ಕನ್ನಡಪ್ರಭ ವಾರ್ತೆ ಹೊಸಪೇಟೆ
ಒಳಮೀಸಲಾತಿ ಜಾರಿ ಮಾಡುವ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೊಂದು ಸಮೀಕ್ಷೆಗೆ ಶಿಫಾರಸ್ಸು ಮಾಡಿರುವುದು ಕಾಲಹರಣ ತಂತ್ರ. ಇನ್ನೂ ನಾವು ಇದನ್ನು ಸಹಿಸುವುದಿಲ್ಲ ಎಂದು ದಲಿತ ಮುಖಂಡ ಬಲ್ಲಾಹುಣ್ಸಿ ರಾಮಣ್ಣ ಹೇಳಿದರು.ನಗರದ ಪತ್ರಿಕಾಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಒಳಮೀಸಲಾತಿ ಜಾರಿ ಮಾಡುವ ಅಧಿಕಾರ ರಾಜ್ಯಗಳಿಗೆ ದಕ್ಕಿದ ನಂತರವೂ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅತ್ಯಂತ ನಿಧಾನಗತಿಯಲ್ಲಿ ತೆವಳುತ್ತಿದೆ. ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ಹರ್ಯಾಣ, ತೆಲಂಗಾಣ, ಆಂಧ್ರಪ್ರದೇಶ ಸರ್ಕಾರಗಳು ಒಳಮೀಸಲಾತಿ ಜಾರಿಗೊಳಿಸಿಡಿವೆ. ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರ ನೆಪ ಹುಡುಕುತ್ತಾ ಮೀನಾಮೇಷ ಎಣಿಸುತ್ತಿದೆ ಎಂದು ದೂರಿದರು.ಮಾದಿಗ ಸಮುದಾಯ ಆಯೋಗ ರಚಿಸಲು ಬೇಡಿಕೆ ಇಟ್ಟಿರಲಿಲ್ಲ. ಇದಕ್ಕೂ ಕಾಲಹರಣ ಮಾಡಲಾಯಿತು. ಕಳೆದ ೩೦ ವರ್ಷದಿಂದ ಒಳ ಮೀಸಲಾತಿ ಹೋರಾಟವನ್ನು ವಿರೋಧಿಸುತ್ತಿದ್ದ ಶಕ್ತಿಗಳೇ ಸರ್ಕಾರದ ಮೇಲೆ ಒತ್ತಡ ಹೇರಿ ಆಯೋಗ ರಚನೆ ಮಾಡಿಸಿದವು. ಪ್ರಮುಖ ನಾಯಕರೇ ಇದಕ್ಕೆ ಕಾರಣ. ಈಗ ಹೊಸ ಸಮೀಕ್ಷೆ ಆಗಬೇಕೆಂಬ ಬೇಡಿಕೆ ಬಂದಿದೆ. ಇದು ಕಾಲಹರಣ ಮಾಡುವ ತಂತ್ರವಾಗಿದೆ. ಈ ನಿಧಾನ ದ್ರೋಹವನ್ನು ಮಾದಿಗ ಸಮಾಜ ಒಪ್ಪುವುದಿಲ್ಲ. ಮಧ್ಯಂತರ ವರದಿಯಲ್ಲಿ ಮಾದಿಗ ಸಮಾಜದ ಶೇ. ೬ ರ ಪ್ರತ್ಯೇಕ ಮೀಸಲಾತಿ ಜಾರಿ ಮಾಡಿ ಮತ್ತೆ ಸಮೀಕ್ಷೆ ಮಾಡಿ ಎಂಬುದು ನಮ್ಮ ಬೇಡಿಕೆಯಾಗಿತ್ತು. ಆದರೆ, ಆಯೋಗ ವರ್ಗೀಕರಣದ ವಿಷಯ ಬದಿಗಿಟ್ಟು, ಹಸಿದು ಕಂಗಾಲಾಗಿರುವ ಮಾದಿಗ ಸಮಾಜಕ್ಕೆ ಮತ್ತೊಂದು ಸಮೀಕ್ಷೆಯ ಶಿಫಾರಸ್ಸು ಮಾಡಿರುವುದು ಅನ್ಯಾಯವಾಗಿದೆ ಎಂದರು.
ಮಾದಿಗರ ಪಾಲಿನ ಶೇ. ೬ ರ ಪ್ರತ್ಯೇಕ ಮೀಸಲಾತಿಯನ್ನು ತಕ್ಷಣ ಜಾರಿ ಮಾಡಲಿ. ಎಲ್ಲ ೧೦೧ ಪರಿಶಿಷ್ಟ ಜಾತಿಗಳಿಗೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆ ಮಾಡಿರುವ ಮಾಧುಸ್ವಾಮಿ ವರದಿಯನ್ನು ಜಾರಿಮಾಡಲಿ ಅಥವಾ ಸದಾಶಿವ ಆಯೋಗದ ದತ್ತಾಂಶ ಬಳಸಿ ಹೊಸ ಆದೇಶ ಮಾಡಲಿ, ಇದ್ಯಾವುದನ್ನು ಮಾಡದೇ ಕೇವಲ ಸಮೀಕ್ಷೆ ಮಾಡುವ ಯೋಜನೆಯ ಹಿಂದೆ ಕಾಲಹರಣದ ಉದ್ದೇಶ ಬಿಟ್ಟರೆ ಬೇರೇನಿಲ್ಲ. ಒಳಮೀಸಲಾತಿಯ ಬಗ್ಗೆ ಸರ್ಕಾರ ಬದ್ಧತೆ ತೋರಿಸಬೇಕು ಎಂದು ಆಗ್ರಹಿಸಿದರು.ಬಂಜಾರ ಸಮುದಾಯದ ರಾಜು ಕುಡಚಿ, ಉಮೇಶ್ ಜಾಧವ್ ಮತ್ತು ಬೋವಿ ಸಮುದಾಯದ ಮುಖಂಡರೇ ಒಳಮೀಸಲಾತಿ ಪರವಾಗಿದ್ದಾರೆ. ಆದರೆ, ಸರ್ಕಾರದ ಯಾವುದೇ ಸಚಿವ, ಶಾಸಕರು ಈ ಬಗ್ಗೆ ಮಾತನಾಡದಿರುವುದು ದುರಂತ. ಇನ್ನೂ ಮುಂದೂಡುವ ಪ್ರಯತ್ನ ಮಾಡಿದರೆ ಬೃಹತ್ ಹೋರಾಟ ಅನಿವಾರ್ಯವಾಗಲಿದೆ ಎಂದರು.
ದಲಿತ ಮುಖಂಡರಾದ ದುರುಗೇಶ್, ಶೇಷು, ಜಗನ್ನಾಥ, ಜಿ.ಕೊಲ್ಹಾಪುರಿ, ಬಿ.ಶೇಕ್ಷಾವಲಿ, ಕಣಿವೆಹಳ್ಳಿ ಮಂಜುನಾಥ ಇದ್ದರು.