ಮಂಗಳೂರು : ತುಂಬೆ ಹೆಲ್ತ್‌ಕೇರ್ ಗ್ರೂಪ್ ತನ್ನ ವಿಸ್ತರಣೆ ಭಾಗವಾಗಿ ದುಬೈ, ಉಮ್ ಅಲ್ ಕ್ವೈನ್ ಮತ್ತು ಫುಜೈರಾಗಳಲ್ಲಿ ಹೊಸ ಪುನರ್ವಸತಿ ಕೇಂದ್ರಗಳನ್ನು ಪ್ರಾರಂಭಿಸಲಿದೆ. ಇದು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವುದರ ಜೊತೆಗೆ, ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜಿನ ವಿದ್ಯಾರ್ಥಿಗಳ ತರಬೇತಿಗೂ ಅನುಕೂಲವಾಗಲಿದೆ ಎಂದು ತುಂಬೆ ಗ್ರೂಪ್‌ನ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದಿನ್ ಹೇಳಿದರು.ಅಜ್ಮಾನ್‌ನ ಅಲ್ ಜುಫ್‌ರ್ನಲ್ಲಿರುವ ತುಂಬೆ ಮೆಡಿಸಿಟಿಯಲ್ಲಿ 6ನೇ ಅಂತಾರಾಷ್ಟ್ರೀಯ ವಾರ್ಷಿಕ ಪುನರ್ವಸತಿ ಅಭ್ಯಾಸ ಮತ್ತು ವೈದ್ಯಕೀಯ ನಾವೀನ್ಯತಾ ಪ್ರಶಸ್ತಿ ಪ್ರದಾನ ಹಾಗೂ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಜ್ಮಾನ್ ಆಡಳಿತಗಾರರ ಕಾರ್ಯಾಲಯದ ಅಧ್ಯಕ್ಷ ಎಚ್.ಇ.ಶೇಖ್ ಡಾ.ಮಜೀದ್ ಬಿನ್ ಸಯೀದ್ ಅಲ್ ನುಐಮಿ ಉಪಸ್ಥಿತಿಯಲ್ಲಿ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (ಜಿಎಂಯು)ಯ ಹೆಲ್ತ್ ಸೈನ್ಸಸ್ ಕಾಲೇಜು ಮತ್ತು ತುಂಬೆ ಫಿಸಿಕಲ್ ಥೆರಪಿ ಆ್ಯಂಡ್ ರಿಹ್ಯಾಬಿಲಿಟೇಶನ್ ಹಾಸ್ಪಿಟಲ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಈ ಸಮ್ಮೇಳನದಲ್ಲಿ ಯುಎಇ, ಜಿಸಿಸಿ ಮತ್ತು ಇತರ ದೇಶಗಳ ಭೌತಚಿಕಿತ್ಸಕರು, ಮೂಳೆ ಹಾಗೂ ನರರೋಗ ತಜ್ಞರು, ಉಪಾಧಿ ಚಿಕಿತ್ಸಕರು, ವಾಕ್ ಚಿಕಿತ್ಸಕರು, ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ತುಂಬೆ ಗ್ರೂಪ್ ಹೆಲ್ತ್‌ಕೇರ್ ವಿಭಾಗದ ಉಪಾಧ್ಯಕ್ಷ ಅಕ್ಬರ್ ಮೊಯ್ದಿನ್ ತುಂಬೆ ಮಾತನಾಡಿ, ರೋಗಿಗಳ ಹೆಚ್ಚಿನ ಬೇಡಿಕೆ ಪೂರೈಸಲು ಆಸ್ಪತ್ರೆಯ ಚಿಕಿತ್ಸಾ ಸಾಮರ್ಥ್ಯವನ್ನು ಶೇ. 30ರಷ್ಟುಹೆಚ್ಚಿಸಲಾಗುತ್ತಿದೆ. ಚಿಕಿತ್ಸಾ ಪ್ರದೇಶಗಳನ್ನು 27ರಿಂದ 39ಕ್ಕೆ ಹಾಗೂ ಬೆಡ್‌ಗಳ ಸಂಖ್ಯೆಯನ್ನು 36 ರಿಂದ 48ಕ್ಕೆ ಏರಿಸಲಾಗುತ್ತಿದೆ. ಯುಎಇಯಲ್ಲೇ ಮೊದಲ ಬಾರಿಗೆ ರೋಬೋಟಿಕ್ ತಂತ್ರಜ್ಞಾನ ರೋಗಿಗಳು ಬೇಗನೆ ಚೇತರಿಸಿಕೊಳ್ಳಲು ನೆರವಾಗುವ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗುತ್ತಿದೆ ಎಂದರು.