ಹಾವೇರಿ: ವಿಬಿಜಿ ರಾಮ್‌ಜಿ ಯೋಜನೆಯಲ್ಲಿನ ಹಲವು ನಿಯಮಗಳನ್ನು ಪರಿಷ್ಕರಿಸುವಂತೆ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಿದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಪ್ರಸ್ತುತ ಪರಿಸ್ಥಿತಿಯಲ್ಲಿ ಹೊಸ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು ಕಷ್ಟಕರವಾಗಲಿದೆ ಎಂದು ವಿಧಾನಸಭಾಧ್ಯಕ್ಷ ಹಾಗೂ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ವಿಬಿಜಿ ರಾಮ್‌ಜಿ ಯೋಜನೆ ರಾಜ್ಯ ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಉಂಟುಮಾಡಲಿದ್ದು, ಯೋಜನೆಯಲ್ಲಿನ ಹಲವು ಷರತ್ತುಗಳು ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿವೆ. ಈ ಯೋಜನೆಯಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರ್ಥಿಕ ಪಾಲುದಾರಿಕೆಯನ್ನು 60:40 ಅನುಪಾತದಲ್ಲಿ ನಿಗದಿಪಡಿಸಿರುವುದರಿಂದ ರಾಜ್ಯದ ಮೇಲಿನ ವೆಚ್ಚದ ಭಾರ ಹೆಚ್ಚಾಗಲಿದೆ. ಆದರೂ ಈಗ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಿದೆ ಎಂದರು.
ಸಭೆಯಲ್ಲಿ ಮಾಹಿತಿ ನೀಡಿದ ನರೇಗಾ ಯೋಜನಾಧಿಕಾರಿ, ಜು. 1ರಿಂದ ರಾಜ್ಯದಲ್ಲಿ ವಿಬಿಜಿ ರಾಮ್‌ಜಿ ಯೋಜನೆ ಜಾರಿಯಾಗಲಿದ್ದು, ಇದರೊಂದಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ)ಯಲ್ಲಿ ಇದ್ದ ಕೆಲವು ನಿಯಮಗಳಲ್ಲಿ ಬದಲಾವಣೆ ಆಗಲಿವೆ ಎಂದು ತಿಳಿಸಿದರು.ಹೊಸ ಯೋಜನೆಯಡಿ ಬಿತ್ತನೆ ಮತ್ತು ಕೊಯ್ಲು ಅವಧಿಯಲ್ಲಿ ತಲಾ 30 ದಿನಗಳಂತೆ ಒಟ್ಟು 60 ದಿನಗಳ ಕಾಲ ಕಾರ್ಮಿಕರಿಗೆ ಕೆಲಸ ನೀಡುವುದನ್ನು ಸ್ಥಗಿತಗೊಳಿಸಲಾಗುತ್ತದೆ. ಇದು ವರೆಗೆ ನರೇಗಾ ಯೋಜನೆಯಡಿ ಕಾರ್ಮಿಕರು ವರ್ಷದ ಯಾವುದೇ ದಿನ ಕೆಲಸಕ್ಕೆ ಬೇಡಿಕೆ ಸಲ್ಲಿಸಿ ಉದ್ಯೋಗ ಪಡೆಯಬಹುದಾಗಿತ್ತು ಎಂದು ವಿವರಿಸಿದರು.
ಕುಡಿಯುವ ನೀರಿನ ಸಮಸ್ಯೆ ತೀವ್ರವಲ್ಲ
ಇದಕ್ಕೆ ಪ್ರತಿಕ್ರಿಯಿಸಿದ ರುದ್ರಪ್ಪ ಲಮಾಣಿ, ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಹಾವೇರಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟೊಂದು ಗಂಭೀರವಾಗಿ ಕಂಡುಬಂದಿಲ್ಲ. ಆದರೆ, ತುರ್ತು ಅಗತ್ಯವಿರುವ ಪ್ರದೇಶಗಳ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಲೂಕಿನಲ್ಲಿ ಒಟ್ಟು 260 ಅಂಗನವಾಡಿ ಕೇಂದ್ರಗಳಿದ್ದು, ಅವುಗಳಲ್ಲಿ 55 ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು. ನಗರ ಪ್ರದೇಶದ 24 ಹಾಗೂ ಗ್ರಾಮೀಣ ಭಾಗದ 31 ಕೇಂದ್ರಗಳು ಸ್ವಂತ ಕಟ್ಟಡವಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದರು.
ಫಲಾನುಭವಿಗಳು ಯಾರೆಂಬುದೇ ಗೊತ್ತಿಲ್ಲ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಎಂ.ಎಂ. ಮೈದೂರ, ಯಾವ ಯಾವ ಫಲಾನುಭವಿಗಳಿಗೆ ಹಣ ಹಾಕಿದೆ ಎಂಬ ಮಾಹಿತಿ ಕೊಡಿ ಎಂದರು. ಆಗ ಅಧಿಕಾರಿಗಳು ನಮ್ಮಲ್ಲಿ ಯುವನಿಧಿ ಫಲಾನುಭವಿಗಳ ಪಟ್ಟಿ ಇಲ್ಲ, ನಾವೂ ರಾಜ್ಯ ಗ್ಯಾರಂಟಿ ಸಮಿತಿಗೆ ಫಲಾನುಭವಿ ಪಟ್ಟಿ ಒದಗಿಸುವಂತೆ ಕೋರಿದ್ದು, ಇದುವರೆಗೂ ಕೊಟ್ಟಿಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಮೋಹನ ದಂಡಿನ, ತಹಸೀಲ್ದಾರ್ ಶರಣಮ್ಮ ಕೆ., ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗೆಣ್ಣಿ, ಸಭಾಧ್ಯಕ್ಷರ ಆಪ್ತಕಾರ್ಯದರ್ಶಿ ಡಾ. ಶ್ರೀಪಾದ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪರಮೇಶ್ವರ ಹುಬ್ಬಳ್ಳಿ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.