ಆತ್ಮಭೂಷಣ್ ಕನ್ನಡಪ್ರಭ ವಾರ್ತೆ ಮಂಗಳೂರು ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಲವೇ ತಿಂಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳು ಓಡಾಟ ನಡೆಸಲಿದೆ. ವಿಮಾನ ನಿಲ್ದಾಣಕ್ಕೆ ಸ್ಥಳೀಯ ಬಸ್ ಸಂಚಾರದಿಂದ ನಷ್ಟ ಅನುಭವಿಸಿದ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ, ಈ ಬಾರಿ ಕಾಸರಗೋಡು, ಭಟ್ಕಳ ಹಾಗೂ ಮಣಿಪಾಲದಿಂದ ಎಲೆಕ್ಟ್ರಿಕ್ ಬಸ್‌ಗಳ ಓಡಾಟ ನಡೆಸಲು ಹೊಸ ಚಿಂತನೆ ನಡೆಸಿದೆ. ಇದರಿಂದಾಗಿ ಈ ದೂರದ ಊರುಗಳಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಆಗಮನ ಹಾಗೂ ನಿರ್ಗಮನಕ್ಕೆ ಸುಲಭವಾಗಲಿದೆ. ಜತೆಗೆ ಪ್ರಯಾಣಿಕರ ಆಕರ್ಷಣೆಗೂ ಕಾರಣವಾಗಲಿದೆ. ಈ ಹಿಂದೆ ವಿಮಾನ ನಿಲ್ದಾಣಕ್ಕೆ ಸಿಟಿ ವೋಲ್ವೋ ಸಂಚಾರ ಏರ್ಪಡಿಸಿದರೂ ಪ್ರಯಾಣಿಕರ ಕೊರತೆ ತಲೆದೋರಿತ್ತು. ಒಟ್ಟು ನಾಲ್ಕು ಎಲೆಕ್ಟ್ರಿಕ್ ಬಸ್‌ಗಳು ವಿಮಾನ ನಿಲ್ದಾಣಕ್ಕೆ ಓಡಾಟ ನಡೆಸುವ ಸಂಭವ ಇದ್ದು, ಈ ಬಸ್‌ಗಳಿಗೆ ಪ್ರತ್ಯೇಕ ಪರವಾನಗಿಯ ಅಗತ್ಯ ಇರುವುದಿಲ್ಲ. ಕೇವಲ ನೋಂದಣಿ ಮಾಡಿಸಿದರೆ ಸಾಕು, ಅಂತಾರಾಜ್ಯ ಓಡಾಟವನ್ನೂ ನಡೆಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಬಸ್‌ಗಳು ವಿಮಾನ ನಿಲ್ದಾಣವನ್ನು ಸಂಪರ್ಕಿಸಲಿವೆ. ವಿಮಾನಯಾನ ಕಂಪನಿಗಳು ತಮ್ಮ ವೆಬ್‌ಸೈಟ್‌ನಲ್ಲೂ ಎಲೆಕ್ಟ್ರಿಕ್ ಬಸ್ ಓಡಾಟ ಹಾಗೂ ಮುಂಗಡ ಬುಕ್ಕಿಂಗ್ ಬಗ್ಗೆ ಮಾಹಿತಿ ನೀಡಿದರೆ, ಇದು ಇನ್ನಷ್ಟು ಪರಿಣಾಮಕಾರಿಯಾಗಲಿದೆ. ಈ ಕುರಿತಂತೆ ವಿವಿಧ ವಿಮಾನಯಾನ ಕಂಪನಿಗಳ ಜತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪತ್ರವ್ಯವಹಾರಕ್ಕೆ ಮುಂದಾಗಿದ್ದಾರೆ. ಮಾತ್ರವಲ್ಲ ಇತರೆ ಪ್ರಯಾಣಿಕರಿಗೂ ಈ ಬಸ್ ಸಂಚಾರ ಅನುಕೂಲವಾಗಲಿದೆ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು. ಮಂಗಳೂರಿಗೆ 45 ಎಲೆಕ್ಟ್ರಿಕ್ ಬಸ್: ಮಂಗಳೂರು ವಿಭಾಗಕ್ಕೆ 45 ಎಲೆಕ್ಟ್ರಿಕ್ ಬಸ್‌ಗಳು