ನೂತನ ಸರ್ಕ್ಯುಲರ್ ಫ್ಲೈಓವರ್ ನಿರ್ಮಿಸುವ ಮೂಲಕ ವಾಹನ ಸಂಚಾರವನ್ನು ಕಡಿಮೆ ಮಾಡಲು ಬಾಣಸವಾಡಿಯ ಐಒಸಿ ಜಂಕ್ಷನ್‌ನಲ್ಲಿರುವ ಫ್ಲೈಓವರ್ ಅನ್ನು ನೆಲಸಮಗೊಳಿಸಲು ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಲೈಲ್) ಮುಂದಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನೂತನ ಸರ್ಕ್ಯುಲರ್ ಫ್ಲೈಓವರ್ ನಿರ್ಮಿಸುವ ಮೂಲಕ ವಾಹನ ಸಂಚಾರವನ್ನು ಕಡಿಮೆ ಮಾಡಲು ಬಾಣಸವಾಡಿಯ ಐಒಸಿ ಜಂಕ್ಷನ್‌ನಲ್ಲಿರುವ ಫ್ಲೈಓವರ್ ಅನ್ನು ನೆಲಸಮಗೊಳಿಸಲು ಬೆಂಗಳೂರು ಸ್ಮಾರ್ಟ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಲೈಲ್) ಮುಂದಾಗಿದೆ.
2001-02ರಲ್ಲಿ ರೈಲ್ವೆ ಇಲಾಖೆಯಿಂದ ನಿರ್ಮಿಸಿದ್ದ ಈ ಹಳೇ ಮೇಲ್ಸೇತುವೆಯನ್ನು ತೆರವುಗೊಳಿಸಿ, ಆ ಜಾಗದಲ್ಲಿ 436 ಕೋಟಿ ರು. ವೆಚ್ಚದಲ್ಲಿ ಅತ್ಯಾಧುನಿಕ ಎಲಿವೇಟೆಡ್ ರೋಟರಿ ಫ್ಲೈಓವರ್ ನಿರ್ಮಿಸಲಾಗುತ್ತದೆ. ಹಳೇ ಮದ್ರಾಸ್ ರಸ್ತೆಯಿಂದ ಬೈಯ್ಯಪ್ಪನಹಳ್ಳಿಯ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್, ಕಮ್ಮನಹಳ್ಳಿ, ದೊಡ್ಡ ಬಾಸಣವಾಡಿ ಸೇರಿದಂತೆ ವಿವಿಧೆಡೆ ತೆರಳುವ ವಾಹನಗಳಿಗೆ ಐಒಸಿ ಜಂಕ್ಷನ್ ಫ್ಲೈಓವರ್ ಪ್ರಮುಖ ಮಾರ್ಗವಾಗಿದೆ. ಆದರೆ, ಕಿರಿದಾಗಿರುವ ಕಾರಣ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ರೋಟರಿ ಫ್ಲೈಓವರ್ ನಿರ್ಮಿಸಲಾಗುತ್ತಿದೆ.
ನೂತನ ಫ್ಲೈಓವರ್‌ನಿಂದ ಬಾಣಸವಾಡಿ, ಕಮ್ಮನಹಳ್ಳಿ ಮತ್ತು ಬೈಯಪ್ಪನಹಳ್ಳಿ ಕಡೆಯಿಂದ ಬರುವ ವಾಹನಗಳು ಯಾವುದೇ ಸಿಗ್ನಲ್ ಇಲ್ಲದೆ ಸರಾಗವಾಗಿ ಸಂಚರಿಸಲು ಅನುಕೂಲವಾಗಲಿದೆ. ಈ ಯೋಜನೆಯಡಿ ಮಾರುತಿ ಸೇವಾ ನಗರ ರಸ್ತೆಯಿಂದ ಸುಮಾರು 1.5 ಕಿ.ಮೀ ಉದ್ದದ ಹೊಸ ಫ್ಲೈಓವರ್ ಕೂಡ ಸೇರ್ಪಡೆಯಾಗಲಿದೆ.
ಟ್ರಾಫಿಕ್ ಜಾಮ್ ಸಾಧ್ಯತೆ
ಹಳೇ ಮೇಲ್ಸೇತುವೆ ತೆರವು ಕಾರ್ಯಾಚರಣೆ ಶೀಘ್ರದಲ್ಲೇ ಆರಂಭವಾಗಲಿದ್ದು, ಈ ಭಾಗದಲ್ಲಿ ಭಾರೀ ಸಂಚಾರ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ಅದರಲ್ಲೂ ದೊಡ್ಡ ಬಾಣಸವಾಡಿ ರಸ್ತೆ, ಬೈಯಪ್ಪನಹಳ್ಳಿ ಮುಖ್ಯ ರಸ್ತೆ, ಕಮ್ಮನಹಳ್ಳಿ ರಸ್ತೆ, ಹಳೇ ಮದ್ರಾಸ್ ರಸ್ತೆಯ ಸುತ್ತಲಿನ ಪ್ರದೇಶಗಳಲ್ಲಿ ವಾಹನ ಸವಾರರಿಗೆ ಸಮಸ್ಯೆಯಾಗಲಿದೆ. ಕಾಮಗಾರಿ ಆರಂಭವಾಗುವ ಮೊದಲು ವಿವರವಾದ ಪರ್ಯಾಯ ಸಂಚಾರ ಮಾರ್ಗಗಳನ್ನು ತಿಳಿಸಲಾಗುತ್ತದೆ ಎಂದು ಬಿ ಸ್ಲೈಲ್ ಹೇಳಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.