ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ: ಮಣ್ಣಿನ ಎತ್ತುಗಳ ಖರೀದಿ ಜೋರು

KannadaprabhaNewsNetwork |  
Published : Jul 14, 2026, 02:15 AM IST
ಬಳ್ಳಾರಿಯ ಶ್ರೀಕನಕ ದುರ್ಗಮ್ಮ ದೇವಸ್ಥಾನ ಮುಂಭಾಗದಲ್ಲಿ ಮಹಿಳೆಯರು ಮಣ್ಣಿನ ಎತ್ತುಗಳನ್ನು ಸೋಮವಾರ ಖರೀದಿಸಿದರು.  | Kannada Prabha

ಸಾರಾಂಶ

ಮಾರುಕಟ್ಟೆಗಳು ಹಾಗೂ ಕುಂಬಾರರ ಓಣಿಗಳಲ್ಲಿ ಹಬ್ಬದ ವಾತಾವರಣ ಕಂಡುಬಂದಿದೆ.

ಬಳ್ಳಾರಿ: ಕೃಷಿ ಸಂಸ್ಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವ ಮಣ್ಣೆತ್ತಿನ ಅಮವಾಸ್ಯೆ ಹಬ್ಬವನ್ನು ಸ್ವಾಗತಿಸಲು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸಡಗರದ ಸಿದ್ಧತೆಗಳು ನಡೆದಿವೆ. ಜುಲೈ 14ರಂದು ಆಚರಿಸಲಾಗುವ ಈ ವಿಶೇಷ ಹಬ್ಬದ ಅಂಗವಾಗಿ ಮಣ್ಣಿನ ಎತ್ತುಗಳ ಖರೀದಿ ಭರದಿಂದ ಸಾಗಿದ್ದು, ಮಾರುಕಟ್ಟೆಗಳು ಹಾಗೂ ಕುಂಬಾರರ ಓಣಿಗಳಲ್ಲಿ ಹಬ್ಬದ ವಾತಾವರಣ ಕಂಡುಬಂದಿದೆ.

ಕೃಷಿ ಬದುಕಿನ ಸಂಕೇತವಾಗಿ ಪರಿಗಣಿಸಲ್ಪಡುವ ಮಣ್ಣಿನ ಎತ್ತುಗಳಿಗೆ ಈ ಹಬ್ಬದಲ್ಲಿ ವಿಶೇಷ ಮಹತ್ವವಿದೆ. ವರ್ಷಪೂರ್ತಿ ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಸುಗಮವಾಗಿ ನಡೆಯಲಿ, ಸಮೃದ್ಧ ಬೆಳೆ ದೊರೆಯಲಿ ಎಂಬ ಪ್ರಾರ್ಥನೆಯೊಂದಿಗೆ ರೈತರು ಮತ್ತು ಕುಟುಂಬಸ್ಥರು ಮಣ್ಣಿನ ಎತ್ತುಗಳನ್ನು ಮನೆಗೆ ತಂದು ಪೂಜೆ ಸಲ್ಲಿಸುತ್ತಾರೆ. ಹಲವು ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯ ಇಂದಿಗೂ ತನ್ನ ವೈಶಿಷ್ಟ್ಯವನ್ನು ಉಳಿಸಿಕೊಂಡಿದ್ದು, ಗ್ರಾಮೀಣ ಭಾಗಗಳಷ್ಟೇ ಅಲ್ಲದೆ, ನಗರ ಪ್ರದೇಶಗಳಲ್ಲೂ ಭಕ್ತಿಭಾವದಿಂದ ಆಚರಿಸಲಾಗುತ್ತಿದೆ.

