ಸ್ಥಗಿತಗೊಂಡಿರುವ ಬೆಂಗಳೂರು ಸಬ್‌ ಅರ್ಬನ್‌ ಕಾಮಗಾರಿಗೆ ಹೊಸ ಗುತ್ತಿಗೆ

KannadaprabhaNewsNetwork |  
Published : Oct 07, 2025, 02:00 AM IST
ಸಬ್‌ ಅರ್ಬನ್‌ ರೈಲು | Kannada Prabha

ಸಾರಾಂಶ

ಸ್ಥಗಿತಗೊಂಡಿರುವ ಬೆಂಗಳೂರು ಉಪನಗರ ರೈಲು ಯೋಜನೆಯ ಬೆನ್ನಿಗಾನಹಳ್ಳಿ ಮತ್ತು ಚಿಕ್ಕಬಾಣವಾರ ಸಂಪರ್ಕಿಸುವ ಮಲ್ಲಿಗೆ ಮಾರ್ಗದ (2ನೇ ಕಾರಿಡಾರ್‌) ಬಾಕಿ ಕಾಮಗಾರಿಗೆ ಹೊಸ ಟೆಂಡರ್‌ ಆಹ್ವಾನಿಸಲು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌) ನಿರ್ಧರಿಸಿದೆ.

 ಬೆಂಗಳೂರು :  ಸ್ಥಗಿತಗೊಂಡಿರುವ ಬೆಂಗಳೂರು ಉಪನಗರ ರೈಲು ಯೋಜನೆಯ ಬೆನ್ನಿಗಾನಹಳ್ಳಿ ಮತ್ತು ಚಿಕ್ಕಬಾಣವಾರ ಸಂಪರ್ಕಿಸುವ ಮಲ್ಲಿಗೆ ಮಾರ್ಗದ (2ನೇ ಕಾರಿಡಾರ್‌) ಬಾಕಿ ಕಾಮಗಾರಿಗೆ ಹೊಸ ಟೆಂಡರ್‌ ಆಹ್ವಾನಿಸಲು ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ಕಂಪನಿ (ಕೆ-ರೈಡ್‌) ನಿರ್ಧರಿಸಿದೆ.

ಸೋಮವಾರ ಕೆ-ರೈಡ್‌ ಅಧ್ಯಕ್ಷರೂ ಆಗಿರುವ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರ ನೇತೃತ್ವದ ಕೆ-ರೈಡ್‌ ಮಂಡಳಿಯು ಬಾಕಿ ಸಿವಿಲ್ ಕಾಮಗಾರಿಗಳಿಗೆ ಮೂರು ಪ್ಯಾಕೇಜ್‌ಗಳಲ್ಲಿ ಹೊಸ ಟೆಂಡರ್‌ಗಳನ್ನು ಆಹ್ವಾನಿಸಲು ಕೆ-ರೈಡ್‌ಗೆ ನಿರ್ದೇಶನ ನೀಡಿದೆ. ಜತೆಗೆ ಶೀಘ್ರವೆ ಕಾಮಗಾರಿ ನಡೆಸಲು ಎಲ್ಲ ಕ್ರಮಕ್ಕಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಅಧಿಕಾರವನ್ನು ನೀಡಿದೆ.

ಎಲ್ ಆ್ಯಂಡ್‌ ಟಿ ಕಾರಿಡಾರ್ 2 ಮತ್ತು 4ರ ಎರಡೂ ಒಪ್ಪಂದಗಳನ್ನು ಏಕಪಕ್ಷೀಯ ಮತ್ತು ಕಾನೂನುಬಾಹಿರವಾಗಿ ಮುಕ್ತಾಯಗೊಳಿಸಿದ ಹಿನ್ನೆಲೆಯಲ್ಲಿ ಮಂಡಳಿಯು ಈ ನಿರ್ಣಾಯಕ ನಿರ್ಧಾರ ತೆಗೆದುಕೊಂಡಿದೆ ಎಂದು ಕೆ-ರೈಡ್‌ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಅಡ್ವೊಕೇಟ್ ಜನರಲ್ ಅವರ ಸಲಹೆಯ ಮೇರೆಗೆ ಮಧ್ಯಸ್ಥಿಕೆ ಪ್ರಕ್ರಿಯೆ ಚಾಲ್ತಿಯಲ್ಲಿ ಇರಿಸಿಕೊಂಡು ಬಾಕಿ ಇರುವ ಸಿವಿಲ್ ಕಾಮಗಾರಿಗಳಿಗೆ ಹೊಸ ಟೆಂಡರ್‌ಗಳನ್ನು ಆಹ್ವಾನಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದರಂತೆ, ಡಿಸೆಂಬರ್ ಒಳಗೆ ಟೆಂಡರ್‌ ಕಾರ್ಯಾದೇಶವನ್ನು ನೀಡಲಾಗುವುದು.

