ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಹೊಸಹಳ್ಳಿ ಗುರುಮಠದ ಬಳಿ ನಡೆದ ಹೊಸಹಳ್ಳಿ ವೃತ್ತದಿಂದ ಹೊಸಹಳ್ಳಿಯ ಶ್ರೀ ಬಿಸಿಲು ಮಾರಮ್ಮ ದೇವಸ್ಥಾನದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಮೊದಲ ಹಂತದ ೪.೫೦ ಕೋಟಿ ರು. ಪ್ಯಾಕೇಜ್‌ನಲ್ಲಿ ನಗರದ ೧೫ ರಿಂದ ೨೦ ವಾರ್ಡ್‌ಗಳಿಗೆ ತಲಾ ೨೦ ಲಕ್ಷ ರು. ನೀಡಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ನಗರದ ಜನರ ಬಹು ಆದ್ಯತೆಯ ರೈಲ್ವೆ ಕೆಳಸೇತುವೆ ರಸ್ತೆ ೩೮ ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿದೆ. ಶೀಘ್ರದಲ್ಲೇ ಮಹಾವೀರ ವೃತ್ತದಿಂದ ಹೊಸಹಳ್ಳಿ ವೃತ್ತದವರೆಗೆ ಡೆಲ್ಟಾ- ನಗರಸಭೆ ಸಹಯೋಗದೊಂದಿಗೆ ರಸ್ತೆಯನ್ನು ಗುಣಾತ್ಮಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.ನಗರದ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯದಿಂದ ಶ್ರೀ ಚಾಮುಂಡೇಶ್ವರಿ ದೇವಾಲಯದವರೆಗೆ ೩ ಕೋಟಿ ರು. ವೆಚ್ಚದಲ್ಲಿ ರಸ್ತೆ ಕಾಮಗಾರಿ ಆರಂಭಗೊಂಡಿದೆ. ಅಲ್ಲಿಂದ ಗೌರಿಶಂಕರ ಕಲ್ಯಾಣ ಮಂಟಪದವರೆಗಿನ ೯೦೦ ಮೀಟರ್ ರಸ್ತೆಯನ್ನು ಉತ್ಕೃಷ್ಟ ದರ್ಜೆಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇಂತಹ ರಸ್ತೆಯನ್ನು ಕೇವಲ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಮಾಡಲು ಸಾಧ್ಯವಾಗುತ್ತದೆ. ಆದರೆ, ನಾವು ಜಿಲ್ಲಾ ಮಟ್ಟದಲ್ಲೂ ಮಾಡಬೇಕೆಂಬ ಹಠಕ್ಕೆ ಬಿದ್ದು ಅನುದಾನ ತಂದು ಮಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.
ಮುಖ್ಯಮಂತ್ರಿಗಳ ಅನುದಾನ, ಸಿಎನ್‌ಎನ್ ಹಾಗೂ ಕಾವೇರಿ ನೀರಾವರಿ ನಿಗಮದ ಅನುದಾನದಿಂದ ಕೋಣನಹಳ್ಳಿ ಕೆರೆ ಅಭಿವೃದ್ಧಿಪಡಿಸಿ ವಾಕಿಂಗ್ ಪಾತ್ ಮಾಡಿ ಪ್ರವಾಸಿ ತಾಣವಾಗಿ ಮಾಡಲಾಗುವುದು. ಕಲ್ಲಹಳ್ಳಿಯ ಸ್ಮಶಾನವನ್ನು ೬ ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಿ ೬ ತಿಂಗಳಲ್ಲಿ ವಿದ್ಯುತ್ ಚಿತಾಗಾರ ಅಳವಡಿಸಿ ಸಾರ್ವಜನಿಕರ ಸೇವೆಗೆ ಅರ್ಪಿಸಲಾಗುವುದು ಎಂದು ಭರವಸೆ ನೀಡಿದರು.
ನಗರದ ಅಭಿವೃದ್ಧಿ ವೇಳೆ ಸಾರ್ವಜನಿಕರು ಕಾಮಗಾರಿಗಳಿಗೆ ಅಡ್ಡಿಪಡಿಸದೆ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಸರಾಗವಾಗಿ ನಡೆಯಲು ಸಹಕಾರ ನೀಡಬೇಕು. ಕಾಮಗಾರಿಗೆ ತಡೆಯೊಡ್ಡಬಾರದು ಎಂದು ಸಲಹೆ ನೀಡಿದರು.