ವಿಶೇಷ ವರದಿ
ಕೊಡಿಯಾಲ್‌ಬೈಲ್ ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಿರುವ ಮೊಬೈಲ್ ಜಾಮರ್‌ನಿಂದಾಗಿ ಅಕ್ಕಪಕ್ಕದ ಮನೆ, ವ್ಯಾಪಾರಸ್ಥರಿಗೆ ಅಡಚಣೆ ಮುಂದುವರಿದಿದ್ದು, ಈ ಜಿಲ್ಲಾ ಕಾರಾಗೃಹವನ್ನು ನಗರದ ಹೊರವಲಯದ ಮುಡಿಪು ಸಮೀಪ ನಿರ್ಮಾಣವಾಗುತ್ತಿರುವ ಹೈ ಸೆಕ್ಯುರಿಟಿ ಕಾರಾಗೃಹಕ್ಕೆ ಸ್ಥಳಾಂತರಿಸಬೇಕೆಂಬ ಬೇಡಿಕೆ ಹೆಚ್ಚಿದೆ.
ಪ್ರಸ್ತುತ ಕಾರಾಗೃಹವು ನಗರದ ಹೃದಯ ಭಾಗದಲ್ಲಿದ್ದು, ಪಕ್ಕದಲ್ಲೇ ರಸ್ತೆ, ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಕಟ್ಟಡಗಳು, ಮನೆಗಳು ಇರುವುದರಿಂದ ಜೈಲ್ ಜ್ಯಾಮರ್‌ನಿಂದ ಎಲ್ಲರಿಗೂ ಸಮಸ್ಯೆಯಾಗುತ್ತಿದೆ. ಜೈಲನ್ನು ಹೊರವಲಯಕ್ಕೆ ಸ್ಥಳಾಂತರಿಸುವುದೇ ಸದ್ಯಕ್ಕಿರುವ ಏಕೈಕ ಮಾರ್ಗ. ಆದರೆ ಮುಡಿಪುವಿನಲ್ಲಿ ಕಾರಾಗೃಹ ನಿರ್ಮಾಣ ಕಾಮಗಾರಿ ಮಾತ್ರ ಆಮೆಗತಿಯಲ್ಲಿ ಸಾಗುತ್ತಿದೆ.ಮುಡಿಪು ಸಮೀಪ ರಾಜ್ಯದ 10ನೇ ಕಾರಾಗೃಹದ ನಿರ್ಮಾಣ ಒಟ್ಟು 200 ಕೋಟಿ ರು. ಅಂದಾಜು ವೆಚ್ಚದಲ್ಲಿ 6 ವರ್ಷಗಳ ಹಿಂದೆ ಆರಂಭವಾಗಿದ್ದು, ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಸರ್ಕಾರದಿಂದ ಹಣ ಬಿಡುಗಡೆ ವಿಳಂಬವಾಗುತ್ತಿರುವ ಕಾರಣ ಕಾಮಗಾರಿಯೂ ವಿಳಂಬವಾಗುತ್ತಿದೆ.
ಒಟ್ಟು 1,009 ಕೈದಿಗಳಿಗೆ ಸ್ಥಳಾವಕಾಶವಿರುವ ಈ ಕಾರಾಗೃಹ ನಿರ್ಮಾಣಕ್ಕೆ ಇದುವರೆಗೆ ಒಟ್ಟು 110 ಕೋಟಿ ರು. ಅನುದಾನ ಬಂದಿದೆ. ಆದರೆ ಒಳಾಂಗಣ ಕೆಲಸ, ನೆಲಹಾಸು ಇನ್ನಿತರ ಕೆಲಸಗಳು ಇನ್ನೂ ಪ್ರಾರಂಭವಾಗಿಲ್ಲ. ಕಾಂಪೌಂಡ್ ಗೋಡೆ ಪೂರ್ಣಗೊಂಡಿದ್ದು, ಉಳಿದ ಮೊದಲ ಹಂತದ ನಿರ್ಮಾಣ ಕಾರ್ಯವಷ್ಟೇ ಮುಗಿದಿದೆ.
ಮಂಗಳೂರು ಪಿಡಬ್ಲ್ಯೂಡಿ ವಿಭಾಗವು ಎರಡನೇ ಹಂತದ ಕಾಮಗಾರಿಗೆ 195 ಕೋಟಿ ರು. ಅಂದಾಜು ಪಟ್ಟಿ ಸಲ್ಲಿಸಿದೆ. ಅನುದಾನ ಲಭ್ಯತೆಯ ಆಧಾರದ ಮೇಲೆ ಉಳಿದ ಕೆಲಸಗಳು ನಡೆಯಲಿವೆ, ಅದಾದ ಬಳಿಕವಷ್ಟೇ ಜೈಲನ್ನು ನಗರದಿಂದ ಅಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಪಿಡಬ್ಲ್ಯೂಡಿ ಮೂಲಗಳು ತಿಳಿಸಿವೆ.