Teachers need to be sensitive.
-ಡಯಟ್ ಉಪನ್ಯಾಸಕ ಎಸ್.ಬಸವರಾಜು ಅಭಿಮತ
--ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಶಿಕ್ಷಕರಿಗೆ ಸಹಾನುಭೂತಿ, ಸಂವೇದನಾಶೀಲತೆ ಗುಣ ಅಗತ್ಯ ಎಂದು ಡಯಟ್ ನ ಉಪನ್ಯಾಸಕ ಎಸ್. ಬಸವರಾಜು ಹೇಳಿದರು.ತಾಲೂಕಿನ ಹಾನಗಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಅನುಷ್ಠಾನ ಕಾರ್ಯಕ್ರಮಗಳಾದ ದ್ವಿಭಾಷಾ ತರಗತಿ, ಇಸಿಸಿಇ (ಆರಂಭಿಕ ಬಾಲ್ಯದ ಆರೈಕೆ ಮತ್ತು ಶಿಕ್ಷಣ), ಮೌಲ್ಯ ಶಿಕ್ಷಣ ವಿಷಯ ಅನುಷ್ಠಾನ ಕುರಿತು ಪ್ರಗತಿ ಪರಿಶೀಲಿಸಿ ಮಾತನಾಡಿದರು.
ಶಾಲೆಯಲ್ಲಿ ಶಿಕ್ಷಕರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅನುಷ್ಠಾನ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು. ಶಿಕ್ಷಣ ಪ್ರತಿ ಮಗುವಿಗೆ ದಾರಿದೀಪವಾಗಿದೆ. ಪೂರ್ವ ಪ್ರಾಥಮಿಕ ಹಂತದ (ಎಲ್‌ಕೆಜಿ ಮತ್ತು ಯುಕೆಜಿ) ಶಿಕ್ಷಣ ಔಪಚಾರಿಕ ಶಿಕ್ಷಣದ ಮೊದಲ ಹೆಜ್ಜೆಯಾಗಿದೆ. ದೇಶದ ಅಭಿವೃದ್ಧಿಯಲ್ಲಿ ಮಾನವ ಸಂಪತ್ತು ಮುಖ್ಯವಾಗಿದೆ. ಮಕ್ಕಳ ಬಾಲ್ಯವನ್ನು ಸದೃಢಗೊಳಿಸಲು ಶಿಕ್ಷಕರ ಪಾತ್ರ ಮುಖ್ಯವಾಗಿದ್ದು, ಮಗು ವಿಶ್ವದ ಸಂಪತ್ತಾಗಿ ಬೆಳೆಯುವಂತೆ ಮಾರ್ಗದರ್ಶನ ಮಾಡಬೇಕು. ತರಗತಿ ನಿರ್ವಹಣೆಯಲ್ಲಿ ಮಾತೃಭಾವನೆಯಿಂದ ಬೋಧಿಸುವ ಮೂಲಕ ಉತ್ತಮ ಸಂಸ್ಕಾರ ನೀಡಿ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪಿಸಬೇಕು ಎಂದರು.ಬಿಆರ್‌ಪಿ ಪ್ರಸನ್ನಕುಮಾರ್ ಮಾತನಾಡಿ, ತರಗತಿ ಪ್ರಕ್ರಿಯೆಯಲ್ಲಿ ಶಿಕ್ಷಕರ ಬೋಧನೆ ಏಕಮುಖವಾಗಿರದೆ ಚಟುವಟಿಕೆಯುಕ್ತವಾಗಿರಬೇಕು. ಕಲಿಕಾ ಸಾಮಗ್ರಿಗಳು, ಚಿತ್ರಗಳು, ಚಟುವಟಿಕೆಗಳನ್ನು ಬಳಸಿಕೊಳ್ಳುವ ಮೂಲಕ ಸಂತಸದಾಯಕ ಕಲಿಕಾ ವಾತಾವರಣ ನಿರ್ಮಾಣ ಮಾಡಿಕೊಳ್ಳುವುದರಿಂದ ಪರಿಣಾಮಕಾರಿ ಕಲಿಕೆಯಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕ ಹೊನ್ನಷಾವಲಿ, ಶಿಕ್ಷಕರಾದ ಗೀತಮ್ಮ, ನೂರ್-ಇ-ಯಾಸ್ಮಿನ್, ಲೋಹಿತಾಕ್ಷಿ, ಅಶೋಕ ಕುಮಾರ್ ಇದ್ದರು.ಪೋಟೋ: 3ಸಿಟಿಡಿ5
ಮೊಳಕಾಲ್ಮುರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಡಯಟ್ ಉಪನ್ಯಾಸಕ ಎಸ್.ಬಸವರಾಜು, ಬಿಆರ್‌ಪಿ ಪ್ರಸನ್ನಕುಮಾರ್ ಭೇಟಿ ನೀಡಿ ಕಲಿಕಾ ಚಟುವಟಿಕೆ ಪ್ರಗತಿ ಪರಿಶೀಲಿಸಿದರು.