ಬಳ್ಳಾರಿ ನಗರದ ಬೆಂಗಳೂರು ರಸ್ತೆ, ಶ್ರೀಕನಕ ದುರ್ಗಮ್ಮ ದೇವಸ್ಥಾನದ ಮುಂಭಾಗ, ಕಾಳಮ್ಮ ಬೀದಿ, ತೇರುಬೀದಿ, ಕುಂಬಾರ ಓಣಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಣ್ಣಿನ ಎತ್ತುಗಳ ಮಾರಾಟ ಜೋರಾಗಿತ್ತು. ಕುಂಬಾರ ಸಮುದಾಯದವರು ಹಲವು ದಿನಗಳ ಶ್ರಮದಿಂದ ತಯಾರಿಸಿದ ವಿವಿಧ ಗಾತ್ರದ ಹಾಗೂ ಆಕರ್ಷಕ ಬಣ್ಣಗಳಲ್ಲಿ ಅಲಂಕರಿಸಲಾದ ಮಣ್ಣಿನ ಎತ್ತುಗಳು ಖರೀದಿದಾರರ ಗಮನ ಸೆಳೆದವು. ಹಲವರು ನೇರವಾಗಿ ಕುಂಬಾರರ ಓಣಿಗೆ ತೆರಳಿ ತಮ್ಮ ಇಷ್ಟದ ಮಾದರಿಯ ಮಣ್ಣಿನ ಎತ್ತುಗಳನ್ನು ಆಯ್ಕೆ ಮಾಡಿಕೊಂಡು ಖರೀದಿಸಿದರು.

ಮಣ್ಣಿನ ಎತ್ತುಗಳ ಜೊತೆಗೆ ಹಬ್ಬದ ಪೂಜೆಗೆ ಅಗತ್ಯವಿರುವ ಹೂವು, ಹಣ್ಣು, ಎಲೆ, ಪೂಜಾ ಸಾಮಗ್ರಿಗಳ ಖರೀದಿಯೂ ನಗರದಲ್ಲಿ ಭರದಿಂದ ನಡೆದಿತ್ತು. ಹೂವಿನ ಅಂಗಡಿಗಳು ಹಾಗೂ ಹಣ್ಣಿನ ವ್ಯಾಪಾರಿಗಳಲ್ಲೂ ಉತ್ತಮ ವ್ಯಾಪಾರ ಕಂಡುಬಂದಿದ್ದು, ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು.

ಕೃಷಿ ಪರಂಪರೆ, ಪ್ರಕೃತಿ ಆರಾಧನೆ ಹಾಗೂ ಶ್ರಮದ ಗೌರವವನ್ನು ಸಾರುವ ಮಣ್ಣೆತ್ತಿನ ಅಮವಾಸ್ಯೆ ಕೇವಲ ಒಂದು ಹಬ್ಬವಲ್ಲ; ಅದು ರೈತರ ಬದುಕಿನ ಆಶಾಭಾವನೆ ಮತ್ತು ಸಂಸ್ಕೃತಿಯ ಪ್ರತೀಕವಾಗಿದೆ. ಆಧುನಿಕ ಜೀವನಶೈಲಿಯ ನಡುವೆಯೂ ಇಂತಹ ಸಂಪ್ರದಾಯಗಳನ್ನು ಉಳಿಸಿಕೊಂಡು ಆಚರಿಸುತ್ತಿರುವುದು ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ. ಮಣ್ಣಿನ ಎತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಎಲ್ಲರ ಜೀವನದಲ್ಲಿ ಸುಖ-ಸಮೃದ್ಧಿ ನೆಲೆಸಲಿ ಎಂಬ ಪ್ರಾರ್ಥನೆಯೊಂದಿಗೆ ಜನರು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದ್ದಾರೆ. ನಗರಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಮಣ್ಣೆತ್ತಿನ ಹಬ್ಬದ ಹೆಚ್ಚಿನ ಸಡಗರ ಕಂಡು ಬರುತ್ತದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಸ್ಐಆರ್ ಪ್ರಕ್ರಿಯೆಯಲ್ಲಿ ಬಿಎಲ್ಎಗಳು ಎಚ್ಚರಿಕೆಯಿಂದ ಕೆಲಸ ಮಾಡಿ: ಸಿ.ಸಿ. ಪಾಟೀಲ
ಜುಲೈ 16ರಂದು ವೀರಭದ್ರಯ್ಯ ಮಹಾಸ್ವಾಮಿಗಳ ಪುಣ್ಯಸ್ಮರಣೆ