ಮಂಚನಬೆಲೆ ಎಡ-ಬಲದಂಡೆ ನಾಲೆಗಳು ಹೊಸದಾಗಿ ನಿರ್ಮಾಣ

KannadaprabhaNewsNetwork |  
Published : Apr 05, 2026, 01:15 AM IST
4ಕೆಆರ್ ಎಂಎನ್ 1.ಜೆಪಿಜಿಕುಂಬಾಪುರ ಕಾಲೋನಿಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ರವರು ಗುಲಾಟಿ ಹೂ ಎರಚುವ ಮೂಲಕ ಕಾಂಕ್ರಿಟ್ ರಸ್ತೆಯನ್ನು ಉದ್ಘಾಟಿಸಿದರು. | Kannada Prabha

ಸಾರಾಂಶ

ರಾಮನಗರ: ರಾಮನಗರ ಕ್ಷೇತ್ರ ವ್ಯಾಪ್ತಿಯ ಕಸಬಾ ಮತ್ತು ಕೈಲಾಂಚ ಹೋಬಳಿ ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಉದ್ದೇಶದಿಂದ ಮಂಚನಬೆಲೆ ಜಲಾಶಯದ ಎಡ-ಬಲ ದಂಡೆ ನಾಲೆಗಳನ್ನು ಹೊಸದಾಗಿ ನಿರ್ಮಿಸಲು ರಾಜ್ಯ ಸರ್ಕಾರ 70 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು

ರಾಮನಗರ: ರಾಮನಗರ ಕ್ಷೇತ್ರ ವ್ಯಾಪ್ತಿಯ ಕಸಬಾ ಮತ್ತು ಕೈಲಾಂಚ ಹೋಬಳಿ ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಉದ್ದೇಶದಿಂದ ಮಂಚನಬೆಲೆ ಜಲಾಶಯದ ಎಡ-ಬಲ ದಂಡೆ ನಾಲೆಗಳನ್ನು ಹೊಸದಾಗಿ ನಿರ್ಮಿಸಲು ರಾಜ್ಯ ಸರ್ಕಾರ 70 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ತಾಲೂಕಿನ ವಿಭೂತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 10 ಕೋಟಿ ರುಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಲಸಂಪನ್ಮೂಲ ಸಚಿವರು ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾವೇರಿ ನೀರಾವರಿ ನಿಗಮಕ್ಕೆ ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಈಗಾಗಲೇ ಮಂಚನಬೆಲೆ ಎಡ - ಬಲ ದಂಡೆ ನಾಲೆಗಳನ್ನು ದುರಸ್ತಿ ಪಡಿಸಲಾಗಿತ್ತು. ಆದರೆ, ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗುತ್ತಿದ್ದ ಕಾರಣ ಕೃಷಿ ಜಮೀನುಗಳಿಗೆ ತಲುಪುತ್ತಿರಲಿಲ್ಲ. ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸಲ್ಲಿಸಿದ ಪ್ರಸ್ತಾವನೆಗೆ ಉಪಮುಖ್ಯಮಂತ್ರಿಗಳು ಅನುಮೋದನೆ ಕೊಟ್ಟಿದ್ದಾರೆ ಎಂದರು.

ತಲಾ 32 ಕಿ.ಮೀ ಉದ್ದದಷ್ಟು ಮಂಚನಬೆಲೆಯ ಎಡ-ಬಲ ದಂಡೆ ನಾಲೆಗಳನ್ನು ಹೊಸದಾಗಿ ನಿರ್ಮಾಣ ಮಾಡಲಾಗುತ್ತಿದ್ದು, ಇದು ವಿನೂತನವಾಗಿರಲಿದೆ. ಗುರುತ್ವಾಕರ್ಷಣೆ ಮೂಲಕ ನಾಲೆಯ ಕೊನೆ ಭಾಗಕ್ಕೂ ನೀರು ಹರಿಯುವಂತೆ ಮಾಡಲಾಗುವುದು. ಇದರಿಂದ ಕಸಬಾ ಮತ್ತು ಕೈಲಾಂಚ ಹೋಬಳಿ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಸಬಾ ಮತ್ತು ಕೈಲಾಂಚ ಹೋಬಳಿಗಳಲ್ಲಿ ನೀರಾವರಿ ಯೋಜನೆಗಳಿಗೆ 45 ಕೋಟಿ ರುಪಾಯಿ ಅನುದಾನ ನೀಡಿದ್ದಾರೆ. ಈಗಾಗಲೇ ಮೊಟ್ಟೆ ದೊಡ್ಡಿಯಲ್ಲಿ ಏತ ನೀರಾವರಿ ಯೋಜನೆಗೆ ಮರು ಜೀವ ನೀಡಿದ್ದೇವೆ. 25 ವರ್ಷಗಳ ಹಿಂದೆ ಸ್ಥಗತಿಗೊಂಡಿದ್ದ ಈ ನೀರಾವರಿ ಯೋಜನೆಗೆ ಚಾಲನೆ ನೀಡಿ ಕೃಷಿ ಚಟುವಟಿಕೆಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂದರು.

