ಬೆಂಗಳೂರು : ಭಾರತದ ಸಂವಿಧಾನ ರಕ್ಷಣೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಲು ಯುವ ನಾಯಕರನ್ನು ಸಜ್ಜುಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಭಾರತೀಯ ಯುವ ಕಾಂಗ್ರೆಸ್, ರಾಷ್ಟ್ರೀಯ ಪದಾಧಿಕಾರಿಗಳ(ಎನ್‌ಒಬಿ) ‘ನೂತನ ನಾಯಕತ್ವ’ ಅಭಿಯಾನ ನಡೆಸುವುದಾಗಿ ಘೋಷಿಸಿದೆ.
ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿ ನಿಗಮ್ ಭಂಡಾರಿ, ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಮಂಜುನಾಥ್ ಮತ್ತು ಪ್ರಧಾನ ಕಾರ್ಯದರ್ಶಿ (ಸಂಘಟನೆ ಆಡಳಿತ) ಬಾಹುಬಲಿ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.
ಸಂವಿಧಾನದ ಮೌಲ್ಯಗಳನ್ನು ಅನುಸರಿಸುವ, ಎತ್ತಿ ಹಿಡಿಯುವ ಯುವ ನಾಯಕರನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಈ ಅಭಿಯಾನ ವಿನ್ಯಾಸಗೊಳಿಸಲಾಗಿದೆ. ಇದು ಕೇವಲ ಹುದ್ದೆಗಳಿಗಾಗಿ ನಡೆಯುವ ಸ್ಪರ್ಧೆಯಲ್ಲ, ಬದಲಾಗಿ ತರಬೇತಿ, ಕ್ಷೇತ್ರ ಕಾರ್ಯ ಮತ್ತು ಮೌಲ್ಯಮಾಪನದ ಒಂದು ರಚನಾತ್ಮಕ ಪ್ರಕ್ರಿಯೆ. ರಾಹುಲ್ ಗಾಂಧಿಯವರು ದೇಶಾದ್ಯಂತ ಸಂವಿಧಾನ ರಕ್ಷಣೆಗಾಗಿ ಶ್ರಮಿಸುತ್ತಿರುವಂತೆಯೇ, ಅದಕ್ಕೆ ಬದ್ಧರಾಗಿರುವ ಯುವ ಪಡೆ ನಿರ್ಮಿಸುವುದು ಈ ಅಭಿಯಾನದ ಮುಖ್ಯ ಉದ್ದೇಶ ಎಂದು ಹೇಳಿದರು.
ನಮ್ಮ ಸಂವಿಧಾನ ಪ್ರಸ್ತುತ ಅಪಾಯದಲ್ಲಿದ್ದು, ಯುವಕರು, ರೈತರು ಮತ್ತು ಕಾರ್ಮಿಕರ ಹಕ್ಕುಗಳು ದುರ್ಬಲಗೊಳ್ಳುತ್ತಿವೆ. ಇಂತಹ ಸಮಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವ ನಾಯಕರ ಬದಲಿಗೆ, ಜನರ ನಡುವೆ ನಿಂತು ಹೋರಾಡುವ ನಾಯಕರ ಅಗತ್ಯವಿದೆ. ಈ ಅಭಿಯಾನ ಎಂಟು ತಿಂಗಳ ದೀರ್ಘಾವಧಿಯ ರಾಷ್ಟ್ರೀಯ ನಾಯಕತ್ವ ಅಭಿವೃದ್ಧಿ ಯೋಜನೆಯಾಗಿದೆ. ಇದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಘಟನೆ, ನಿರ್ಮಾಣ, ಜನಸಂಘಟನಾ ಚಳವಳಿಗಳು, ಸಿದ್ಧಾಂತ ಮತ್ತು ಜನಸಮೂಹದ ನಾಯಕತ್ವದ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಆಯ್ಕೆ ಪ್ರಕ್ರಿಯೆ ಆನ್‌ಲೈನ್ ಅರ್ಜಿ ಸಲ್ಲಿಕೆ, ಸಂದರ್ಶನ, ಮೂಲ ಶಿಬಿರ, ಕ್ಷೇತ್ರ ಜವಾಬ್ದಾರಿಗಳ ನಿರ್ವಹಣೆ ಹಾಗೂ ನಾಯಕತ್ವ ಶಿಬಿರಗಳನ್ನು ಒಳಗೊಂಡಿರುತ್ತದೆ. ಅಂತಿಮವಾಗಿ ಯಶಸ್ವಿಯಾದವರನ್ನು ಸಂದರ್ಶನದ ಮೂಲಕ ರಾಷ್ಟ್ರೀಯ ಸಂಸ್ಥೆಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಈ ಅಭಿಯಾನಕ್ಕೆ ಸೇರಬಯಸುವವರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಕನಿಷ್ಠ ಮೂರು ವರ್ಷಗಳ ಸಾಮಾಜಿಕ ಅಥವಾ ರಾಜಕೀಯ ಅನುಭವ ಹೊಂದಿರಬೇಕು. ಸಾಮೂಹಿಕ ಚಳವಳಿಗಳು ಅಥವಾ ಸಂಘಟನೆ ನಿರ್ಮಾಣದಲ್ಲಿ ತೊಡಗಿಸಿಕೊಂಡಿರುವವರಿಗೆ ಆದ್ಯತೆ. ಆಸಕ್ತರು www.iyc.in/nob-introduction ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಐವೈಸಿ ತಿಳಿಸಲಾಗಿದೆ.