ಶೀಘ್ರ ವಾರ್ತಾ ಇಲಾಖೆಗೆ ಬರಲಿದೆ ನೂತನ ವಾಹನ: ಸಚಿವ ಡಿ.ಸುಧಾಕರ್

KannadaprabhaNewsNetwork | Published : Jun 29, 2025 1:32 AM

ಚಿತ್ರದುರ್ಗದ ಪತ್ರಕರ್ತರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ 27.5 ಲಕ್ಷ ರು. ವೆಚ್ಚದ ನೂತನ ವಾಹನ ಖರೀದಿಗೆ ಟೆಂಡರ್ ಕರೆಯಲಾಗಿದ್ದು ಶೀಘ್ರದಲ್ಲೇ ವಾರ್ತಾ ಇಲಾಖೆಗೆ ಹಸ್ತಾಂತರವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗದ ಪತ್ರಕರ್ತರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ 27.5 ಲಕ್ಷ ರು. ವೆಚ್ಚದ ನೂತನ ವಾಹನ ಖರೀದಿಗೆ ಟೆಂಡರ್ ಕರೆಯಲಾಗಿದ್ದು ಶೀಘ್ರದಲ್ಲೇ ವಾರ್ತಾ ಇಲಾಖೆಗೆ ಹಸ್ತಾಂತರವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಹೈಟೆಕ್ ಮಾದರಿಯಲ್ಲಿ ನವೀಕರಿಸಲಾದ ಚಿತ್ರದುರ್ಗ ಪತ್ರಿಕಾ ಸಭಾ ಭವನವ ಶನಿವಾರ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ 3 ದಶಕಗಳಿಂದ ರಾಜಕೀಯದಲ್ಲಿದ್ದೇನೆ. ಜನಪ್ರತಿನಿಧಿಗಳು, ಪತ್ರಕರ್ತರಿಗೆ ಸಂಘರ್ಷವಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಗಮನ ಸೆಳೆಯುವಲ್ಲೂ ಮುಂಚೂಣಿಯಲ್ಲಿದ್ದಾರೆ ಎಂದರು.

ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರದಿಂದ ಪತ್ರಕರ್ತರ ಸಂಘಕ್ಕೆ 45 ಲಕ್ಷ ರು. ಅನುದಾನ ಬಿಡುಗಡೆಯಾಗಿದ್ದು, ನವೀಕೃತಗೊಂಡಿರುವುದು ಉತ್ತಮ ಬೆಳವಣಿಗೆ. ಪತ್ರಕರ್ತರಿಗೆ ನಿವೇಶನ ಮಂಜೂರು ಮಾಡಲು ತೊಡಕುಗಳಿದ್ದರೆ ಬಗೆಹರಿಸಿ, ಕಾನೂನಾತ್ಮಕವಾಗಿ ನೀಡಲು ಜಿಲ್ಲಾ ಸಚಿವರು, ಡಿಸಿ, ಎಡಿಸಿ ಕ್ರಮವಹಿಸಲಿ ಎಂದು ಒತ್ತಾಯಿಸಿದರು.