250 ಕೋಟಿ ಬಿಡುಗಡೆಯ ಭರವಸೆ:

ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚಾಗಿದೆಯಲ್ಲ ಎಂಬ ಪ್ರಶ್ನೆಗೆ ಕಾಡಿನಲ್ಲಿ ಆಹಾರ ಮತ್ತು ಕುಡಿಯಲು ನೀರು ಸಿಗದ ಕಾರಣ ವನ್ಯಜೀವಿಗಳು ಕಾಡಂಚಿನ ಗ್ರಾಮಗಳಿಗೆ ಲಗ್ಗೆ ಇಡುತ್ತಿವೆ. ಅವುಗಳನ್ನು ನಿಯಂತ್ರಿಸಲು ಬೇಕಾದ ಕ್ರಮಗಳನ್ನು ಅರಣ್ಯ ಇಲಾಖೆ ಕೈಗೊಳ್ಳುತ್ತಿದು, ಎರಡು ಟಾಸ್ಕ್ ಫೋರ್ಸ್ ಟೀಮ್ ಅನ್ನು ರಚನೆ ಮಾಡಿದೆ.

ಕಾಡಾನೆಗಳ ಹಾವಳಿ ನಿಯಂತ್ರಿಸುವ ನಿಟ್ಟಿನಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಆರಂಭಗೊಂಡು ಕಬ್ಬಾಳು, ಮುತ್ತತ್ತಿ, ಹಲಗೂರು ಅರಣ್ಯ ಪ್ರದೇಶದವರೆಗೆ 80 ಕೋಟಿ ವೆಚ್ಚದಲ್ಲಿ ಬ್ಯಾರಿಕೇಟ್ ನಿರ್ಮಿಸುವ ಕಾರ್ಯ ನಡೆದಿದೆ. ಮರಳವಾಡಿಯಲ್ಲಿಯೇ 40 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ರೈಲ್ವೆಬ್ಯಾರಿಕೇಟ್ ಉದ್ಘಾಟನೆ ಮಾಡಿದ್ದೇನೆ. ಇನ್ನೂ 250 ಕೋಟಿ ರುಪಾಯಿ ಅನುದಾನ ಕೊಡುವುದಾಗಿ ಅರಣ್ಯ ಸಚಿವರು ಭರವಸೆ ನೀಡಿದ್ದಾರೆ.

ಈಗ ಮುಖ್ಯಮಂತ್ರಿಗಳು ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ತಲಾ 50 ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಿದ್ದಾರೆ. ಎಸ್ಸಿಪಿ, ಟಿಎಸ್ಪಿ ಯೋಜನೆ ಅಡಿಯಲ್ಲಿ 1 ಕೋಟಿ ಅನುದಾನ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 30:40 ಶೀರ್ಷಿಕೆಯಲ್ಲಿ 1 ಕೋಟಿ , ಸಮಾಜ ಕಲ್ಯಾಣ ಇಲಾಖೆಯಿಂದ ಅಂಬೇಡ್ಕರ್ ಭವನ ಮಂಜೂರಾಗಿದೆ. ಶಾಸಕನ ವಿವೇಚನೆ ಅಡಿಯಲ್ಲಿ 10-12 ಕೋಟಿ , ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ 1 ಕೋಟಿ ಅನುದಾನ ಬಂದಿದೆ. ಇದನ್ನು ಗ್ರಾಪಂ ವ್ಯಾಪ್ತಿಗಳಲ್ಲಿ ಅವಶ್ಯಕತೆ ಇರುವ ಕಡೆಗಳಲ್ಲಿ ರಸ್ತೆ, ಚರಂಡಿ, ಬಸ್ ತಂಗುದಾಣ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ಹೇಳಿದರು.

