ಅಕ್ಟೋಬರ್‌ನಲ್ಲಿ ನೂತನ ಜಿಲ್ಲಾಸ್ಪತ್ರೆ ಉದ್ಘಾಟನೆ: ಶಾಸಕ ಗವಿಯಪ್ಪ

KannadaprabhaNewsNetwork |  
Published : Sep 08, 2026, 02:45 AM IST
ಫೋಟೋವಿವರ- (7ಎಚ್‌ಪಿಟಿ2)ಹೊಸಪೇಟೆ ನಗರದ ಜಂಬುನಾಥ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ 300 ಹಾಸಿಗೆಗಳ ಜಿಲ್ಲಾ ಆಸ್ಪತ್ರೆಯ ಕಾಮಗಾರಿಯನ್ನು ಶಾಸಕ ಎಚ್‌.ಆರ್‌. ಗವಿಯಪ್ಪ ವೀಕ್ಷಿಸಿದರು | Kannada Prabha

ಸಾರಾಂಶ

ಆಸ್ಪತ್ರೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಈಗಾಗಲೇ ಶೇ.50ಕ್ಕೂ ಹೆಚ್ಚು ವೈದ್ಯಕೀಯ ಉಪಕರಣ ಲಭ್ಯವಿದ್ದು, ಉಳಿದ ಉಪಕರಣ ಹಾಗೂ ಅಗತ್ಯ ಸಾಮಗ್ರಿಗಳು ಮುಂದಿನ ಒಂದು ತಿಂಗಳೊಳಗೆ ಲಭ್ಯವಾಗಲಿವೆ.

ಹೊಸಪೇಟೆ: ನಗರದ ಜಂಬುನಾಥ ರಸ್ತೆಯಲ್ಲಿ ನಿರ್ಮಿಸುತ್ತಿರುವ ನೂತನ 300 ಹಾಸಿಗೆಗಳ ಜಿಲ್ಲಾಸ್ಪತ್ರೆ ಕಾಮಗಾರಿ ಹಾಗೂ ವೈದ್ಯಕೀಯ ಉಪಕರಣಗಳ ಪೂರೈಕೆ ಪ್ರಗತಿಯಲ್ಲಿದ್ದು, ಅಕ್ಟೋಬರ್‌ನಲ್ಲಿ ಅಗತ್ಯ ಸಿದ್ಧತೆ ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು ಎಂದು ಶಾಸಕ ಎಚ್.ಆರ್. ಗವಿಯಪ್ಪ ಹೇಳಿದರು.

ನಗರದ ನೂತನ ಜಿಲ್ಲಾಸ್ಪತ್ರೆ ಕಟ್ಟಡವನ್ನು ಸೋಮವಾರ ಪರಿಶೀಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಆಸ್ಪತ್ರೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಈಗಾಗಲೇ ಶೇ.50ಕ್ಕೂ ಹೆಚ್ಚು ವೈದ್ಯಕೀಯ ಉಪಕರಣ ಲಭ್ಯವಿದ್ದು, ಉಳಿದ ಉಪಕರಣ ಹಾಗೂ ಅಗತ್ಯ ಸಾಮಗ್ರಿಗಳು ಮುಂದಿನ ಒಂದು ತಿಂಗಳೊಳಗೆ ಲಭ್ಯವಾಗಲಿವೆ ಎಂದು ತಿಳಿಸಿದರು.

