
ಡಿಸಿ ಕಚೇರಿ ಸಂಕೀರ್ಣಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ
ನೂತನ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದು, 2027ರ ಮಾರ್ಚ್–ಏಪ್ರಿಲ್ ವೇಳೆಗೆ ಲೋಕಾರ್ಪಣೆ ಮಾಡುವ ನಿರೀಕ್ಷೆಯಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ತಿಳಿಸಿದರು.ಡಿಸಿ ಕಚೇರಿ ಸಂಕೀರ್ಣಕ್ಕೆ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಅವರು ಒಟ್ಟು ₹60 ಕೋಟಿ ಯೋಜನೆಗೆ ತಾತ್ವಿಕ ಮಂಜೂರಾತಿ ದೊರೆತಿದ್ದು, ಪ್ರಸ್ತುತ ₹56 ಕೋಟಿ ವೆಚ್ಚದ ಕಾಮಗಾರಿ ನಡೆಯುತ್ತಿದೆ. ಆಡಿಟೋರಿಯಂ, ಲ್ಯಾಂಡ್‌ಸ್ಕೇಪಿಂಗ್ ಸೇರಿದಂತೆ ಏಳು ಜಿಲ್ಲಾ ಮಟ್ಟದ ಇಲಾಖೆಗಳ ಕಚೇರಿಗಳು ಒಂದೇ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸಲಿವೆ ಎಂದರು.ಸಾರ್ವಜನಿಕರ ಅನುಕೂಲಕ್ಕೆ ಕ್ಯಾಂಟೀನ್, ಶೌಚಾಲಯ, ಪ್ರಿಂಟಿಂಗ್ ಹಾಗೂ ಜೆರಾಕ್ಸ್ ವ್ಯವಸ್ಥೆ ಕಲ್ಪಿಸುವ ಅಗತ್ಯವಿದ್ದು, ಕಚೇರಿ ಸಮೀಪ ಪ್ರತಿಭಟನೆ ಹಾಗೂ ಹೋರಾಟಗಳಿಗೆ ಸೂಕ್ತ ಸ್ಥಳ ಗುರುತಿಸಬೇಕು ಎಂದು ಹೇಳಿದರು.ಜಿಪಂ ಕಚೇರಿ ಸಮೀಪದಿಂದ ಎಐಟಿ ವೃತ್ತದವರೆಗೆ ಇರುವ ಸರ್ವಿಸ್ ರಸ್ತೆಯನ್ನು ಹನುಮಂತಪ್ಪ ವೃತ್ತ ಅಥವಾ ಕತ್ರಿಮಾರಮ್ಮ ದೇವಸ್ಥಾನದವರೆಗೆ ವಿಸ್ತರಿಸಬೇಕು. ಇದರಿಂದ ಸಂಚಾರ ದಟ್ಟಣೆ ಹಾಗೂ ಅಪಘಾತ ಗಳನ್ನು ಕಡಿಮೆ ಮಾಡಲು ಅನುಕೂಲವಾಗಲಿದೆ ಎಂದರು.ನೂತನ ಡಿಸಿ ಕಚೇರಿ ಸಂಕೀರ್ಣ ಉತ್ತಮ ಗುಣಮಟ್ಟದಲ್ಲಿ ನಿರ್ಮಾಣವಾಗಬೇಕು. ಸಣ್ಣಪುಟ್ಟ ಲೋಪದೋಷ ಗಳಿದ್ದರೆ ಸರಿಪಡಿಸಿ ಕಟ್ಟಡದ ಬಾಳಿಕೆ ಮತ್ತು ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.ನೂತನ ಕಚೇರಿ ಆರಂಭವಾದ ಬಳಿಕ ಹಳೆಯ ಜಿಲ್ಲಾಧಿಕಾರಿ ಕಚೇರಿ ಕಟ್ಟಡವನ್ನು ಜಿಲ್ಲಾ ಮ್ಯೂಸಿಯಂ ಆಗಿ ಪರಿವರ್ತಿಸಬೇಕು. ಐತಿಹಾಸಿಕ ಕಟ್ಟಡ ಸಂರಕ್ಷಿಸುವ ಜೊತೆಗೆ ಹಳೆ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬೇಕು ಎಂದು ಒತ್ತಾಯಿಸಿದರು.ದಂಟರಮಕ್ಕಿ ಕೆರೆ ಕಾಮಗಾರಿ ಪುನರಾರಂಭಕ್ಕೆ ಆಗ್ರಹ:ಬಸವನಹಳ್ಳಿ–ದಂಟರಮಕ್ಕಿ ಕೆರೆಯ ₹36 ಕೋಟಿ ಅಭಿವೃದ್ಧಿ ಯೋಜನೆ ಕಾಮಗಾರಿಯನ್ನು ಪುನಾರಂಭಿಸಬೇಕು ಎಂದು ರವಿ ಆಗ್ರಹಿಸಿದರು.
ಕಾಮಗಾರಿ ಕುರಿತು ನಡೆದ ತನಿಖೆಯಲ್ಲಿ ಯಾವುದೇ ಹಣಕಾಸಿನ ದುರುಪಯೋಗವಾಗಿಲ್ಲ ಎಂದು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ. ಹೀಗಾಗಿ ಕೂಡಲೇ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಮುಂದುವರಿಸಬೇಕು ಎಂದರು.ನ್ಯಾಯಾಲಯ ಸಂಕೀರ್ಣದ ಬಾಕಿ ಉಳಿದ ಸಣ್ಣಪುಟ್ಟ ಕಾಮಗಾರಿಗಳನ್ನೂ ಶೀಘ್ರ ಪೂರ್ಣಗೊಳಿಸಿ ಬಳಕೆಗೆ ತರಬೇಕು. ಅಗತ್ಯ ಹಣಕಾಸು ಮಂಜೂರಾತಿ ನೀಡಿ ಕಾಮಗಾರಿಗಳಿಗೆ ವೇಗ ನೀಡಬೇಕು ಎಂದು ಒತ್ತಾಯಿಸಿದರು.