ಭವನಕ್ಕೆ ಡಾ.ಬಿ.ಆರ್ ಅಂಬೇಡ್ಕರ್ ಹೆಸರಿಟ್ಟಿರುವುದು ಸ್ವಾಗತಾರ್ಹ. ಸ್ವತಃ ಪತ್ರಕರ್ತರೂ ಆಗಿದ್ದ ಅವರು 1920ರಲ್ಲಿ ಮೂಕನಾಯಕ, 1927ರಲ್ಲಿ ಬಹಿಷ್ಕೃತ ಭಾರತ, 1928ರಲ್ಲಿ ಸಮತಾ, 1930ರಲ್ಲಿ ಜನತಾ, 1956 ಪ್ರಬುದ್ಧ ಭಾರತ ಹೀಗೆ ಸಾಮಾಜಿಕ ಆಂದೋಲನದ ಬಲವರ್ಧನೆಗಾಗಿ ಹೊರತಂದ ಐದು ಪತ್ರಿಕೆಗಳಾಗಿವೆ. ಸಮಾಜ ಮುನ್ನಡೆಸುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದಿದೆ ಎಂದರು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ವರ್ಷದ ಹಿಂದೆ ಈ ಭವನದಲ್ಲಿ ಮೊದಲ ಬಾರಿ ಮಾತನಾಡಿದ ವೇಳೆ ನನಗೆ ಸರಿಯಾಗಿ ಕೇಳಿಸುತ್ತಿರಲಿಲ್ಲ. ಸಂಘದವರ ಒತ್ತಾಯದ ಮೇರೆಗೆ ಸಚಿವರ ಗಮನ ಸೆಳೆದು, ಜಿಲ್ಲಾ ಖನಿಜ ಪ್ರತಿಷ್ಠಾನದಿಂದ 25ಲಕ್ಷ ರು. ಅನುದಾನ ಬಿಡುಗಡೆಗೊಳಿಸಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಪತ್ರಕರ್ತರಿಗೆ ಮುಖ್ಯವಾಗಿ ಸ್ಪಷ್ಟವಾಗಿ ಮಾತುಗಳು ಕೇಳಬೇಕು. ಅಲ್ಲದೆ, ಫೋಟೊಗಳಿಗೆ ಯಾವ ರೀತಿಯಲ್ಲೂ ನೆರಳು ಬೀಳಬಾರದು. ಅದಕ್ಕಾಗಿ ಪಿವಿಎಸ್ ಥಿಯೇಟರ್ ಮಾದರಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಅಕಾಸ್ಟಿಕ್ ಆಡಿಯೋ ಥಿಯೇಟರ್‌ನಂತೆ ಅತ್ಯದ್ಭುತವಾಗಿ ನಿರ್ಮಾಣವಾಗಿದೆ. ನಿರ್ಮಿತಿ ಕೇಂದ್ರದವರು ಯಾವುದಾದರೂ ಕಾಮಗಾರಿ ಕೈಗೊಂಡರೆ ಹಾಳಾಗಲಿದೆ ಎಂಬ ಅಪಖ್ಯಾತಿ ಸಾಮಾನ್ಯ. ಆದರೆ, ಈ ಭವನವನ್ನು ಗುಣಮಟ್ಟದಿಂದ ನಿರ್ಮಿಸಿದ್ದಾರೆ. ಸಂಘದ ಈಗಿನ ಪದಾಧಿಕಾರಿಗಳ ಅವಧಿ ಕೆಲವೇ ತಿಂಗಳುಗಳಲ್ಲಿ ಮುಗಿಯಲಿದೆ. ಮುಂದೆ ಯಾರೇ ಬಂದರೂ ಅಭಿವೃದ್ಧಿ ಅಷ್ಟೇ ಮುಖ್ಯವಾಗಲಿ ಎಂದು ಸಲಹೆ ನೀಡಿದರು.

ಇದೇ ವೇಳೆ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್.ಅಹೋಬಳಪತಿ ಅವರನ್ನು ಸನ್ಮಾನಿಸಲಾಯಿತು.

ಎಡಿಸಿ ಬಿ.ಟಿ ಕುಮಾರಸ್ವಾಮಿ, ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ,ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂ ರಾವ್ ಇದ್ದರು. ಡಿವೈಎಸ್ಪಿ ದಿನಕರ್, ಕೂಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶಿವಣ್ಣ, ಕಾರ್ಯದರ್ಶಿಗಳಾದ ನಾಗರಾಜ್ ಕಟ್ಟೆ, ವಿ.ವೀರೇಶ್ (ಅಪ್ಪು), ರಾಷ್ಟ್ರೀಯ ಮಂಡಳಿ ಸದಸ್ಯ ಸಿ.ಹೆಂಜಾರಪ್ಪ ಇತರರು ಇದ್ದರು. ಸಂಘದ ಜಿಲ್ಲಾ ಖಜಾಂಚಿ ಡಿ. ಕುಮಾರಸ್ವಾಮಿ ಸ್ವಾಗತಿಸಿದರು. ಕಾರ್ಯದರ್ಶಿ ವಿನಾಯಕ ಬಿ.ಎಸ್ ತೊಡರನಾಳ್ ನಿರೂಪಿಸಿದರು. ರವಿ ಉಗ್ರಾಣ ವಂದಿಸಿದರು.