ಗ್ರೀನ್‌ ಹೈಡ್ರೋಜನ್‌ಗೆ ನೂತನ ನೀತಿ: ಸಚಿವ ಜಾರ್ಜ್‌

KannadaprabhaNewsNetwork |  
Published : Feb 06, 2024, 01:32 AM IST
ಸಭೆಯಲ್ಲಿ ಮಾತನಾಡುತ್ತಿರುವ ಇಂಧನ ಸಚಿವ ಕೆ.ಜೆ. ಜಾರ್ಜ್‌ | Kannada Prabha

ಸಾರಾಂಶ

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಲಿದ್ದು, ಪರ್ಯಾಯ ನೂತನ ಪರಿಹಾರವಾಗಿ ಗ್ರೀನ್‌ ಹೈಡ್ರೋಜನ್‌ ಉತ್ಪಾದನೆಗೆ ಚಿಂತನೆ ನಡೆಸಲಾಗಿದೆ. ಇದರ ಉತ್ಪಾದನೆಗೆ ಮಂಗಳೂರಿನಲ್ಲಿ ಪೂರಕ ಸೌಲಭ್ಯಗಳು ಇರುವ ಕಾರಣದಿಂದ ಇಲ್ಲೇ 300 ಕಿ.ವ್ಯಾ. ಸಾಮರ್ಥ್ಯದ ಪ್ರಾಯೋಗಿಕ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ ಎಂದು ರಾಜ್ಯ ಇಂಧನ ಸಚಿವ ಕೆ.ಜೆ.ಜಾರ್ಜ್‌ ಮಂಗಳೂರಿನಲ್ಲಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದಲ್ಲಿ ಗ್ರೀನ್‌ ಹೈಡ್ರೋಜನ್‌ ವಿದ್ಯುತ್‌ ಉತ್ಪಾದನೆಗೆ ರಾಜ್ಯದಲ್ಲಿ ನೂತನ ನೀತಿ ರೂಪಿಸಲಾಗುವುದು, ಇದರ ಪೈಲೆಟ್‌ ಪ್ರಾಜೆಕ್ಟ್‌ಗೆ ಮಂಗಳೂರನ್ನು ಆಯ್ಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

ನಗರದ ಮೆಸ್ಕಾಂ ಭವನದ ಸಭಾಂಗಣದಲ್ಲಿ ಸೋಮವಾರ ದ.ಕ. ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಮೆಸ್ಕಾಂ ಹಾಗೂ ಕೆಪಿಟಿಸಿಎಲ್‌ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಲಿದ್ದು, ಪರ್ಯಾಯ ನೂತನ ಪರಿಹಾರವಾಗಿ ಗ್ರೀನ್‌ ಹೈಡ್ರೋಜನ್‌ ಉತ್ಪಾದನೆಗೆ ಚಿಂತನೆ ನಡೆಸಲಾಗಿದೆ. ಇದರ ಉತ್ಪಾದನೆಗೆ ಮಂಗಳೂರಿನಲ್ಲಿ ಪೂರಕ ಸೌಲಭ್ಯಗಳು ಇರುವ ಕಾರಣದಿಂದ ಇಲ್ಲೇ 300 ಕಿ.ವ್ಯಾ. ಸಾಮರ್ಥ್ಯದ ಪ್ರಾಯೋಗಿಕ ಯೋಜನೆ ರೂಪಿಸಲು ಚಿಂತನೆ ನಡೆಸಲಾಗಿದೆ. ಇದಕ್ಕಾಗಿ ಮುಂದೆ ಬರುವ ಕೈಗಾರಿಕೆಗಳಿಗೆ ಸೂಕ್ತ ವ್ಯವಸ್ಥೆ ಮಾಡಬೇಕಿದೆ ಎಂದು ತಿಳಿಸಿದರು.ಕಲ್ಲಿದ್ದಲು ಆಮದಿಗೆ ಟೆಂಡರ್‌: ಕೊರೋನಾ ಕಾಲದಲ್ಲಿ ರಾಜ್ಯದಲ್ಲಿ 8-9 ಮೆ.ವ್ಯಾ. ವಿದ್ಯುತ್‌ ಬೇಡಿಕೆ ಇದ್ದರೆ ಈಗ ಅದು 16 ಮೆ.ವ್ಯಾ.ಗೆ ಏರಿಕೆಯಾಗಿದೆ. ವಿದ್ಯುತ್‌ ಬೇಡಿಕೆ ಪೂರೈಸಲು ಬೇರೆ ರಾಜ್ಯಗಳಿಂದ ಕಲ್ಲಿದ್ದಲು ಆಮದು ಮಾಡಿ ಬ್ಲೆಂಡ್‌ ಮಾಡಲು ಹಾಗೂ ರಾಜ್ಯದ ಕಲ್ಲಿದ್ದಲನ್ನು ಶುದ್ಧೀಕರಿಸಲು ಕಂಪೆನಿಗಳಿಗೆ ಟೆಂಡರ್‌ ನೀಡಲು ಉದ್ದೇಶಿಸಲಾಗಿದೆ. ಇದರಿಂದ ವಿದ್ಯುತ್‌ ಉತ್ಪಾದನೆ ಹೆಚ್ಚಲಿದೆ. ಅಲ್ಲದೆ ಬೆಂಗಳೂರು ನಗರದಲ್ಲಿ ಗೇಲ್‌ ಕಂಪೆನಿಯ ಗ್ಯಾಸ್‌ನಿಂದ ವಿದ್ಯುತ್ ಉತ್ಪಾದನೆ ಘಟಕ ಈ ತಿಂಗಳಲ್ಲಿ ಕಾರ್ಯಾರಂಭವಾಗಲಿದ್ದು, ಇನ್ನೊಂದು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಲಿದೆ ಎಂದು ಹೇಳಿದರು.ವಾರಾಹಿ, ಶರಾವತಿ ಯೋಜನೆ: ವಾರಾಹಿಯಲ್ಲಿ ಕೇವಲ 0.3 ಟಿಎಂಸಿ ನೀರು ಬಳಕೆ ಮಾಡಿ ಪಂಪ್‌ ಸ್ಟೋರೇಜ್‌ ವಿಧಾನದ ಮೂಲಕ ಹೆಚ್ಚುವರಿ 1 ಸಾವಿರ ಮೆ.ವ್ಯಾ. ವಿದ್ಯುತ್‌ ಉತ್ಪಾದನೆಗೆ ಕೇಂದ್ರ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಶರಾವತಿಯಲ್ಲಿ ಇದೇ ವಿಧಾನದಲ್ಲಿ 2 ಸಾವಿರ ಮೆ.ವ್ಯಾ. ವಿದ್ಯುತ್ ಉತ್ಪಾದನೆಗೆ ಕೆಪಿಟಿಸಿಎಲ್‌ನಿಂದ ಟೆಂಡರ್‌ ಕರೆಯಲಾಗಿದೆ ಎಂದರು.

