ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ನೂತನ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಅತಿವೃಷ್ಠಿ ಪೀಡಿತ ಪ್ರದೇಶಗಳು, ಆಸ್ಪತ್ರೆ, ಶಾಲೆ, ಅಂಗನವಾಡಿ ಸೇರಿದಂತೆ ನೂತನ ಅನುಭವ ಮಂಟಪ ಕಟ್ಟಡ ಮತ್ತಿತರ ಕಡೆಗಳಿಗೆ ಮಿಂಚಿನ ಸಂಚಾರ ನಡೆಸಿ ಜನಪರ ಕಾರ್ಯಗಳಿಗೆ ಆದ್ಯತೆ ನೀಡುವುದು, ಜನರ ಸಂಕಷ್ಟಗಳಿಗೆ ತಕ್ಷಣ ಹಾಗೂ ಸೂಕ್ತವಾಗಿ ಸ್ಪಂದಿಸದಿರುವ ದೂರುಗಳನ್ನು ಸಹಿಸೋಲ್ಲ ಎಂಬ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡುವ ಮೂಲಕ ಆಡಳಿತ ಮತ್ತಷ್ಟು ಚುರುಕಾಗಿರಲಿದೆ ಎಂಬ ಸಂದೇಶ ಸಾರಿದರು.ಸೋಮವಾರ ಬೆಳಗ್ಗೆ ಬಸವಕಲ್ಯಾಣ ತಾಲೂಕಿನಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ ಶಿಲ್ಪಾ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಡಾ.ಗಿರೀಶ ಬದೋಲೆ ಅವರು, ಗೊಗ್ಗಾ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಿದರು. ಸ್ವತಃ ಶಾಲಾ ಮಕ್ಕಳೊಂದಿಗೆ ಮಾತನಾಡಿ ವಿದ್ಯಾಭ್ಯಾಸದ ಮಾಹಿತಿ ಪಡೆದು ಮಕ್ಕಳು ಶ್ರದ್ಧೆಯಿಂದ ಅಧ್ಯಯನ ಮಾಡುವುದರೊಂದಿಗೆ ಗುರಿ ಮುಟ್ಟುವಂತೆ ತಿಳಿಸಿದ ಅವರು, ನಂತರ ಅಲ್ಲಿನ ಡಾ.ಅಂಬೇಡ್ಕರ ವಸತಿ ನಿಲಯಕ್ಕೂ ಭೇಟಿ ನೀಡಿದರು.
ಬಸವಕಲ್ಯಾಣದ ರಾಜೇಶ್ವರ ಗ್ರಾಮದಲ್ಲಿನ ಅಂಗನವಾಡಿ ಕಟ್ಟಡ ಹಾಗೂ ನಾಡಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಡೋಳಾ ಗ್ರಾಮಕ್ಕೆ ಭೇಟಿ ನೀಡಿ ಬೆಳೆ ಸರ್ವೆ ಹಾಗೂ ಅತಿವೃಷ್ಠಿಯಿಂದ ಹಾನಿಯಾಗಿರುವ ಬೆಳೆಗಳ ಬಗ್ಗೆ ಮಾಹಿತಿ ಪಡೆದರು.*ನೂತನ ಅನುಭವ ಮಂಟಪ ಕಟ್ಟಡಕ್ಕೆ ಭೇಟಿ: ಬಸವಕಲ್ಯಾಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಅನುಭವ ಮಂಟಪದ ಕಾಮಗಾರಿಯನ್ನು ಡಿಸಿ ಶಿಲ್ಪಾ ಶರ್ಮಾ ವೀಕ್ಷಿಸಿ ಸಮಗ್ರ ಯೋಜನೆಯ ಮಾಹಿತಿ ಪಡೆದರು. ಜೊತೆಗೆ ಸಹಾಯಕ ಆಯುಕ್ತ ಪ್ರಕಾಶ ಕುದರಿ ತಹಸೀಲ್ದಾರ ಶಾಂತನಗೌಡ, ಬಿಕೆಡಿಬಿ ಆಯುಕ್ತರಾದ ರಮೇಶ ಕೋಲಾರ, ಅಭಿಯಂತರರಾದ ತಳವಾಡೆ ಹಾಗೂ ಶಿರ್ಕೆ ಕಂಪನಿಯ ವ್ಯವಸ್ಥಾಪಕ ಮನೋಜಕುಮಾರ ಶರ್ಮಾ, ಅಭಿಯಂತರ ಸಾಂಗ್ಲೇ ಉಪಸ್ಥಿತರಿದ್ದು ಮಾಹಿತಿ ಒದಗಿಸಿಕೊಟ್ಟರು. ಈ ವೇಳೆ ಕಟ್ಟಡದ ವಾಸ್ತು ಶಿಲ್ಪಿ ಡಾ.ಬಾಬಾಸಾಹೇಬ ಗಡ್ಡೆ, ಬಿಕೆಡಿಬಿ ತಹಸೀಲ್ದಾರ ಇನ್ನಿತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಡೆಂಘೀ ಹರಡದಂತೆ ಮುಂಜಾಗ್ರತೆ ವಹಿಸಿ: ಬಸವಕಲ್ಯಾಣ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಶಿಲ್ಪಾ ಅವರು, ಅಲ್ಲಿನ ಎಲ್ಲಾ ವಿಭಾಗಗಳನ್ನು ಪರಿಶೀಲಿಸಿ ಡೆಂಘೀ ಜ್ವರ ಹರಡದಂತೆ ಮುಂಜಾಗ್ರತಾ ಕ್ರಮವನ್ನು ವಹಿಸುವಂತೆ ತಿಳಿಸಿದ ಅವರು, ಆಸ್ಪತ್ರೆಗೆ ಬರುವ ರೋಗಿಗಳಿಗೆ ಒಳ್ಳೆಯ ಉಪಚಾರ ನೀಡಬೇಕು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು, ನಿಷ್ಕಾಳಜಿ ವಹಿಸಿದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಜ್ಞಾನೇಶ್ವರ ನಿರಗುಡೆ, ತಾಲೂಕು ಅರೋಗ್ಯಾಧಿಕಾರಿ ಅಶೋಕ ಮೈಲಾರೆ, ಮುಖ್ಯ ವೈದ್ಯಾಧಿಕಾರಿ ಅಪರ್ಣಾ ಈರಣ್ಣ ಹಾಗೂ ವಿವಿಧ ವಿಭಾಗದ ವೈದ್ಯಾಧಿಕಾರಿಗಳು ಸಿಬ್ಬಂದಿಗಳು ಇದ್ದರು.