ಬರಲಿದೆ. ಇದರಲ್ಲಿ 4 ಎಲೆಕ್ಟ್ರಿಕ್ ಬಸ್ ವಿಮಾನ ನಿಲ್ದಾಣಕ್ಕೆ, ಉಳಿದ ಬಸ್‌ಗಳನ್ನು ಮಂಗಳೂರಿನಿಂದ ಧರ್ಮಸ್ಥಳ, ಉಡುಪಿ, ಕಾಸರಗೋಡು, ಕುಂದಾಪುರ-ಭಟ್ಕಳ ನಡುವೆ ಸಂಚಾರಕ್ಕೆ ಇಳಿಸುವ ಸಾಧ್ಯತೆ ಇದೆ. ಇದಕ್ಕಾಗಿ ಮಂಗಳೂರು, ಉಡುಪಿ, ಕುಂದಾಪುರ, ಧರ್ಮಸ್ಥಳಗಳಲ್ಲಿ ಇವಿ ಚಾರ್ಜಿಂಗ್ ಪಾಯಿಂಟ್ ಮಾಡಲಾಗುತ್ತದೆ. ಒಂದು ಬಸ್ ಒಮ್ಮೆ ಚಾರ್ಜ್ ಮಾಡಿದರೆ 200 ಕಿ.ಮೀ. ವರೆಗೆ ಸಂಚರಿಸಬಹುದು. ಪೂರ್ತಿ ಚಾರ್ಜಿಂಗ್‌ಗೆ ನಾಲ್ಕು ತಾಸು ಬೇಕು. ಹಾಗಾಗಿ ದೂರದ ಊರುಗಳಿಗೆ ಎಲೆಕ್ಟ್ರಿಕ್ ಬಸ್ ಓಡಾಟ ಸುಲಭವಲ್ಲ ಎನ್ನುತ್ತಾರೆ ಅಧಿಕಾರಿಗಳು. ಮಂಗಳೂರಲ್ಲಿ ಪಲ್ಲಕ್ಕಿ ಸಂಚಾರ: ಮಂಗಳೂರು ವಿಭಾಗಕ್ಕೆ ಹೊಸ ವಿನ್ಯಾಸದ ನಾನ್ ಎಸಿ ಎಂಟು ಪಲ್ಲಕಿ ಬಸ್‌ಗಳು ಆಗಮಿಸಲಿದ್ದು, ಬೆಂಗಳೂರು ನಡುವೆ ಸಂಚರಿಸಲಿದೆ. ಹಾಲಿ ನಾನ್ ಎಸಿ ಬಸ್‌ಗಳನ್ನು ಬೇರೆ ವಿಭಾಗಕ್ಕೆ ವರ್ಗಾಯಿಸಿ, ಇಲ್ಲಿ ಪಲ್ಲಕಿ ಬಸ್‌ಗಳು ಸಂಚಾರಕ್ಕೆ ಇಳಿಯಲಿದೆ. ಆದರೆ ಕರ್ನಾಟಕ ಸಾರಿಗೆಯ ಹೊಸ ಯಾವುದೇ ಎಕ್ಸ್‌ಪ್ರೆಸ್ ಬಸ್‌ಗಳು ಮಂಗಳೂರು ವಿಭಾಗಕ್ಕೆ ಇಲ್ಲ, ಪುತ್ತೂರು ವಿಭಾಗಕ್ಕೆ 9 ಬಸ್‌ಗಳನ್ನು ಮಂಜೂರು ಮಾಡಲಾಗಿದೆ. 57 ರೂಟ್ ಬೇಡಿಕೆ, 198 ಸಿಬ್ಬಂದಿ ಬೇಕು! ಮಂಗಳೂರು ವಿಭಾಗದಲ್ಲಿ 57 ವಿವಿಧ ರೂಟ್‌ಗಳಲ್ಲಿ ಹೊಸದಾಗಿ ಹಾಗೂ ಹೆಚ್ಚುವರಿ ಬಸ್ ಸಂಚಾರಕ್ಕೆ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕೆ ಚಾಲಕ, ನಿರ್ವಾಹಕ, ಟೆಕ್ನೀಶಿಯನ್ ಸೇರಿ 198 ಸಿಬ್ಬಂದಿ ಬೇಕು. ಈ ಬೇಡಿಕೆ ಈಡೇರಿದಲ್ಲಿ ಮಂಗಳೂರಿನಿಂದ ಕಾರ್ಕಳ, ಮೂಡುಬಿದಿರೆ, ಉತ್ತರ ಕರ್ನಾಟಕ ಜಿಲ್ಲೆಗಳಿಗೂ ಬಸ್ ಸಂಚಾರ ವಿಸ್ತರಣೆಯಾಗಲಿದೆ. ಪ್ರಸಕ್ತ 361 ಕಾಯಂ ಸಿಬ್ಬಂದಿ ಕೊರತೆ ಇದೆ. ಈ ಹಿನ್ನೆಲೆಯಲ್ಲಿ 187 ಸಿಬ್ಬಂದಿಯನ್ನು ಹೊರಗುತ್ತಿಗೆಯಲ್ಲಿ ತೆಗೆದುಕೊಳ್ಳಲಾಗಿದೆ. 180 ಸಿಬ್ಬಂದಿ ಮತ್ತೆ ಕೊರತೆ ಇದೆ. ಇನ್ನೂ 40ರಿಂದ 50 ಮಂದಿ ಸಿಬ್ಬಂದಿಯ ವರ್ಗಾವಣೆ ಜಾರಿಗೊಳಿಸಲು ಬಾಕಿ ಇದೆ ಎನ್ನುತ್ತವೆ ಮೂಲ.