ಅದೇ ರೀತಿ ಹೀಲಲಿಗೆ-ರಾಜನುಕುಂಟೆ ಸಂಪರ್ಕಿಸುವ ಕಾರಿಡಾರ್-4ಕ್ಕೆ (ಕನಕ) ಬಾಕಿ ಸಿವಿಲ್ ಕಾಮಗಾರಿಗಳಿಗೆ ನವೆಂಬರ್‌ನಲ್ಲಿ ಸೂಕ್ತ ಟೆಂಡರ್ ಪ್ಯಾಕೇಜ್‌ಗಳೊಂದಿಗೆ ಟೆಂಡರ್‌ ಆಹ್ವಾನಿಸಲಾಗುವುದು ಎಂದು ಕಂಪನಿ ತಿಳಿಸಿದೆ.

ವಾಣಿಜ್ಯ ನ್ಯಾಯಾಲಯವು ಎಲ್‌ ಆ್ಯಂಡ್‌ ಟಿಯ ಬ್ಯಾಂಕ್ ಗ್ಯಾರಂಟಿಯನ್ನು ನಗದೀಕರಿಸುವ ಬಗ್ಗೆ ನೀಡಿರುವ ತಡೆಯಾಜ್ಞೆಯನ್ನು ಅದೇ ನ್ಯಾಯಾಲಯದಲ್ಲಿ ಕೆ-ರೈಡ್‌ ಪ್ರಶ್ನಿಸಿದ್ದು, ಪ್ರಕರಣದ ವಿಚಾರಣೆ ನಡೆದಿದೆ ಎಂದು ಕೆ-ರೈಡ್‌ ತಿಳಿಸಿದೆ.

ಏಕಪಪಕ್ಷೀಯವಾಗಿ ಕಾಮಗಾರಿ

ಸ್ಥಗಿತಗೊಳಿಸಿದ ಎಲ್‌ ಆ್ಯಂಡ್‌ ಟಿ 2022ರಲ್ಲಿ ಉಪನಗರ ರೈಲು ಯೋಜನೆಯ ಮಲ್ಲಿಗೆ ಕಾರಿಡಾರ್‌ಗೆ ಹಾಗೂ 2023ರಲ್ಲಿ ಕನಕ ಮಾರ್ಗದ ಕಾಮಗಾರಿಗಾಗಿ ಎಲ್‌ ಆ್ಯಂಡ್‌ ಟಿ ಕಂಪನಿಯು ಕೆ-ರೈಡ್‌ ಜೊತೆ ಎರಡು ಒಪ್ಪಂದಗಳನ್ನು ಮಾಡಿಕೊಂಡಿತ್ತು. ಗುತ್ತಿಗೆದಾರರ ಕೋರಿಕೆಯ ಮೇರೆಗೆ ಒಪ್ಪಂದದ ಅವಧಿಯನ್ನು ಕ್ರಮವಾಗಿ ಸೆಪ್ಟೆಂಬರ್-2026 ಮತ್ತು ಅಕ್ಟೋಬರ್ -2026ರವರೆಗೆ ವಿಸ್ತರಿಸಲಾಗಿತ್ತು. ಆದರೆ, ಭೂಮಿ ಹಸ್ತಾಂತರ ಸಮಸ್ಯೆ ಸೇರಿ ಇತರೆ ಕಾರಣ ನೀಡಿ ಏಕಪಪಕ್ಷೀಯವಾಗಿ ಕಾಮಗಾರಿ ಸ್ಥಗಿತಗೊಳಿಸಿದ್ದ ಎಲ್‌ ಆ್ಯಂಡ್‌ ಟಿ ಪರಿಹಾರಕ್ಕಾಗಿ ವಾಣಿಜ್ಯ ನ್ಯಾಯಾಲಯದ ಮೆಟ್ಟಿಲೇರಿದೆ. ಈ ಸಂಬಂಧ ಎಲ್ ಆ್ಯಂಡ್‌ ಟಿ ಮತ್ತು ಕೆ-ರೈಡ್‌ ನಡುವಿನ ಮಧ್ಯಸ್ಥಿಕೆ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರನ್ನು ಮೂವರು ಸದಸ್ಯರ ಮಂಡಳಿಯ ಮಧ್ಯಸ್ಥಿಕೆದಾರರನ್ನಾಗಿ ರಾಜ್ಯ ಸರ್ಕಾರದಿಂದ ನಾಮನಿರ್ದೇಶನ ಮಾಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಹಾಸ್ಟೆಲ್ ಮಕ್ಕಳಿಗೆ ಹೊಸ ಜಾತಿ ಪ್ರಮಾಣಪತ್ರ ಶಾಕ್‌
₹400 ಕೋಟಿ ಇದ್ದ 2 ಕಂಟೇನರ್‌ ಲಾರಿಗಳೇ ಬೆಳಗಾವೀಲಿ ನಾಪತ್ತೆ!