಹಕಾರದಿಂದ ಶಾಲೆಗೆ ಹೊಸ ರೂಪ ನೀಡಿ ಮಕ್ಕಳ ಸಂಖ್ಯೆ ಹೆಚ್ಚಿಸಿದ್ದಾರೆ ಎಂದರು.

ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸುನೀಲ್ ಕುಮಾರ್ ಮಾತನಾಡಿ, ಗುಳ್ಳದಮನೆ ಶಾಲೆಗೆ 57 ವರ್ಷಗಳ ಇತಿಹಾಸವಿದೆ. 24 ಮಕ್ಕಳು ಇದ್ದ ಶಾಲೆ 8ಕ್ಕೆ ಇಳಿದಿತ್ತು.ಈಗ 14ಕ್ಕೆ ಏರಿದೆ. ಶಾಲೆ ಪುನಶ್ಚೇತನಕ್ಕೆ 89 ದಾನಿಗಳು ಕೈ ಜೋಡಿಸಿದ್ದಾರೆ. ತಾಪಂನಿಂದ 3 ಲಕ್ಷ ನೀಡಲಾಗಿದೆ. ಗ್ರಾಪಂನಿಂದಲೂ ಕೊಡುಗೆ ನೀಡಿದ್ದೇವೆ ಎಂದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಸ್.ಎಸ್.ಶಾಂತಕುಮಾರ್ ಮಾತನಾಡಿ, ಕಡಹಿನಬೈಲು ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ ಮಕ್ಕಳ ಸಂಖ್ಯೆ ಕಡಿಮೆಯಾಗಿ ಆಲಂದೂರು, ಸೌತಿಕೆರೆ ಶಾಲೆ ಮುಚ್ಚಲಾಗಿದೆ. ಶಿಕ್ಷಕರಿಗೆ ಬದ್ಧತೆ ಇದ್ದರೆ ಶಾಲೆಯನ್ನು ಹೇಗೆ ಅಭಿವೃದ್ಧಿ ಪಡಿಸುತ್ತಾರೆ ಎಂಬುದಕ್ಕೆ ಮುಖ್ಯ ಶಿಕ್ಷಕಿ ಶಿಲ್ಪಕುಮಾರಿ ಮಾದರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಶಾಲೆ ಅಭಿವೃದ್ಧಿಗೆ ಶ್ರಮಿಸಿದ ಮುಖ್ಯೋಧ್ಯಾಯಿನಿ ಶಿಲ್ಪಕುಮಾರಿ ಹಾಗೂ 80ಕ್ಕೂ ಹೆಚ್ಚು ದಾನಿಗಳನ್ನು ಅಭಿನಂದಿಸಲಾಯಿತು.

ಸಭೆ ಅಧ್ಯಕ್ಷತೆಯನ್ನು ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಅಶ್ವಿನಿ ವಹಿಸಿದ್ದರು. ಅತಿಥಿಗಳಾಗಿ ಗ್ರಾಪಂ ಸದಸ್ಯರಾದ ಚಂದ್ರ ಶೇಖರ್, ಎ.ಬಿ.ಮಂಜುನಾಥ್, ಲಿಲ್ಲಿ ಮಾತುಕುಟ್ಟಿ,ವಾಣಿ ನರೇಂದ್ರ, ಶೈಲಾ ಮಹೇಶ್, ರವೀಂದ್ರ, ಗುಳ್ಳದಮನೆ ಚರ್ಚನ ಫಾ.ಜೋಬೀಸ್, ದಾನಿಗಳಾದ ಗುಳದಮನೆ ಪ್ರಕಾಶ್, ಗಾಂಧಿಗ್ರಾಮ ನಾಗರಾಜ್, ವಿಂದ್ಯಾ ಹೆಗಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್.ಪುಷ್ಪ, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ವಿಲ್ಸನ್, ಪಿಡಿಒ ವಿಂದ್ಯಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಂಜು ನಾಥ್,ತಾ.ಪ್ರಾ.ಶಾಲಾ ಶಿ.ಸಂಘದ ಅಧ್ಯಕ್ಷ ನಂಜುಂಡಪ್ಪ, ಭಡ್ತಿ ಮುಖ್ಯೋಧ್ಯಾಯರ ಸಂಘದ ರಾಜ್ಯ ಉಪಾಧ್ಯಕ್ಷ ಅಶೋಕ್, ಶಿಕ್ಷಣ ಇಲಾಖೆ ರಮೇಶ ನಾಯ್ಕ್, ರಂಗಪ್ಪ, ಸಂಗೀತ, ಓಂಕಾರಪ್ಪ,ತಿಮ್ಮಮ್ಮ, ಪುಷ್ಪಕುಮಾರ್, ರಮೇಶನಾಯ್ಕ, ತಿಮ್ಮೇಶಪ್ಪ ಇದ್ದರು.

-- ಬಾಕ್ಸ್--

ರಾಜ್ಯದಲ್ಲಿ ಹೊಸದಾಗಿ 40 ಸಾವಿರ ಶಿಕ್ಷಕರ ನೇಮಕಕ್ಕೆ ಸರ್ಕಾರ ಆದೇಶ ನೀಡಿದೆ ಎಂದು ಚಿಕ್ಕಮಗಳೂರು ಉಪ ನಿರ್ದೇಶಕರ ಕಚೇರಿ ಶಿಕ್ಷಣಾಧಿಕಾರಿ ನಾಗರಾಜ್ ತಿಳಿಸಿದರು.

ರಾಜ್ಯದೆಲ್ಲೆಡೆ ಸರ್ಕಾರಿ ಶಾಲೆಗಳು ಮುಚ್ಚುತ್ತಾ ಹೋಗುತ್ತಿದ್ದು ಇದುವರೆಗೆ 3 ಲಕ್ಷ ಸರ್ಕಾರಿ ಶಾಲೆಗಳು ಮುಚ್ಚಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 123 ಶಾಲೆ ಮುಚ್ಚಲಾಗಿದೆ. 220 ಶಾಲೆಗಳಲ್ಲಿ ಕಳೆದ ವರ್ಷಕ್ಕಿಂತ ಅರ್ಧದಷ್ಟು ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎಂದರು.

ಒಂದು ಖಾಸಗಿ ಸಂಸ್ಥೆ ಸರ್ವೆ ಮಾಡಿದೆ. ಆ ವರದಿ ಪ್ರಕಾರ ಖಾಸಗಿ ಶಾಲೆಗಿಂತ ಸರ್ಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ ಎಂದು ಕೇಂದ್ರಕ್ಕೆ ವರದಿ ನೀಡಿದೆ. ರಾಜ್ಯ ಸರ್ಕಾರ ಪ್ರಾಥಮಿಕ ಶಿಕ್ಷಣಕ್ಕೆ ಎಲ್ಲಾ ಸವಲತ್ತುಗಳನ್ನು ನೀಡುತ್ತಿದೆ. ಇಂಗ್ಲೀಷ್ ಮೀಡಿಯಂ ನೀಡಿದೆ. ಪ್ರತಿಭಾವಂತ ಶಿಕ್ಷಕರಿದ್ದಾರೆ. ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!