ರೈತರ ಪಂಪ್‌ಸೆಟ್‌ ಸೋಲಾರೀಕರಣ: ರೈತರ ಪಂಪ್‌ಸೆಟ್‌ಗಳನ್ನು ಸೋಲಾರೀಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಕುಸುಮ್‌- ಬಿ ಮತ್ತು ಕುಸುಮ್‌ ಸಿ ಎಂಬ 6000 ಕೋಟಿ ರು. ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಕುಸುಮ್‌ ಬಿ ಯೋಜನೆಯಡಿ ಸೋಲಾರ್‌ ಅಳವಡಿಕೆಗೆ ಮುಂದಾಗುವ ರೈತರಿಗೆ ಕೇಂದ್ರದ ಶೇ. 80 ಸಬ್ಸಿಡಿ ಸಿಗಲಿದೆ. ಮೆಸ್ಕಾಂ ಮತ್ತು ಎಸ್ಕಾಂಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದ್ದು, ಒಟ್ಟು ಈ ಮೂಲಕ 3 ಸಾವಿರ ಮೆ.ವ್ಯಾ. ವಿದ್ಯುತ್‌ ಉತ್ಪಾದನೆ ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

33/11 ಕೆವಿ ಶಿರ್ತಾಡಿ ಉಪ ಕೇಂದ್ರದ ಕಾಮಗಾರಿ ಶೇ.50ರಷ್ಟು ಆಗಿದ್ದು, ಮೂರು ತಿಂಗಳಲ್ಲಿ ಹಾಗೂ ಕೋಟೆಕಾರ್‌ನ ಉಪಕೇಂದ್ರದ ಕಾಮಗಾರಿಯನ್ನು ಮುಂದಿನ ಆರು ತಿಂಗಳೊಳಗೆ ಮುಗಿಸುವುದಾಗಿ ಮೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದರು.

ಭೂಗತ ಕೇಬಲ್‌ಗೆ ಬೇಡಿಕೆ:

ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್‌ ಮಾತನಾಡಿ, ಮಂಗಳೂರು ನಗರದಲ್ಲಿ ವಿದ್ಯುತ್‌ ಸಂಪರ್ಕಕ್ಕೆ ನಿಗದಿತ ಭೂಗತ ಕೇಬಲ್‌ ವ್ಯವಸ್ಥೆಯನ್ನು ಮಾಡಬೇಕೆಂದು ಸಲಹೆ ನೀಡಿದರು. ಈ ಯೋಜನೆ ವೆಚ್ಚದಾಯಕವಾಗಿರುವುದರಿಂದ ಹಂತ ಹಂತವಾಗಿ ಜಾರಿಗೊಳಿಸಲು ಚಿಂತನೆ ನಡೆಸುವುದಾಗಿ ಸಚಿವ ಜಾರ್ಜ್‌ ಭರವಸೆ ನೀಡಿದರು.

