Interest in astronomy and planetariums is essential among students.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಮಕ್ಕಳಲ್ಲಿ ಖಗೋಳಶಾಸ್ತ್ರದ ಬಗ್ಗೆ ಸಕ್ರಿಯ ಹಾಗೂ ವೈಜ್ಞಾನಿಕ ಆಸಕ್ತಿ ಮೂಡಿಸುವುದು ಸಂಚಾರಿ ಡಿಜಿಟಲ್ ತಾರಾಲಯದ ಮುಖ್ಯ ಉದ್ದೇಶವಾಗಿದೆ ಎಂದು ಸಂಚಾರಿ ತಾರಾಲಯದ ಸಂಚಾಲಕ ಮಧುಸೂದನ್ ತಿಳಿಸಿದರು.

ಚಿತ್ರದುರ್ಗ ತಾಲೂಕಿನ ತುರುವನೂರು ಹೋಬಳಿಯ ಕೂನಬೇವು ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಶಾಲಾ ಕೊಠಡಿಯಲ್ಲಿಯೇ ತಾರಾಲಯ ಸೃಷ್ಟಿಸಿ ವಿದ್ಯಾರ್ಥಿಗಳಿಗೆ ತಾರಾಲಯದ ಅನುಭವ ನೀಡಿ ಮಾತನಾಡಿದರು.

ರಾಜ್ಯ ಸರ್ಕಾರವು ಈ ಯೋಜನೆಯನ್ನು ರಾಜ್ಯದ 11 ಜಿಲ್ಲೆಗಳಲ್ಲಿ ಜಾರಿಗೆ ತಂದಿದೆ. ಬೆಂಗಳೂರು ವಿಭಾಗದಿಂದ ಚಿತ್ರದುರ್ಗ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ನಾವು ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಖಗೋಳಶಾಸ್ತ್ರ ಮತ್ತು ತಾರಾಲಯದ ಕುರಿತು ಆಸಕ್ತಿ ಮೂಡಿಸುತ್ತಿದ್ದೇವೆ ಎಂದರು.

ಸೌರಮಂಡಲದಲ್ಲಿರುವ ಗ್ರಹಗಳು, ಅವುಗಳ ಭ್ರಮಣ ಹಾಗೂ ಪರಿಭ್ರಮಣ ಅವಧಿಗಳು, ಉಪಗ್ರಹಗಳು, ಹಗಲು-ರಾತ್ರಿಗಳು ಉಂಟಾಗುವ ವಿಧಾನ ಮತ್ತು ಋತುಮಾನಗಳ ಬದಲಾವಣೆಯನ್ನು ಮಕ್ಕಳಿಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರವಾಗಿ ತೋರಿಸಲಾಯಿತು. ಅಲ್ಲದೆ, ಗ್ರಹಣಗಳ ಕುರಿತಂತೆ ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ಗ್ರಹಣಗಳು ಸಂಭವಿಸುವ ನೈಜ ವೈಜ್ಞಾನಿಕ ಪ್ರಕ್ರಿಯೆಯನ್ನು ವಿವರಿಸಿ ಜಾಗೃತಿ ಮೂಡಿಸಲಾಯಿತು.

ಮುಖ್ಯೋಪಾಧ್ಯಾಯ ಎಸ್. ಹನುಮಂತಪ್ಪ ಮಾತನಾಡಿ, ಮಕ್ಕಳು ಮೂಢನಂಬಿಕೆಗಳ ವಿರುದ್ಧ ಧ್ವನಿಯೆತ್ತಿ, ಪ್ರತಿಯೊಂದನ್ನೂ ವೈಜ್ಞಾನಿಕವಾಗಿ ಪ್ರಶ್ನಿಸುವ ಹಾಗೂ ಆಲೋಚಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.

ಸಾಹಿತಿ ನೋಬೆಲ್ ಕುಮಾರ್ ಹಾಗೂ ಶಾಲೆಯ ಸಹ ಶಿಕ್ಷಕರು ಉಪಸ್ಥಿತರಿದ್ದರು.

============

ಪೋಟೋ ಕ್ಯಾಪ್ಸನ್

ಚಿತ್ರದುರ್ಗ ತಾಲೂಕಿನ ಕೂನಬೇವು ಗ್ರಾಮದಲ್ಲಿ ಸಂಚಾರಿ ತಾರಾಲಯದ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಲಾಯಿತು.

-------ಪೋಟೋ ಫೈಲ್ ನೇಮ್-3ಸಿಟಿಡಿ2--