ಸಾಧನೆಗೆ ಶ್ರಮ, ಆತ್ಮವಿಶ್ವಾಸ, ಭರವಸೆ, ನಂಬಿಕೆಯೇ ಮೂಲ

KannadaprabhaNewsNetwork |  
Published : May 16, 2025, 02:13 AM IST
17 | Kannada Prabha

ಸಾರಾಂಶ

ಜೀವನದಲ್ಲಿ ಗುರಿ ಮುಖ್ಯ. ಗುರಿ ಮುಟ್ಟುವ ದಾರಿಯೂ ಮುಖ್ಯ. ಶ್ರಮವಿಲ್ಲದೆ ಫಲವಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಸಾಧನೆಗೆ ಶ್ರಮ, ಆತ್ಮವಿಶ್ವಾಸ, ಭರವಸೆ, ನಂಬಿಕೆಯೇ ಮೂಲವಾಗಿದೆ ಎಂದು ಮೈಸೂರು ವಿವಿ ಕುಲಸಚಿವೆ ಎಂ.ಕೆ. ಸವಿತಾ ತಿಳಿಸಿದರು.

ಮೈಸೂರು ವಿವಿ ಸಂಜೆ ಕಾಲೇಜಿನ ಹೊಸ ಕಟ್ಟಡದಲ್ಲಿ ಗುರುವಾರ ನಡೆದ 2024- 25ನೇ ಸಾಲಿನ ಸಾಂಸ್ಕೃತಿಕ, ಎನ್‌ಎಸ್‌ಎಸ್ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನೊಣಗಳಾಗಬಾರದು. ಜೇನು ನೊಣಗಳಾಗಬೇಕು. ಈ ನಿಟ್ಟಿನಲ್ಲಿ ಏಕಾಗ್ರತೆಯನ್ನು ಬೆಳೆಸಿಕೊಂಡು ಸಾಧನೆಯತ್ತ ಹೆಜ್ಜೆ ಇಡಬೇಕು. ಸಾಧಿಸುವುದು ಇನ್ನೂ ಇದೆ ಎಂಬ ಚಿಂತನೆ ನಿಮ್ಮನ್ನು ಕ್ರಿಯಾಶೀಲರನ್ನಾಗಿಸುತ್ತದೆ ಎಂದರು.

ಜೀವನದಲ್ಲಿ ಗುರಿ ಮುಖ್ಯ. ಗುರಿ ಮುಟ್ಟುವ ದಾರಿಯೂ ಮುಖ್ಯ. ಶ್ರಮವಿಲ್ಲದೆ ಫಲವಿಲ್ಲ. ಶ್ರಮಕ್ಕೆ ಪರ್ಯಾಯ ಮಾರ್ಗವಿಲ್ಲ. ಜೀವನ ಸಿದ್ಧತೆ ಬೇರೆ, ಪರೀಕ್ಷಾ ಸಿದ್ಧತೆಯೇ ಬೇರೆ. ಸ್ಪರ್ಧಾತ್ಮಕ ಯುಗದಲ್ಲಿ ಆಕಾಂಕ್ಷೆ, ದೃಷ್ಟಿಕೋನ ಮತ್ತು ಕ್ರಿಯೆ ತುಂಬಾ ಮುಖ್ಯ. ನಿರಂತರ ಪ್ರಯತ್ನದಿಂದ ಯಶಸ್ಸು ಖಚಿತ. ಕಾಲೇಜಿನ ದಿನಗಳಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎಂದು ಅವರು ಹೇಳಿದರು.

ಜ್ಞಾನಕ್ಕೆ ಸಮಾನವಾದ ಸಂಪತ್ತು ಯಾವುದೂ ಇಲ್ಲ. ಬಳಸಿದಷ್ಟೂ ವೃದ್ಧಿಯಾಗುತ್ತದೆ. ಹೀಗಾಗಿ, ವಿದ್ಯಾರ್ಥಿಗಳು ಸಂಸ್ಕಾರ, ಜ್ಞಾನ ಸಂಪಾದನೆಯ ಕಡೆ ಗಮನ ಹರಿಸಬೇಕು. ತ್ಯಾಗ, ಸೇವೆ ಆದರ್ಶ ಆಗಬೇಕು. ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ವೇದಿಕೆಗಳು ನಮ್ಮನ್ನು ಮನುಷ್ಯರನ್ನಾಗಿ ಮಾಡುತ್ತವೆ. ಪಠ್ಯ ಶಿಕ್ಷಣ, ಕ್ರೀಡೆ, ಕಲೆ ಮತ್ತು ಸಂಸ್ಕೃತಿ ವಿಭಾಗಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿರುವುದನ್ನು ಪ್ರತಿಯೊಬ್ಬರು ಅರಿಯಬೇಕು ಎಂದರು.

ಸಂಜೆ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿರುವುದು ಬಹಳ ವಿಶೇಷವಾಗಿದೆ. ಕೆಲವು ಮಕ್ಕಳು ಕಾಲೇಜಿಗೆ ಹೋಗದೇ ಇತರೆ ಚಟುವಟಿಕೆಗಳ ದಾಸರಾಗಿ ಶಿಕ್ಷಣದ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವವರೇ ಹೆಚ್ಚಾಗಿದ್ದು, ಜೀವನದ ಮೌಲ್ಯ ಅರಿತು ಶಿಕ್ಷಣ ಪಡೆಯುತ್ತಿರುವ ನಿಮ್ಮ ಮೇಲೆ ನನಗೆ ವಿಶೇಷ ಗೌರವವಿದೆ ಎಂದು ಅವರು ಶ್ಲಾಘಿಸಿದರು.

ಹಿನ್ನೆಲೆ ಗಾಯಕಿ ಅಮೂಲ್ಯ ಮೈಸೂರು, ವಿವಿ ಸಂಜೆ ಕಾಲೇಜು ಪ್ರಾಂಶುಪಾಲ ಡಾ.ವಿ. ಷಣ್ಮುಗಂ, ಪಠ್ಯೇತರ ಚಟುವಟಿಕೆಗಳ ಸಮಿತಿ ಸಂಚಾಲಕ ಡಾ. ನಿಂಗರಾಜು, ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ.ಆರ್. ನಿಂಗರಾಜು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