ಬೇಸಿಗೆ ಅಧಿಕವಾಗಿರುವ ಕಾರಣ ಎಲ್ಲೆಡೆ ನೀರಿಗೆ ಬೇಡಿಕೆ ಹೆಚ್ಚಾಗಿದೆ. ಜನ ಜಾನುವಾರುಗಳಿಗೆ ನೀರಿನ ಅವಶ್ಯಕತೆ ಇರುವ ಕಾರಣ ಕೆರೆಕಟ್ಟೆಗಳನ್ನು ತುಂಬಿಸುವಂತೆ ಗ್ರಾಮೀಣ ಜನರು ಮನವಿ ಮಾಡುತ್ತಿದ್ದಾರೆ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ಟಾಸ್ಕ್ ಫೋರ್ಸ್ ನಲ್ಲಿ 70 ಲಕ್ಷ ರುಪಾಯಿ ಮೀಸಲಿರಿಸಲು ಸೂಚನೆ ನೀಡಿದ್ದೇನೆ. ಅಗತ್ಯ ಇರುವ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸುತ್ತಿದ್ದೇವೆ. ಶಾಸಕರ ಅನುದಾನದಲ್ಲಿ ಅವಶ್ಯಕತೆ ಇರುವ ಕಡೆಗಳಲ್ಲಿ ಬೋರ್ ವೆಲ್ ಕೊರೆಸಲು ಸರ್ಕಾರದಿಂದ ಅನುಮತಿ ಪಡೆದುಕೊಂಡಿದ್ದೇವೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ , ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಚ್.ರಾಜು, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ , ಮಾಜಿ ಅಧ್ಯಕ್ಷ ಜಯಣ್ಣ, ಮುಖಂಡರಾದ ಚನ್ನಮಾನಹಳ್ಳಿ ರಾಜು, ಭದ್ರಯ್ಯ, ಉಮೇಶ್ , ಅಂಕಪ್ಪ, ಪಾರ್ಥ, ಸಿದ್ದೇಗೌಡ, ಡೇರಿ ಮಹೇಶ್, ಗುರುಪ್ರಸಾದ್, ಅಂಕನಹಳ್ಳಿ ಮಹೇಶ್ , ಶಿವಲಿಂಗ ಪ್ರಸಾದ್ ಮತ್ತಿತರರು ಹಾಜರಿದ್ದರು.

ಬಾಕ್ಸ್ .............

ಆರು ತಿಂಗಳಲ್ಲಿ ಬಡವರಿಗೆ ನಿವೇಶನ ವಿತರಣೆ

ರಾಮನಗರ ಕ್ಷೇತ್ರದ ಬಡ ಜನರು 5100 ರುಪಾಯಿ ಕಟ್ಟಿ 15 ವರ್ಷಗಳಾಗಿದ್ದು, ಇಲ್ಲಿವರೆಗೆ ಸೂರು ಮತ್ತು ನೆಲೆ ಕಲ್ಪಿಸುವ ಕೆಲಸ ಆಗಿಲ್ಲ. ಅವರಿಗೆಲ್ಲ ನಿವೇಶನ ಕಲ್ಪಿಸಲು 300 ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಲಾಗಿದ್ದು, ಆರು ತಿಂಗಳಲ್ಲಿ ನಿವೇಶನ ಕಲ್ಪಿಸಲಾಗುವುದು ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಕ್ಷೇತ್ರದಲ್ಲಿನ 10 ಸಾವಿರ ಬಡವರಿಗೆ ನಿವೇಶನ ಕಲ್ಪಿಸಲು 300 ಎಕರೆ ಸರ್ಕಾರಿ ಗೋಮಾಳವನ್ನು ಗುರುತಿಸಿದ್ದೇವೆ. ಅದನ್ನು ಸಮತಟ್ಟು ಮಾಡುವ ಕೆಲಸ ನಡೆದಿದೆ. ಅರ್ಹ ಬಡವರಿಗೆ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ಗ್ರಾಮಗಳಲ್ಲಿ 10 ರಿಂದ 15 ಎಕರೆ ಸರ್ಕಾರಿ ಗೋಮಾಳ ಗುರುತಿಸಲಾಗಿದೆ ಎಂದರು.