ಉದ್ಘಾಟನೆಗೂ ಮುನ್ನ ಆಸ್ಪತ್ರೆಯ ಸ್ವಚ್ಛತೆ, ವೈದ್ಯಕೀಯ ಉಪಕರಣಗಳ ಅಳವಡಿಕೆ ಹಾಗೂ ಟೆಸ್ಟಿಂಗ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದ ಅವರು, ಆಸ್ಪತ್ರೆಗೆ ಅಗತ್ಯವಿರುವ ಸ್ಕ್ಯಾನಿಂಗ್ ಸೌಲಭ್ಯ ಸೇರಿದಂತೆ ವೈದ್ಯಕೀಯ ಉಪಕರಣಗಳ ಆಧುನೀಕರಣಕ್ಕೆ ಕೆಕೆಆರ್‌ಡಿಬಿ ಅನುದಾನದಡಿ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಆಸ್ಪತ್ರೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಹಂತ-ಹಂತವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರಾತ್ರಿ ವೈದ್ಯರು ಲಭ್ಯವಿರುವುದಿಲ್ಲ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿಯಿಂದಲೇ ಕರ್ತವ್ಯದಲ್ಲಿರುವ ವೈದ್ಯರ ಹಾಜರಾತಿ ಕಡ್ಡಾಯಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ರಾತ್ರಿ ಪಾಳಿಯಲ್ಲಿ ವೈದ್ಯರು ತಮ್ಮ ಕರ್ತವ್ಯ ಮುಗಿದ ಬಳಿಕ ರಿಲೀವಿಂಗ್ ವೈದ್ಯರು ಸ್ಥಳಕ್ಕೆ ಆಗಮಿಸಿ ಕರ್ತವ್ಯ ವಹಿಸಿಕೊಂಡಿರುವುದನ್ನು ಖಚಿತಪಡಿಸಿಕೊಂಡ ನಂತರವೇ ಆಸ್ಪತ್ರೆಯಿಂದ ತೆರಳಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಶಾಸಕರು ಎಚ್ಚರಿಕೆ ನೀಡಿದರು.

ವೈದ್ಯಕೀಯ ಸಿಬ್ಬಂದಿ ಹಾಗೂ ರೋಗಿಗಳ ಸುರಕ್ಷತೆಗಾಗಿ ಬೆಳಗ್ಗೆ ಮತ್ತು ರಾತ್ರಿ ಪಾಳಿಯಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಜತೆಗೆ ಆಸ್ಪತ್ರೆ ಆವರಣದಲ್ಲಿ ಪೊಲೀಸ್ ಔಟ್ ಪೋಸ್ಟ್ ಸ್ಥಾಪಿಸಲು ನಿರ್ಧರಿಸಲಾಗಿದೆ. 60 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೂ ಉತ್ತಮ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ತಿಂಗಳಿಗೆ 400ಕ್ಕೂ ಹೆಚ್ಚು ಹೆರಿಗೆ ಹಾಗೂ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಟಿ. ಲಿಂಗರಾಜು ಮಾತನಾಡಿ, ನೂತನ ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ಸಿಬ್ಬಂದಿಯನ್ನು ಸರ್ಕಾರ ಮಂಜೂರಾತಿ ನೀಡಿದ್ದು, ಇದರಲ್ಲಿ 29 ಸ್ಪೆಷಲಿಸ್ಟ್ ವೈದ್ಯರು ಹಾಗೂ ಒಟ್ಟು 39 ವೈದ್ಯರು, 120 ಸ್ಟಾಫ್ ನಸ್‌ ಹಾಗೂ 40 ಗ್ರೂಪ್ ​ಡಿ ಸಿಬ್ಬಂದಿ, ಇಸಿಜಿ ಟೆಕ್ನಿಷಿಯನ್, ಎಕ್ಸ್ ರೇ ಟೆಕ್ನಿಷಿಯನ್ ಸೇರಿದಂತೆ ವಿವಿಧ ವಿಭಾಗಗಳ ಸುಮಾರು 16 ತಾಂತ್ರಿಕ ಸಿಬ್ಬಂದಿ ಸೇರಿದಂತೆ ಒಟ್ಟು 235 ಹೊಸ ಸಿಬ್ಬಂದಿಯು ಕಾರ್ಯನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಎಲ್.ಆರ್. ಶಂಕರ್ ನಾಯ್ಕ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಜಂಬಯ್ಯ ಸೇರಿದಂತೆ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೀವನದಲ್ಲಿ ಶರಣರ ತತ್ವಾದರ್ಶ ಅಳವಡಿಸಿಕೊಳ್ಳಿ: ಡಾ. ಅನ್ನದಾನೀಶ್ವರ ಶ್ರೀಗಳು
ಯಕ್ಷೋತ್ಸವ ತಾಳಮದ್ದಲೆ ಸ್ಪರ್ಧೆಯಲ್ಲಿ ೨೭ ತಂಡ ಭಾಗಿ