ಉರ್ವಾಸ್ಟೋರ್‌ನ ಗಣಪತಿ ದೇವಸ್ಥಾನಕ್ಕೆ ಹೊಸ ರಥ ವ್ಯವಸ್ಥೆಯಾಗಿದ್ದು, ಅಲ್ಲಿ ರಥೋತ್ಸವ ನಡೆಸಲು ಪೂರಕವಾಗಿ ಆ ಪ್ರದೇಶದಲ್ಲಿ ಸುಮಾರು 1.6 ಕೋಟಿ ರು. ವೆಚ್ಚದಲ್ಲಿ ವಿದ್ಯುತ್‌ ಭೂಗತ ಕೇಬಲ್‌ ಮಾಡಲು ಕ್ರಮ ವಹಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್‌ ಮನವಿಗೆ ಸ್ಪಂದಿಸಿದ ಸಚಿವರು, ಇದಕ್ಕೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರಾದ ಅಶೋಕ್‌ ರೈ, ಡಾ. ಮಂಜುನಾಥ ಭಂಡಾರಿ, ಮಾಜಿ ಶಾಸಕ ಜೆ.ಆರ್‌. ಲೋಬೊ, ಕೆಪಿಟಿಸಿಎಲ್‌ ಎಂಡಿ ಪಂಕಜ್‌ ಕುಮಾರ್‌ ಪಾಂಡೆ, ಮೆಸ್ಕಾಂ ಎಂಡಿ ಪದ್ಮಾವತಿ, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್‌ ಇದ್ದರು.

ಶೀಘ್ರ 3 ಸಾವಿರ ಲೈನ್‌ಮೆನ್‌ ನೇಮಕರಾಜ್ಯದಲ್ಲಿ ಒಟ್ಟು 6 ಸಾವಿರ ಲೈನ್‌ಮೆನ್‌ ಅಗತ್ಯವಿದ್ದು, ಪ್ರಥಮ ಹಂತದಲ್ಲಿ ಶೀಘ್ರದಲ್ಲೇ 3 ಸಾವಿರ ಲೈನ್‌ಮೆನ್‌ ನೇಮಕಾತಿಗೆ ಕ್ರಮ ವಹಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದರು.

ದ.ಕ. ಜಿಲ್ಲೆಯಲ್ಲಿ ಲೈನ್‌ಮೆನ್‌ಗಳು ಹೊರ ಜಿಲ್ಲೆಯವರೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಕವಾಗುತ್ತಿದ್ದು ಕೆಲ ವರ್ಷಗಳಲ್ಲಿ ವರ್ಗಾವಣೆಯಾಗಿ ಹೋಗುತ್ತಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಲೈನ್‌ಮೆನ್‌ ಕೊರತೆ ಶೇ. 60ರಷ್ಟಿದೆ. ಸ್ಥಳೀಯರಿಗೆ ಆದ್ಯತೆ ನೀಡಬೇಕು. ಇದಕ್ಕಾಗಿ ಸ್ಥಳೀಯರಿಗೆ ಮೆಸ್ಕಾಂ ಸಹಕಾರದಲ್ಲಿ ತರಬೇತಿ ನೀಡಲು ತಾವು ಸಿದ್ಧ ಎಂದು ಸಭೆಯಲ್ಲಿ ಪುತ್ತೂರು ಶಾಸಕ ಅಶೋಕ್‌ ರೈ ಇಂಧನ ಸಚಿವರ ಗಮನ ಸೆಳೆದರು.

ಈ ಬಾರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನೇಮಕಾತಿ ಏಕಕಾಲದಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ. ಇದರಿಂದ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಆಯ್ಕೆಯಾಗಲು ಅವಕಾಶ ಸಿಗಲಿದೆ. ಮೆಸ್ಕಾಂ ಮೂಲಕ ಕೌಶಲ್ಯ ತರಬೇತಿಯನ್ನು ನಡೆಸಲು ಸೂಚಿಸಲಾಗುವುದು ಎಂದು ಸಚಿವ ಜಾರ್ಜ್‌ ಹೇಳಿದರು.

ವಿದ್ಯುತ್‌ ಕೊರತೆ ನೀಗಿಸಲು ಕ್ರಮರಾಜ್ಯದಲ್ಲಿ ವಿದ್ಯುತ್‌ ಕೊರತೆ ನೀಗಿಸುವ ನಿಟ್ಟಿನಲ್ಲಿ ಸಮಗ್ರ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪ್ರಸ್ತುತ ಕೊರತೆ ಇಲ್ಲ. ಇತರ ರಾಜ್ಯಗಳಿಂದ ವಿದ್ಯುತ್‌ ಖರೀದಿಗೆ ಕ್ರಮ ವಹಿಸಲಾಗಿದೆ. ಕೇಂದ್ರ ಸರ್ಕಾರದ ಗ್ರಿಡ್‌ನಿಂದಲೂ ವಿದ್ಯುತ್‌ ಖರೀದಿಸಲಾಗುತ್ತಿದೆ. ರೈತರಿಗೆ 5 ಗಂಟೆ ವಿದ್ಯುತ್‌ನ್ನು 7 ಗಂಟೆಗೆ ಮತ್ತೆ ವಿಸ್ತರಣೆ ಮಾಡಲಾಗಿದೆ ಎಂದು ಸಚಿವ ಜಾರ್ಜ್‌ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯ ಅಗತ್ಯ
ಪಂ.ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದ ಯೋಜನಾ ಸಭೆ