ಈಗಾಗಲೇ ಬಸವನಪುರ - 25 ಎಕರೆ, ಶಿಡ್ಲಕಲ್ಲು - 50 ಎಕರೆ, ಸುಗ್ಗನಹಳ್ಳಿ - 50 ಎಕರೆ ಸರ್ಕಾರಿ ಭೂಮಿ ಗುರುತಿಸಿದ್ದೇವೆ. ಅವುಗಳನ್ನು ಬಡಾವಣೆ ಮತ್ತು ನಿವೇಶನಗಳನ್ನಾಗಿ ವಿಂಗಡಿಸಲು ಅಧಿಕಾರಿಗಳು 86 ಕೋಟಿ ರುಪಾಯಿಯ ಪ್ರಸ್ತಾವನೆ ಸಲ್ಲಿಸಿದ್ದು, ಅದನ್ನು ನಿರ್ಮಿತಿ ಕೇಂದ್ರದ ಮೂಲಕ ವಸತಿ ಇಲಾಖೆಗೆ ಸಲ್ಲಿಸಿದ್ದೇವೆ.

ಈ ಬಗ್ಗೆ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಮತ್ತು ನಾನು ವಸತಿ ಸಚಿವ ಜಮೀರ್ ಖಾನ್ ಅವರೊಂದಿಗೆ ಚರ್ಚೆ ನಡೆಸಿದ್ದೇವೆ. ವಸತಿ ಇಲಾಖೆಯಿಂದ ಜಮೀನು ಖರೀದಿಗೆ 40 ಕೋಟಿ , ನಿವೇಶನ ವಿಂಗಡೆಣೆಗೆ 46 ಕೋಟಿ ಸೇರಿ ಒಟ್ಟಾರೆ 86 ಕೋಟಿ ರುಪಾಯಿ ಬಿಡುಗಡೆಗೆ ಸಮ್ಮತಿ ಸೂಚಿಸಿದ್ದಾರೆ ಎಂದು ಹೇಳಿದರು.

ನಿವೇಶನ ಕೋರಿ ಸಾವಿರಾರು ಅರ್ಜಿಗಳು ಬಂದಿವೆ. ವಾರ್ಡ್ ಸಮಿತಿ ರಚಿಸಿ ಅರ್ಹ ಫಲಾನುಭವಿಗಳನ್ನು ನಿವೇಶನಕ್ಕಾಗಿ ಆಯ್ಕೆ ಮಾಡುತ್ತೇವೆ. ಅಲ್ಲದೆ, ಸ್ಲಂ ಬೋರ್ಡಿನಿಂದಲೂ 800 ಮನೆಗಳಿಗೆ ಅನುಮೋದನೆ ದೊರಕಿದ್ದು, ಜಿ ಪ್ಲಸ್ 2 ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಲಾಗುವುದು. ಚಿಕ್ಕಮಣ್ಣುಗುಡ್ಡೆಯಲ್ಲಿರುವ 250 ಮನೆಗಳ ದುರಸ್ತಿಗೂ 3 ಕೋಟಿ ಹಣ ಬಿಡುಗಡೆಯಾಗಿದ್ದು, ಅದೆಲ್ಲವನ್ನು ಲಾಟರಿ ಮೂಲಕ ಹಂಚಿಕೆ ಮಾಡಲಾಗುವುದು ಎಂದು ಇಕ್ಬಾಲ್ ಹುಸೇನ್ ತಿಳಿಸಿದರು.

4ಕೆಆರ್ ಎಂಎನ್ 1.ಜೆಪಿಜಿ

ಕುಂಬಾಪುರ ಕಾಲೋನಿಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಗುಲಾಬಿ ಹೂ ಎರಚುವ ಮೂಲಕ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯಾದಾಪುರ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಮಹಾರಥೋತ್ಸವ
ಅರಸೀಕೆರೆಯಲ್ಲಿ ಯುವಕನ ಮೇಲೆ ಹಲ್ಲೆ ಆರೋಪ